ಲಿಂಗಸುಗೂರು: ಪಟ್ಟಣದ ಕರಡಕಲ್ ಹೊರವಲಯದ ಸರ್ವೇ ನಂ. 411 ರಲ್ಲಿ ಮಂಜೂರಾದ ಜಾಗದಲ್ಲೇ 50 ಬೆಡ್‌ಗಳ ನೂತನ ಆಸ್ಪತ್ರೆ ಕಟ್ಟಡ ನಿರ್ಮಿಸಬೇಕು ಹಾಗೂ ನಿರ್ಮಾಣ ಪೂರ್ಣಗೊಂಡಿರುವ ತಾಯಿ-ಮಕ್ಕಳ ಆಸ್ಪತ್ರೆಯನ್ನು ಕೂಡಲೇ ಉದ್ಘಾಟನೆ ಮಾಡಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ಲಿಂಗಸುಗೂರು ಸಹಾಯಕ ಆಯುಕ್ತರ ಮುಖಾಂತರ ರಾಯಚೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕು ಆಸ್ಪತ್ರೆಯ ಆವರಣದಲ್ಲಿ ಹೊಸ ಕಟ್ಟಡ ನಿರ್ಮಿಸುವ ಯೋಚನೆ ಇದ್ದರೆ ಅದು ಆಸ್ಪತ್ರೆಯ ದಿನನಿತ್ಯದ ಕಾರ್ಯಚಟುವಟಿಕೆಗಳಿಗೆ ತೊಂದರೆಯಾಗುತ್ತದೆ. ಅಲ್ಲದೆ ಈಗಾಗಲೇ ಇರುವ 48 ಹಾಸಿಗೆಗಳ ಕಟ್ಟಡ ಹಾಗೂ ಕ್ಯಾಂಟಿನ್ ಕಟ್ಟಡವನ್ನು ತೆರವುಗೊಳಿಸುವುದರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆದ್ದರಿಂದ ಸರ್ವೇ ನಂ. 411 ರಲ್ಲಿ ಮಂಜೂರಾದ ಜಾಗದಲ್ಲೇ 50 ಬೆಡ್‌ಗಳ ಆಸ್ಪತ್ರೆ ಕಟ್ಟಡ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಅದೇ ಸ್ಥಳದ ಪಕ್ಕದಲ್ಲಿರುವ ತಾಯಿ-ಮಕ್ಕಳ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡು ಹಲವು ತಿಂಗಳು ಕಳೆದರೂ ಉದ್ಘಾಟನೆ ಆಗದಿರುವುದರಿಂದ ಸ್ಥಳದಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಕೂಡಲೇ ಆಸ್ಪತ್ರೆಗೆ ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ಸೇವೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಾಂಭವ ಯುವ ಸೇನೆ ತಾಲೂಕು ಅಧ್ಯಕ್ಷ ಶಶಿಕುಮಾರ್, ಕರ್ನಾಟಕ ಬಹುಜನ ಚಳುವಳಿ ತಾಲೂಕು ಅಧ್ಯಕ್ಷ ಅಮರೇಶ್ ಗೋಸ್ಲೆ, ಎಐಬಿಎಸ್‌ಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ ಅಮರೇಶ್ ಡಿ. ಪವಾರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ಯಲ್ಲಾಲಿಂಗ ಕುಣೆಕೆಲ್ಲೂರು, ದಲಿತ ಸೇನೆ ತಾಲೂಕು ಅಧ್ಯಕ್ಷ ಬಸವರಾಜ್ ಗೋಸ್ಲೆ ಹಾಗೂ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸರ್ಜಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
