ಬೆಂಗಳೂರು : ಪಕ್ಷವನ್ನು ಬುಡಮಟ್ಟದಿಂದ ಸದೃಢಗೊಳಿಸುವ ಹಾಗೂ ತಳಮಟ್ಟದ ಕಾರ್ಯಕರ್ತರಿಗೆ ಮನ್ನಣೆ ನೀಡುವ ಮಹತ್ವಾಕಾಂಕ್ಷೆಯ ‘ಸಂಘಟನ್ ಸೃಜನ್’ ಅಭಿಯಾನಕ್ಕೆ ರಾಜ್ಯದಲ್ಲಿ ಚಾಲನೆ ದೊರೆತಿದ್ದು, ಬೆಂಗಳೂರು ಕೇಂದ್ರ ಜಿಲ್ಲೆಯಲ್ಲಿ ವೀಕ್ಷಕರ ನೇತೃತ್ವದಲ್ಲಿ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ಚುರುಕುಗೊಂಡಿದೆ. ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಈ ಅಭಿಯಾನದ ಸಂಪೂರ್ಣ ರೂಪುರೇಷೆಗಳನ್ನು ಹಂಚಿಕೊಂಡಿದ್ದಾರೆ.
🔹 ಬಲವಂತದ ಆಯ್ಕೆಗಿಲ್ಲ ಅವಕಾಶ, ನಿಷ್ಪಕ್ಷಪಾತ ಪ್ರಕ್ರಿಯೆ: ಶರತ್ ಬಚ್ಚೇಗೌಡ
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಿಯೋನಿಕ್ಸ್ ಅಧ್ಯಕ್ಷರಾದ ಶರತ್ ಬಚ್ಚೇಗೌಡ, “ಅಹಮದಾಬಾದ್ನಲ್ಲಿ ನಡೆದ ಪಕ್ಷದ ಮಹಾಸಭೆಯ ತೀರ್ಮಾನದಂತೆ ದೇಶಾದ್ಯಂತ ‘ಸಂಘಟನ್ ಸೃಜನ್’ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಇದು ನಮ್ಮ ನಾಯಕ ರಾಹುಲ್ ಗಾಂಧಿಯವರ ಕನಸಿನೋಜನೆಯಾಗಿದ್ದು, ಪಕ್ಷವನ್ನು ತಳಮಟ್ಟದಿಂದ ಕಟ್ಟುವುದು ಇದರ ಮುಖ್ಯ ಉದ್ದೇಶವಾಗಿದೆ” ಎಂದರು.
ಪ್ರತಿಯೊಂದು ಜಿಲ್ಲೆಗೂ ತಟಸ್ಥ ವೀಕ್ಷಕರನ್ನು ಕಳುಹಿಸಲಾಗುತ್ತಿದ್ದು, ಯಾವುದೇ ಬಾಹ್ಯ ಒತ್ತಡಗಳಿಗೆ ಮಣಿಯದೆ ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಮಾತ್ರ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕೇವಲ ಜಿಲ್ಲಾಧ್ಯಕ್ಷರಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಈ ಅಭಿಯಾನವನ್ನು ಬ್ಲಾಕ್ ಹಾಗೂ ಬೂತ್ ಮಟ್ಟದವರೆಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು. 2028ರ ವಿಧಾನಸಭಾ ಚುನಾವಣೆ ಹಾಗೂ ಮುಂಬರುವ ಜಿಬಿಎ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷವನ್ನು ಈಗಿನಿಂದಲೇ ಸಜ್ಜುಗೊಳಿಸಲಾಗುತ್ತಿದೆ ಎಂದರು.
🔹 ಆಗಸ್ಟ್ 18ರೊಳಗೆ ಅಭಿಪ್ರಾಯ ಸಂಗ್ರಹ ಪೂರ್ಣ: ಜ್ಯೋತಿ ಕುಮಾರ್
ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಜ್ಯೋತಿ ಕುಮಾರ್ ಮಾತನಾಡಿ, “ಪ್ರಸ್ತುತ ವೇಳಾಪಟ್ಟಿಯಂತೆ ಆಗಸ್ಟ್ 18ರೊಳಗೆ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ತಿಂಗಳ ಅಂತ್ಯ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಹೊಸ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ನಡೆಯುವ ಸಾಧ್ಯತೆಯಿದೆ” ಎಂದರು.
ಶುಕ್ರವಾರದಿಂದಲೇ ಶಾಂತಿನಗರ, ಶಿವಾಜಿನಗರ ಹಾಗೂ ಚಿಕ್ಕಪೇಟೆ ಕ್ಷೇತ್ರಗಳಲ್ಲಿ ಪ್ರವಾಸ ಆರಂಭಗೊಳ್ಳಲಿದ್ದು, ಹಿರಿಯ-ಕಿರಿಯರೆಂಬ ಭೇದವಿಲ್ಲದೆ ಎಲ್ಲರ ಅಭಿಪ್ರಾಯ ಪಡೆಯಲಾಗುವುದು. ವೀಕ್ಷಕರು ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ (ಮಹಿಳೆಯರು, ಎಸ್ಸಿ, ಎಸ್ಟಿ, ಒಬಿಸಿ ಮತ್ತು ಯುವಕರಿಗೆ ಅವಕಾಶ) ಆರು ಸದಸ್ಯರ ಪ್ಯಾನಲ್ ಸಿದ್ಧಪಡಿಸಿ ಎಐಸಿಸಿಗೆ ಕಳುಹಿಸಿಕೊಡಲಾಗುವುದು ಎಂದು ವಿವರಿಸಿದರು.
🔹 ಸಂಘಟನೆ ಬಲಪಡಿಸಲು ಎಲ್ಲರ ಸಹಕಾರ ಅಗತ್ಯ: ನಂದಕುಮಾರ್
ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ನಂದಕುಮಾರ್ ಮಾತನಾಡಿ, ರಾಷ್ಟ್ರವ್ಯಾಪಿ ಘೋಷಿಸಲಾಗಿರುವ ಸಂಘಟನಾ ವರ್ಷದಡಿ ಬೆಂಗಳೂರು ಕೇಂದ್ರ ಜಿಲ್ಲೆಯಲ್ಲೂ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಪಕ್ಷದ ಗೆಲುವಿಗಾಗಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಮಾಧ್ಯಮಗೋಷ್ಠಿಯಲ್ಲಿ ಮಾಜಿ ಮೇಯರ್ ರಾಮಚಂದ್ರಪ್ಪ, ಕೆಪಿಸಿಸಿ ಉಪಾಧ್ಯಕ್ಷರಾದ ನಾಗರಾಜ್ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.
