ಬೆಂಗಳೂರ ಜ 8 :: ಇ-ಸ್ವತ್ತು ಸೌಲಭ್ಯವನ್ನು ಜಾರಿಗೊಳಿಸುವಲ್ಲಿ ಎದುರಾಗಿರುವ ಸಮಸ್ಯೆಗಳನ್ನು ನಿವಾರಿಸಲು ಜಿಲ್ಲಾ ಮಟ್ಟದಲ್ಲಿ ತೆಗೆದುಕೊಳ್ಳಲಾಗಿರುವ ಕ್ರಮಗಳ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯದ ಗ್ರಾಮ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ವಿಡಿಯೊ ಸಭೆಯಲ್ಲಿ ಚರ್ಚಿಸಿದರು.
ಗ್ರಾಮೀಣ ಜನರು ಈ ಯೋಜನೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದ್ದು, ಸಾರ್ವಜನಿಕರಿಂದ ಬರುವ ದೂರುಗಳ ಬಗ್ಗೆ ವಿಶೇಷ ಆಸಕ್ತಿವಹಿಸಿ ಬಗೆಹರಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಇ-ಸ್ವತ್ತು ತಂತ್ರಾಂಶದಲ್ಲಿನ ಕೆಲವು ಲೋಪಗಳ ಬಗ್ಗೆ ಕೆಲವು ಸಿಇಒಗಳು ಮಾಹಿತಿ ನೀಡಿದರು. ಶೀಘ್ರದಲ್ಲೇ ಈ ಸಮಸ್ಯೆಗಳನ್ನು ಪರಿಹರಿಸಲಾಗುವುದೆಂದು ಸಚಿವರು ತಿಳಿಸಿದರು. ತಂತ್ರಾಂಶವನ್ನು ಎನ್.ಐ.ಸಿ ಸಿದ್ಧಪಡಿಸಿದ್ದು ಲೋಪಗಳನ್ನು ಸರಿಪಡಿಸಲು ವಿಳಂಬಗೊಂಡಿತೆಂಬ ವಿಷಯ ಪ್ರಸ್ತಾಪವಾಯಿತು.
ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಕಾಲ್ ಸೆಂಟರ್ ಸಂಖ್ಯೆಗಳನ್ನು ಪ್ರದರ್ಶಿಸಲು ತಕ್ಷಣದ ಕ್ರಮ ಕೈಗೊಳ್ಳಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರಲ್ಲದೆ, ಇ-ಸ್ವತ್ತು ಬಗ್ಗೆ ಬರುವ ಯಾವುದೇ ದೂರುಗಳನ್ನು ಆದ್ಯತೆಯ ಮೇಲೆ ಪರಿಹರಿಸಿ ಅರ್ಜಿದಾರರಿಗೆ ಮಾಹಿತಿ ನೀಡಬೇಕೆಂದು ನಿರ್ದೇಶಿಸಿದರು.
ಸಭೆಯಲ್ಲಿ ಇಲಾಖೆಯಯ ಕಾರ್ಯದರ್ಶಿ ಡಿ.ರಂದೀಪ್, ಪಂಚಾಯತ್ ರಾಜ್ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಪಾಲ್ಗೊಂಡಿದ್ದರು.
