Thursday, August 20, 2026
HomeUncategorizedರಾಜೀವ್ ಗಾಂಧಿ ಹಾದಿಯಲ್ಲಿ ರಾಹುಲ್ ಗಾಂಧಿ: ನವ ತಲೆಮಾರಿನ ರಾಜಕೀಯಕ್ಕೆ ಹೊಸ ದಿಕ್ಕು - ಡಾ....

ರಾಜೀವ್ ಗಾಂಧಿ ಹಾದಿಯಲ್ಲಿ ರಾಹುಲ್ ಗಾಂಧಿ: ನವ ತಲೆಮಾರಿನ ರಾಜಕೀಯಕ್ಕೆ ಹೊಸ ದಿಕ್ಕು – ಡಾ. ಆನಂದ ಕುಮಾರ್

ರಾಜೀವ್ ಗಾಂಧಿ ಆಧುನಿಕ ಭಾರತದ ನಿರ್ಮಾತೃ. ಪೈಲೆಟ್ ಆಗಿ, ತಂತ್ರಜ್ಞರಾಗಿ, ದೂರಸಂಪರ್ಕ ಕ್ರಾಂತಿಯ ಶಿಲ್ಪಿಯಾಗಿ, ರಾಜಕೀಯ ಮುತ್ಸದ್ಧಿಯಾಗಿ ರಾಜಕಾರಣದಲ್ಲಿ ಹೆಗ್ಗುರುತುಗಳನ್ನು ಮೂಡಿಸಿದ ಮಹಾನ್ ಚೇತನ. ಇಂದು ಅವರ ಜನ್ಮದಿನ. ದೂರಸಂಪರ್ಕ ಕ್ಷೇತ್ರದಲ್ಲಿನ ಪರಿವರ್ತನೆ ಒಂದು ಮಹತ್ವದ ತಿರುವು. ದೂರವಾಣಿ ಸಂಪರ್ಕ ಪಡೆಯಲು ವರ್ಷಗಟ್ಟಲೆ ಕಾಯಬೇಕಾಗಿದ್ದ ಭಾರತ ಇಂದು ಮೊಬೈಲ್, ಇಂಟರ್‌ನೆಟ್, ಡಿಜಿಟಲ್ ಪಾವತಿ ಮತ್ತು ಕೃತಕ ಬುದ್ಧಿಮತ್ತೆಯ ಯುಗಕ್ಕೆ ತಲುಪಿದೆ. ಈ ಪರಿವರ್ತನೆಯ ಆರಂಭಿಕ ಬೀಜಗಳನ್ನು ಬಿತ್ತಿದವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ.
1984ರಲ್ಲಿ ಪ್ರಧಾನಿಯಾದ ರಾಜೀವ್ ಗಾಂಧಿ, ಭಾರತವನ್ನು 21ನೇ ಶತಮಾನಕ್ಕೆ ಕೊಂಡೊಯ್ಯಬೇಕೆಂಬ ಹೆಬ್ಬಯಕೆ ಹೊಂದಿದ್ದರು. ವಿಜ್ಞಾನ, ತಂತ್ರಜ್ಞಾನ ಮತ್ತು ಆಧುನಿಕ ಸಂವಹನ ವ್ಯವಸ್ಥೆಗಳನ್ನು ದೇಶದ ಅಭಿವೃದ್ಧಿಯ ಪ್ರಮುಖ ಸಾಧನಗಳೆಂದು ಪರಿಗಣಿಸಿದರು.

1984ರಲ್ಲಿ ಸ್ಥಾಪನೆಯಾದ ಸಿ-ಡಾಟ್, ಸ್ವದೇಶಿ ದೂರಸಂಪರ್ಕ ತಂತ್ರಜ್ಞಾನ ಅಭಿವೃದ್ಧಿಗೆ ಪ್ರಮುಖ ವೇದಿಕೆಯಾಯಿತು. ಸ್ಯಾಮ್ ಪಿತ್ರೋಡಾ ಅವರಂತಹ ತಂತ್ರಜ್ಞರ ಸಹಕಾರದೊಂದಿಗೆ ಗ್ರಾಮೀಣ ಭಾರತಕ್ಕೂ ತಲುಪುವಂತಹ ದೂರವಾಣಿ ವ್ಯವಸ್ಥೆ ಅಭಿವೃದ್ಧಿಪಡಿಸುವ ಪ್ರಯತ್ನ ನಡೆಯಿತು. ದೇಶದೆಲ್ಲೆಡೆ ಸಾರ್ವಜನಿಕ ದೂರವಾಣಿ ಕೇಂದ್ರಗಳು, ಎಸ್.ಟಿ.ಡಿ, ಪಿಸಿಒ ವ್ಯವಸ್ಥೆ, ವೇಗವಾಗಿ ವಿಸ್ತರಿಸಿತು. ದೂರವಾಣಿ ಶ್ರೀಮಂತರ ಅಥವಾ ಸರ್ಕಾರಿ ಕಚೇರಿಗಳ ಸೌಲಭ್ಯವಲ್ಲ; ಸಾಮಾನ್ಯ ನಾಗರಿಕನಿಗೂ ಲಭ್ಯವಾಗಬೇಕೆಂಬ ಕಲ್ಪನೆ ಬಲಗೊಂಡಿತು. ಮೊಬೈಲ್ ಮತ್ತು ಇಂಟರ್‌ನೆಟ್ ಕ್ರಾಂತಿಗೆ ಅಗತ್ಯವಾದ ಮೂಲಸೌಕರ್ಯ ನಿರ್ಮಾಣದ ಆರಂಭಿಕ ಹಂತ ಇದಾಗಿತ್ತು.
ರಾಜೀವ್ ಆಡಳಿತದಲ್ಲಿ ಕಂಪ್ಯೂಟರೀಕರಣಕ್ಕೂ ವಿಶೇಷ ಒತ್ತು ನೀಡಲಾಯಿತು. ಸರ್ಕಾರಿ ಕಚೇರಿಗಳು, ಬ್ಯಾಂಕಿಂಗ್, ರೈಲ್ವೆ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆಯ ಬಗ್ಗೆ ಚರ್ಚೆ ಮತ್ತು ಪ್ರಯೋಗಗಳು ವೇಗ ಪಡೆದವು. ಆದರೆ ಈ ಬದಲಾವಣೆ ವಿರೋಧವಿಲ್ಲದೇ ನಡೆದಿಲ್ಲ. ಕಂಪ್ಯೂಟರ್‌ಗಳು ಉದ್ಯೋಗ ಕಸಿಯುತ್ತವೆ ಎಂಬ ಆತಂಕವೂ ವ್ಯಕ್ತವಾಯಿತು. ಕಂಪ್ಯೂಟರೀಕರಣಕ್ಕೆ ಬಿಜೆಪಿ ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿತ್ತು. ಆಗ ಯುವ ರಾಜಕಾರಣಿಯಾಗಿದ್ದ ದಿವಂಗತ ಅನಂತ್ ಕುಮಾರ್ ಆನಂದ್ ರಾವ್ ವೃತ್ತದಲ್ಲಿ ಕಂಪ್ಯೂಟರ್ ಪ್ರತಿಕೃತಿ ದಹಿಸಿ ಹೋರಾಟ ಮಾಡಿದ್ದು ಈಗಲೂ ನಮ್ಮ ಕಣ್ಣ ಮುಂದಿದೆ. ಇಷ್ಟಾದರೂ ಭವಿಷ್ಯದ ಆರ್ಥಿಕತೆ ತಂತ್ರಜ್ಞಾನ ಆಧಾರಿತವಾಗಲಿದೆ ಎಂಬ ರಾಜೀವ್ ಗಾಂಧಿ ಅವರ ನಿಲುವು ಮುಂದುವರಿಯಿತು. ಭಾರತ ಜಾಗತಿಕ ಐಟಿ ಕ್ಷೇತ್ರದಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದ್ದು, ಆ ಕಾಲದ ತಂತ್ರಜ್ಞಾನ ಪರಿವರ್ತನೆಯ ಮಹತ್ವ ಇನ್ನಷ್ಟು ಸ್ಪಷ್ಟವಾಗುತ್ತದೆ.
1986ರ ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಆಧುನೀಕರಿಸಿದರು. ಜವಾಹರ್ ನವೋದಯ ವಿದ್ಯಾಲಯಗಳ ಮೂಲಕ ಗ್ರಾಮೀಣ ಪ್ರತಿಭಾವಂತರಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಿದರು. ಜ್ಞಾನ, ವಿಜ್ಞಾನ ಮತ್ತು ಮಾನವ ಸಂಪನ್ಮೂಲಗಳ ಅಭಿವೃದ್ಧಿಯೂ ಆಗಬೇಕು ಎಂಬ ಚಿಂತನೆ ಅವರಲ್ಲಿತ್ತು. ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಿದರು. ಸ್ಥಳೀಯ ಸಂಸ್ಥೆಗಳಿಗೆ ಸಾಂವಿಧಾನಿಕ ಸ್ಥಾನಮಾನ ನೀಡುವ ಪ್ರಯತ್ನಕ್ಕೆ ಮುಂದಾದರು. ರಾಜೀವ್ ಗಾಂಧಿ ಅವರ ರಾಜಕೀಯ ಜೀವನ ಅಲ್ಪಾವಧಿಯದ್ದಾಗಿದ್ದರೂ, ಅವರ ಪ್ರಭಾವ ದೀರ್ಘಕಾಲ ಉಳಿಯಲಿದೆ.
ನೆಹರೂ–ಗಾಂಧಿ ಕುಟುಂಬದ ಹಲವು ನಾಯಕರು ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಬದಲಾಗುತ್ತಿರುವ ಭಾರತದ ಪ್ರಶ್ನೆಗಳನ್ನು ಹೊಸ ರೀತಿಯಲ್ಲಿ ಮುನ್ನೆಲೆಗೆ ತರುತ್ತಿದ್ದಾರೆ. ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ರಾಜಕೀಯ ಕಾಲಘಟ್ಟಗಳು ವಿಭಿನ್ನ. ರಾಹುಲ್ ಗಾಂಧಿ ಎದುರಿಸುತ್ತಿರುವ ಭಾರತ ಡಿಜಿಟಲ್ ಕ್ರಾಂತಿ, ಕೃತಕ ಬುದ್ಧಿಮತ್ತೆ, ನಿರುದ್ಯೋಗ, ಸಾಮಾಜಿಕ ಅಸಮಾನತೆ, ಶಿಕ್ಷಣದ ಒತ್ತಡ ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳ ಕುರಿತ ಆತಂಕಗಳ ಭಾರತ. ಹೀಗಾಗಿ ತಂದೆಯ ಹಾದಿಯನ್ನು ಅನುಸರಿಸುವುದು ಎಂದರೆ ಅದೇ ರಾಜಕೀಯವನ್ನು ಪುನರಾವರ್ತಿಸುವುದಲ್ಲ; ಆ ಕಾಲದ ಆಧುನಿಕತೆಯ ಕನಸನ್ನು ಇಂದಿನ ಸಮಸ್ಯೆಗಳಿಗೆ ಹೊಂದಿಸುವುದಾಗಿದೆ.
ಉದ್ಯೋಗ, ಶಿಕ್ಷಣ, ಪರೀಕ್ಷಾ ವ್ಯವಸ್ಥೆ, ಸಾಮಾಜಿಕ ನ್ಯಾಯ, ಯುವಜನರ ಭವಿಷ್ಯ ಮತ್ತು ಆರ್ಥಿಕ ಅವಕಾಶಗಳ ವಿಚಾರಗಳಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ರಾಜೀವ್ ಗಾಂಧಿ ಲೋಕಸಭೆಯ ಪ್ರತಿಪಕ್ಷ ನಾಯಕರಾಗಿದ್ದರು. ರಾಹುಲ್ ಗಾಂಧಿ ಇಂದು ಪ್ರತಿಪಕ್ಷದ ಮುಖವಾಗಿ ನಿಂತಿದ್ದಾರೆ.
ಪ್ರತಿಪಕ್ಷದ ಜವಾಬ್ದಾರಿ ಎಂದರೆ ಸರ್ಕಾರವನ್ನು ವಿರೋಧಿಸುವುದಷ್ಟೇ ಅಲ್ಲ. ಜನರ ಸಮಸ್ಯೆಗಳನ್ನು ಪ್ರತಿಧ್ವನಿಸುವುದು, ಪರ್ಯಾಯ ನೀತಿಗಳನ್ನು ಮುಂದಿಡುವುದು ಮತ್ತು ಅಧಿಕಾರದಲ್ಲಿರುವವರನ್ನು ಹೊಣೆಗಾರರನ್ನಾಗಿ ಮಾಡುವುದು ಪ್ರತಿಪಕ್ಷದ ಕರ್ತವ್ಯ. ರಾಹುಲ್ ಗಾಂಧಿ ತಮ್ಮ ಪಾತ್ರವನ್ನು ಹೆಚ್ಚು ಸಕ್ರಿಯವಾಗಿ ನಿರ್ವಹಿಸುತ್ತಿದ್ದಾರೆ.
ತಂದೆಯ ತಂತ್ರಜ್ಞಾನ, ಮಗನ ತಂತ್ರಜ್ಞಾನ ರಾಜಕೀಯ ಗಮನಾರ್ಹವಾದದ್ದು. ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರಲ್ಲೂ ಯುವಜನತೆಯ ಮೇಲೆ ನಂಬಿಕೆ, ಬದಲಾವಣೆಯ ಅಗತ್ಯ ಮತ್ತು ಭವಿಷ್ಯದ ಭಾರತ ಕುರಿತು ಚಿಂತನೆ ಎಂಬ ಸಾಮ್ಯವನ್ನು ಗುರುತಿಸಬಹುದು.
ರಾಹುಲ್ ಗಾಂಧಿ ‘ಸಾಮಾನ್ಯ ಜನರೊಂದಿಗೆ ಸಂಪರ್ಕ’ಕ್ಕೆ ಒತ್ತು ನೀಡಿದ್ದಾರೆ. ವಿದ್ಯಾರ್ಥಿಗಳು, ಯುವಕರು, ರೈತರು, ಕಾರ್ಮಿಕರು ಮತ್ತು ಅಂಚಿನ ಸಮುದಾಯಗಳ ಸಮಸ್ಯೆಗಳನ್ನು ನೇರವಾಗಿ ಆಲಿಸುವ ರಾಜಕೀಯ ಶೈಲಿಯನ್ನು ಅವರು ರೂಪಿಸಿಕೊಂಡಿದ್ದಾರೆ. ಜನ ಸಾಮಾನ್ಯರ ಜೊತೆ ಬೆರೆಯಲು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಿದರು.
ರಾಜೀವ್ ಭಾರತವನ್ನು 21ನೇ ಶತಮಾನದ ಬಾಗಿಲಿಗೆ ಕೊಂಡೊಯ್ಯ ಪ್ರಯತ್ನಿಸಿದರೆ, ರಾಹುಲ್ 21ನೇ ಶತಮಾನದ ಭಾರತ ಯಾರಿಗಾಗಿ ಎಂಬುದನ್ನು ಪರಿಣಾಮಕಾರಿಯಾಗಿ ಮುಂದಿಡುತ್ತಿದ್ದಾರೆ. ತಂದೆ ತಂತ್ರಜ್ಞಾನ ಕ್ರಾಂತಿಯ ಮೂಲಕ ಭಾರತವನ್ನು ಬದಲಿಸಲು ಕನಸು ಕಂಡಿದ್ದರು; ಮಗ ಜನರ ಧ್ವನಿ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಹೊಣೆಗಾರಿಕೆಯ ಮೂಲಕ ಹೊಸ ಭಾರತದ ರಾಜಕೀಯವನ್ನು ರೂಪಿಸುವ ಹಾದಿಯಲ್ಲಿದ್ದಾರೆ.

ಹೆಚ್ಚಿನ ಸುದ್ದಿ