ಯಾದಗಿರಿ, ಏ.7: ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದ ಲಿಂಗಸನಳ್ಳಿ ತಾಂಡಾದಿಂದ ಹೊಸ ತಾಂಡಾ ಮುಖ್ಯ ರಸ್ತೆಯವರೆಗೆ ಹಾಗೂ ಬಾಚವಾರ ಮುಖ್ಯ ರಸ್ತೆ ಮುಂಭಾಗದಿಂದ ಹನುಮಾನಾಯಕ ಹಳೆ ತಾಂಡಾದವರೆಗೆ ನಿರ್ಮಿಸಲಾದ ಡಾಂಬರ ರಸ್ತೆ ಕಳಪೆ ಮಟ್ಟದಲ್ಲಿ ನಿರ್ಮಾಣಗೊಂಡಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
2024-25ನೇ ಸಾಲಿನ ಕಲ್ಯಾಣ ಕರ್ನಾಟಕ ಪಥ ಯೋಜನೆಯಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಸುಮಾರು ರೂ.355.70 ಲಕ್ಷ ವೆಚ್ಚದಲ್ಲಿ ಈ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದ್ದು, ಕಾಮಗಾರಿ ಆರಂಭಗೊಂಡ ಕೆಲವೇ ದಿನಗಳಲ್ಲಿ ಡಾಂಬರ್ ಕಿತ್ತಿಕೊಂಡು ಹೋಗುತ್ತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಸ್ಥಳೀಯರು ಆರೋಪಿಸುವಂತೆ, ರಸ್ತೆ ನಿರ್ಮಾಣದಲ್ಲಿ ಅಗತ್ಯವಾದ ಆಳ ಹಾಗೂ ಅಗಲವನ್ನು ಪಾಲಿಸದೇ, ತಳಹದಿ ಬಲಪಡಿಸದೆ ಡಾಂಬರ್ ಹಾಕಲಾಗಿದೆ. ಜೊತೆಗೆ ರೋಲರ್ ಸರಿಯಾಗಿ ಬಳಸದೇ ಕಾಮಗಾರಿ ನಡೆಸಲಾಗಿದೆ ಎಂದು ದೂರಲಾಗಿದೆ. ಕಾಮಗಾರಿ ಪೂರ್ಣಗೊಂಡ 15 ದಿನಗಳಲ್ಲಿಯೇ ಪ್ಯಾಚ್ ವರ್ಕ್ ಆರಂಭವಾಗಿರುವುದು ಕಾಮಗಾರಿಯ ಗುಣಮಟ್ಟದ ಮೇಲೆ ಪ್ರಶ್ನೆ ಎಬ್ಬಿಸಿದೆ.
ಇನ್ನೂ ಕಾಮಗಾರಿ ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಭೇಟಿ ನೀಡದೇ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ. ಕಾಮಗಾರಿ ಒಪ್ಪಂದವಾದ ಬಳಿಕ ಎರಡು ವರ್ಷ ವಿಳಂಬವಾಗಿಯೂ ಸಮರ್ಪಕ ಗುಣಮಟ್ಟ ಕಾಯ್ದುಕೊಳ್ಳದೇ ಕೆಲಸ ನಡೆಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಜೆ.ಇ. ಮತ್ತು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ತನಿಖೆ ಪೂರ್ಣಗೊಳ್ಳುವವರೆಗೆ ಬಿಲ್ ತಡೆಹಿಡಿಯಬೇಕು ಎಂದು ಅಖಂಡ ಕರ್ನಾಟಕ ರಕ್ಷಣಾ ಸಮಿತಿ ಆಗ್ರಹಿಸಿದೆ. ಅಲ್ಲದೆ, ಗುತ್ತಿಗೆದಾರರ ಲೈಸೆನ್ಸ್ ರದ್ದುಪಡಿಸಿ, ಸಂಪೂರ್ಣ ಮರು ಡಾಂಬರೀಕರಣ ಕಾರ್ಯ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಕಾಮಗಾರಿಯ ಕಳಪೆ ಗುಣಮಟ್ಟದ ದೃಶ್ಯಗಳನ್ನು ಒಳಗೊಂಡ ಫೋಟೋ ಹಾಗೂ ವಿಡಿಯೋ ಸಾಕ್ಷ್ಯಗಳೂ ಲಭ್ಯವಿದ್ದು, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಲೋಕಾಯುಕ್ತರನ್ನು ಸಂಪರ್ಕಿಸುವುದರ ಜೊತೆಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಮಿತಿ ಎಚ್ಚರಿಸಿದೆ.
