ಮೈಸೂರು: ಬದಲಾವಣೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿಯವರು ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಗೆ ದಿಢೀರ್ ಭೇಟಿ ನೀಡಿ ಸಚಿವರು, ಸ್ಥಳೀಯ ಶಾಸಕರೊಂದಿಗೆ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಮಂಗಳವಾರ ಬೆಳಗ್ಗೆ ಮೈಸೂರಿಗೆ ಆಗಮಿಸಿದ ಅವರು ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್.ಸಿ.
ಮಹದೇವಪ್ಪ, ಶಾಸಕರಾದ ಕೆ. ಹರೀಶ್ ಗೌಡ, ಡಿ. ರವಿಶಂಕರ್, ಅನಿಲ್ ಚಿಕ್ಕಮಾದು, ಮುಡಾ ಅಧ್ಯಕ್ಷ ಮರಿಗೌಡ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಜತೆಗೆ ಚರ್ಚೆ ನಡೆಸಿ ಗಮನ ಸೆಳೆದರು.
ಕುತೂಹಲ ಕೆರಳಿಸಿದ ಭೇಟಿ
ದೆಹಲಿ ಪ್ರವಾಸದ ಅನಂತರ ಎಲ್ಲ ನಾಯಕರನ್ನು ಭೇಟಿ ಮಾಡುತ್ತಿರುವ ಸತೀಶ್ ಜಾರಕಿಹೊಳಿ ಮಂಗಳವಾರ ಮೈಸೂರು ಪ್ರವಾಸ ಕೈಗೊಂಡು ಹಲವರನ್ನು ಭೇಟಿಯಾಗಿದ್ದಾರೆ. ಇದಲ್ಲದೆ ಗೃಹ ಸಚಿವ ಜಿ. ಪರಮೇಶ್ವರ್ ಕೂಡ ಮೈಸೂರು ಪ್ರವಾಸ ಹಮ್ಮಿಕೊಂಡಿದ್ದು, ಮಂಗಳವಾರ ರಾತ್ರಿ ಸಚಿವ ಡಾ| ಮಹದೇವಪ್ಪ ಜತೆಗೆ ಸಭೆ ನಡೆಸುವ ಸಾಧ್ಯತೆಗಳಿದ್ದು, ಸತೀಶ್ ಜಾರಕಿಹೊಳಿ ನಡೆ ಕುತೂಹಲ ಕೆರಳಿಸಿದೆ.
ಕಾರ್ಯಕರ್ತನ ಮನೆಗೆ ಭೇಟಿ
ಮಂಗಳವಾರ ಬೆಳಗ್ಗೆ ಮೈಸೂರಿಗೆ ಆಗಮಿಸಿದ ಸತೀಶ್ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಲೋಕೇಶ್ ಪ್ರಿಯಾ ಅವರ ನಿವಾಸಕ್ಕೆ ತೆರಳಿ ಉಪಾಹಾರ ಸೇವಿಸಿದರು. ಈ ವೇಳೆ ಶಾಸಕ ಅನಿಲ್ ಚಿಕ್ಕಮಾದು ಆಗಮಿಸಿ ಸತೀಶ್ ಜತೆಗೆ ಮಾತಕತೆ ನಡೆಸಿದರು.
ಬಳಿಕ ಚಾಮರಾಜ ನಗರ ಶಾಸಕ ಕೆ. ಹರೀಶ್ ಗೌಡ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ವೇಳೆ ಕೆ.ಆರ್. ನಗರ ಶಾಸಕ ಡಿ. ರವಿಶಂಕರ್, ಮುಡಾ ಅಧ್ಯಕ್ಷ ಮರಿಗೌಡ ಇದ್ದರು.