Thursday, March 26, 2026
Homeಕ್ರೈಂ ಸುದ್ದಿಗಳುಮದ್ದೂರು ಪೊಲೀಸ್ ಕಾನ್‌ಸ್ಟೆಬಲ್ ಆತ್ಮಹತ್ಯೆ...

ಮದ್ದೂರು ಪೊಲೀಸ್ ಕಾನ್‌ಸ್ಟೆಬಲ್ ಆತ್ಮಹತ್ಯೆ…

​ಮದ್ದೂರು: ಪಟ್ಟಣದ ಪೊಲೀಸ್ ಠಾಣೆಯ ವಿಶ್ರಾಂತಿ ಗೃಹದಲ್ಲಿ ಕಾನ್‌ಸ್ಟೆಬಲ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಮೂಲದ ರಮೇಶ್ (35) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಮದ್ದೂರು ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಮಂಗಳವಾರ ಪೊಲೀಸ್ ವಿಶ್ರಾಂತಿ ಗೃಹದಲ್ಲಿ ಕರ್ತವ್ಯ ನಿರತರಾಗಿದ್ದ ಅವಧಿಯಲ್ಲೇ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಂದು ತಡರಾತ್ರಿ ಬೆಳಕಿದೆ ಬಂದಿದೆ ಎನ್ನಲಾಗಿದೆ. ಮೃತ ರಮೇಶ್ ಪತ್ನಿ ಪುಷ್ಪಲತಾ ಪೊಲೀಸರಿಗೆ ದೂರು ನೀಡಿದ್ದು, ರಮೇಶ್ ಸಾವಿಗೆ ಸಹೋದ್ಯೋಗಿಯಾದ ಕಾನ್‌ಸ್ಟೆಬಲ್ ಮಹೇಶ್ ಎಂಬುವವರೇ ನೇರ ಕಾರಣ ಎಂದು ಆರೋಪಿಸಿದ್ದಾರೆ.

​ಕಾನ್‌ಸ್ಟೆಬಲ್ ಮಹೇಶ್, ರಮೇಶ್ ಅವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರ ಹಿಂಸೆ ನೀಡುತ್ತಿದ್ದರು. ​ಕೆಲಸದ ವಿಚಾರದಲ್ಲಿ ಹಾಗೂ ವೈಯಕ್ತಿಕವಾಗಿ ಹಲವು ಬಾರಿ ಗಲಾಟೆ ಮಾಡಿಕೊಂಡಿದ್ದರು. ​ಈ ಕಿರುಕುಳವನ್ನು ತಾಳಲಾರದೆ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

​ವಿಶೇಷವೆಂದರೆ, ರಮೇಶ್ ಮತ್ತು ಆರೋಪ ಎದುರಿಸುತ್ತಿರುವ ಮಹೇಶ್ ಇಬ್ಬರೂ ಒಂದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಪೊಲೀಸ್ ವಸತಿಗೃಹದಲ್ಲೇ ನೆರೆಹೊರೆಯವರಾಗಿದ್ದರು.

ಪೊಲೀಸ್ ಇಲಾಖೆಯ ಒಳಗಡೆಯೇ ಇಂತಹ ಕಿರುಕುಳ ನಡೆದಿದೆ ಎಂಬ ಆರೋಪ ಕೇಳಿಬಂದಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ನನ್ನ ಪತಿಯ ಸಾವಿಗೆ ಕಾರಣರಾದ ಮಹೇಶ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪತ್ನಿ ಪುಷ್ಪಲತಾ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ​ಸದ್ಯ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಹೆಚ್ಚಿನ ಸುದ್ದಿ