Thursday, August 27, 2026
Homeಕ್ರೀಡೆಬೆಂಗಳೂರಲ್ಲಿ ʻಖೇಲೋ ಇಂಡಿಯಾ ಸಂವಾದʼ: ದೇಶಾದ್ಯಂತ 1,067 ಖೇಲೋ ಇಂಡಿಯಾ ಕೇಂದ್ರಗಳ ಆರಂಭ - ಕೇಂದ್ರ...

ಬೆಂಗಳೂರಲ್ಲಿ ʻಖೇಲೋ ಇಂಡಿಯಾ ಸಂವಾದʼ: ದೇಶಾದ್ಯಂತ 1,067 ಖೇಲೋ ಇಂಡಿಯಾ ಕೇಂದ್ರಗಳ ಆರಂಭ – ಕೇಂದ್ರ ಸಚಿವ ವಿ. ಸೋಮಣ್ಣ

ಬೆಂಗಳೂರು: ದೇಶದಲ್ಲಿ ಕ್ರೀಡಾ ಕ್ಷೇತ್ರವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಿರಂತರ ಪ್ರೋತ್ಸಾಹ ನೀಡುತ್ತಿದ್ದು, ಜುಲೈ 2026ರ ವೇಳೆಗೆ ದೇಶಾದ್ಯಂತ ಒಟ್ಟು 1,067 ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆಗಳ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ತಿಳಿಸಿದ್ದಾರೆ.

2026ನೇ ಸಾಲಿನ ರಾಷ್ಟ್ರೀಯ ಕ್ರೀಡಾ ದಿನದ ನಿಮಿತ್ತ ಬೆಂಗಳೂರಿನ ರಾಮಯ್ಯ ಕಾನೂನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಖೇಲೋ ಇಂಡಿಯಾ ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದ ಕ್ರೀಡಾ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿರುವ ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರಿಗೆ ಈ ವೇಳೆ ವಿಶೇಷ ನಮನಗಳನ್ನು ಸಲ್ಲಿಸಲಾಯಿತು.

ಮೂಲಸೌಕರ್ಯಕ್ಕೆ ಒತ್ತು:

ದೇಶದಲ್ಲಿ 349 ಕ್ರೀಡಾ ಮೂಲಸೌಕರ್ಯ ಯೋಜನೆಗಳಿಗೆ ಸುಮಾರು 3,176 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಅನುಮೋದನೆ ನೀಡಲಾಗಿದೆ.

ಇದರೊಂದಿಗೆ 267 ಕ್ರೀಡಾ ಅಕಾಡೆಮಿಗಳಿಗೆ ಬೆಂಬಲ ಹಾಗೂ ಸಾವಿರಾರು ಕ್ರೀಡಾಪಟುಗಳಿಗೆ ತರಬೇತಿ ನೀಡಲಾಗುತ್ತಿದೆ.

ಬಜೆಟ್‌ನಲ್ಲಿ ವಿಶೇಷ ಘೋಷಣೆ:

2026–27ರ ಕೇಂದ್ರ ಬಜೆಟ್‌ನಲ್ಲಿ ‘ಖೇಲೋ ಇಂಡಿಯಾ ಮಿಷನ್’ ಘೋಷಿಸಲಾಗಿದ್ದು, ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ದೇಶೀಯವಾಗಿ ಕ್ರೀಡಾ ಸಾಮಗ್ರಿಗಳ ಉತ್ಪಾದನೆಗೆ 500 ಕೋಟಿ ರೂ.ಗಳ ವಿಶೇಷ ಅನುದಾನ ಒದಗಿಸಲಾಗಿದೆ.

ಕ್ರೀಡಾ ಸಾಧನೆಗಳು:

ಟೋಕಿಯೋ ಹಾಗೂ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಹಲವಾರು ಪದಕಗಳನ್ನು ಗೆದ್ದುಕೊಂಡಿದೆ. ಅಲ್ಲದೆ, 2023ರ ಏಷ್ಯನ್ ಗೇಮ್ಸ್‌ನಲ್ಲಿ 107 ಪದಕಗಳನ್ನು ಗೆದ್ದು ಹೊಸ ದಾಖಲೆ ಬರೆಯುವುದರೊಂದಿಗೆ ಕ್ರೀಡೆಯು ರಾಷ್ಟ್ರ ನಿರ್ಮಾಣದ ಪ್ರಮುಖ ಸಾಧನವಾಗಿ ಹೊರಹೊಮ್ಮಿದೆ.

ರೈಲ್ವೆಯಿಂದ ಕ್ರೀಡಾ ಪ್ರೋತ್ಸಾಹ:

ಭಾರತೀಯ ರೈಲ್ವೆ ಹಲವು ದಶಕಗಳಿಂದ ಕ್ರೀಡೆಯನ್ನು ಬೆಂಬಲಿಸುತ್ತ ಬಂದಿದ್ದು, ರೈಲ್ವೆ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ ಮೂಲಕ ಇಂದು 9,000ಕ್ಕೂ ಹೆಚ್ಚು ಕ್ರೀಡಾಪಟುಗಳು 29 ವಿವಿಧ ಕ್ರೀಡಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

2036ರ ಒಲಿಂಪಿಕ್ಸ್ ಗುರಿ:

2036ರ ಒಲಿಂಪಿಕ್ಸ್ ಅನ್ನು ಭಾರತದಲ್ಲಿ ಆಯೋಜಿಸುವ ಮಹತ್ವಾಕಾಂಕ್ಷೆಯೊಂದಿಗೆ, 5 ರಿಂದ 8 ವರ್ಷ ವಯಸ್ಸಿನ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಆಧುನಿಕ ತರಬೇತಿ ಮತ್ತು ಸೌಲಭ್ಯಗಳನ್ನು ಕಲ್ಪಿಸುವುದು ಮುಂದಿನ ಹಂತದ ಖೇಲೋ ಇಂಡಿಯಾ ಗುರಿಯಾಗಿದೆ.

ಕಾರ್ಯಕ್ರಮದ ನಂತರ ಕೇಂದ್ರ ಸಚಿವ ಶ್ರೀ ವಿ. ಸೋಮಣ್ಣ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಖೇಲೋ ಇಂಡಿಯಾ ಕಾರ್ಯಕ್ರಮದ ಭಾಗವಾಗಿ ದೇಶದ ಯುವಜನತೆಯೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸಂವಾದವನ್ನು ವೀಕ್ಷಿಸಿದರು.

ಈ ಸಮಾರಂಭದಲ್ಲಿ ಮೈ ಭಾರತ್ ದಕ್ಷಿಣಾ ವಿಭಾಗದ ನಿರ್ದೇಶಕರಾದ ಶ್ರೀ ಅಶೋಕ್‌ ಕುಮಾರ್‌, ರಾಮಯ್ಯ ಕಾನೂನು ಕಾಲೇಜಿನ ನಿರ್ದೇಶಕರಾದ ಶ್ರೀ ಆನಂದ್‌ ರಾಮ್‌, ಸಿಎಒ ಶ್ರೀ ಕರಿಸಿದ್ದಪ್ಪ, ಸಿಇಒ ಶ್ರೀ ವಿಶ್ವನಾಥ, ಪ್ರೊ. ಉಮಾ ಮಹೇಶ್‌, ಧ್ಯಾನ್‌ಚಂದ್‌ ಪ್ರಶಸ್ತಿ ಪುರಸ್ಕೃತೆ ತೃಪ್ತಿ ಮುರುಗುಂಡೆ ಹಾಗೂ ಪ್ಯಾರಾ ಒಲಿಂಪಿಕ್ಸ್ ಅಥ್ಲೀಟ್ ಹರ್ಷಿತಾ ರಾಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ