ಬೆಂಗಳೂರು: “ಬಾಡಿಗೆ ಮನ್ನಾ ಮಾಡಿ’ ಅಂತ ಹೇಳಿದ್ದು ಒಂದು ಅವಧಿಗೆ. ಆದರೆ, ಮನ್ನಾ ಮಾಡಿದ್ದು ಎರಡು ಅವಧಿಗೆ. ಪರಿಣಾಮ ಸಂಸ್ಥೆಗೆ ಕೋಟ್ಯಂತರ ರೂ. ಪಂಗನಾಮ!
ಕೋವಿಡ್ ಮೊದಲ ಅಲೆ ಹಿನ್ನೆಲೆಯಲ್ಲಿ ದೇಶಾದ್ಯಂತ ವಿನಾಯ್ತಿ ನೀಡಿದಂತೆಯೇ ಬಿಎಂಟಿಸಿ ಕೂಡ ತನ್ನ ವ್ಯಾಪ್ತಿಯ ಮಳಿಗೆಗಳಲ್ಲಿನ ವ್ಯಾಪಾರಿಗಳಿಗೂ ಬಾಡಿಗೆ ಮನ್ನಾ ಮಾಡಲು ಅನುಮತಿ ನೀಡಿತು.
ಆದರೆ, “ಫೋರ್ಜರಿ ತಂಡ’ವು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಎರಡನೇ ಅವಧಿಗೂ ಬಾಡಿಗೆ ಮನ್ನಾ ಮಾಡಿಬಿಟ್ಟಿತು. ಇದರಿಂದ ಸಂಸ್ಥೆಗೆ ಹತ್ತಾರು ಕೋಟಿ ರೂಪಾಯಿ ನಷ್ಟ ಉಂಟಾದರೆ, ಕೊರೊನಾದಂತಹ ಸಂದರ್ಭದಲ್ಲೂ ಅಧಿಕಾರಿಗಳ ಜೇಬು ಮಾತ್ರ ಭರ್ತಿಯಾಯಿತು.
ಕೋವಿಡ್ ಹಾವಳಿ ವೇಳೆ ಲಾಕ್‌ಡೌನ್‌ನಿಂದ ವ್ಯಾಪಾರ, ವಾಣಿಜ್ಯಕ್ಕೆ ತೀವ್ರ ಪೆಟ್ಟು ಬಿದ್ದಿತು. ಅದಕ್ಕೆ ಉತ್ತೇಜಿಸುವ ಸಲುವಾಗಿ ಕೋವಿಡ್ ಮೊದಲ ಅಲೆಯಲ್ಲಿ ಅಂದರೆ 2020ರ ಮಾರ್ಚ್‌ನಿಂದ ಜೂನ್‌ವರೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯಲ್ಲಿನ ವಾಣಿಜ್ಯ ಮಳಿಗೆಗಳು, ಪಾರ್ಕಿಂಗ್ ಕ್ಷೇತ್ರ, ಹಾಲಿನ ಮಳಿಗೆಗಳು, ಹೋರ್ಡಿಂಗ್ಸ್, ಶೌಚಾಲಯ, ಸ್ವತ್ಛತಾ ನಿರ್ವಹಣೆ, ಕಲ್ಯಾಣ ಮಂಟಪ ಸೇರಿದಂತೆ ಎಲ್ಲ ವಾಣಿಜ್ಯ ಉದ್ದೇಶಿತ ಚಟುವಟಿಕೆಗಳನ್ನು ನಡೆಸುವವರಿಗೆ ಬಾಡಿಗೆ ಮನ್ನಾ ರೂಪದಲ್ಲಿ ವಿನಾಯ್ತಿ ನೀಡಲಾಯಿತು. ಇದಕ್ಕೆ ಸಂಸ್ಥೆಯೂ ಅನುಮತಿ ನೀಡಿತು. ಆದರೆ, ಅವಕಾಶ ಇಲ್ಲದಿದ್ದರೂ ಇದೇ ಅನುಮತಿಯನ್ನು ಎರಡನೇ ಅಲೆಯಲ್ಲೂ ಅಂದರೆ 2021ರ ಏಪ್ರಿಲ್- ಜೂನ್‌ನಲ್ಲೂ ಫೋರ್ಜರಿ ತಂಡವು ದುರ್ಬಳಕೆ ಮಾಡಿಕೊಂಡಿರುವ ಘಟನೆ ಈಗ ಬೆಳಕಿಗೆಬಂದಿದೆ.
ಬಿಎಂಟಿಸಿ ವ್ಯಾಪ್ತಿಯಲ್ಲಿ ಸುಮಾರು ಹತ್ತು ಟಿಟಿಎಂಸಿಗಳಿದ್ದು, ಒಂದೊಂದರಲ್ಲೂ 15ರಿಂದ 20 ವಾಣಿಜ್ಯ ಮಳಿಗೆಗಳಿವೆ. ಜತೆಗೆ ಕಚೇರಿಗಳು ಮತ್ತಿತರ ವ್ಯಾಪಾರ ಚಟುವಟಿಕೆಗಳು ನಡೆಯುತ್ತವೆ. ಇದರ ಜತೆಗೆ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ, ಕೆ.ಆರ್. ಮಾರುಕಟ್ಟೆಯಂತಹ ಪ್ರಮುಖ ನಿಲ್ದಾಣಗಳೂ ಇವೆ. ಇಲ್ಲೆಲ್ಲಾ ಕನಿಷ್ಠ ಮಾಸಿಕ 5 ಸಾವಿರದಿಂದ ಗರಿಷ್ಠ ಒಂದೂವರೆ ಲಕ್ಷ ರೂ.ಗಳವರೆಗೆ ಬಾಡಿಗೆ ನಿಗದಿಪಡಿಸಲಾಗಿದೆ. ಬಾಡಿಗೆಯನ್ನು ಒಂದು ವರ್ಷದಿಂದ ಹತ್ತು ವರ್ಷಗಳವರೆಗೆ ನೀಡಲಾಗಿದೆ. ಒಂದೊಂದು ತಿಂಗಳ ಬಾಡಿಗೆ ಮೊತ್ತವೇ ಕೋಟ್ಯಂತರ ರೂಪಾಯಿ ಆಗುತ್ತದೆ. ಕೋವಿಡ್ ನೆಪದಲ್ಲಿ ನಿಯಮಬಾಹಿರವಾಗಿ ಮಅಧಿಕಾರಿಗಳಲ್ಲಿರುವ ಇದಕ್ಕಾಗಿ ಅಂದಿನ ವ್ಯವಸ್ಥಾಪಕ ನಿರ್ದೇಶಕರ ಸಹಿಯನ್ನೇ ಫೋರ್ಜರಿ ಮಾಡಲಾಗಿದೆ. “ದಾಖಲೆಯಲ್ಲಿ ಬಾಡಿಗೆ ಮನ್ನಾ ಮಾಡಿ, ನಂತರ ವ್ಯಾಪಾರಿಗಳೊಂದಿಗೆ “ಡೀಲ್’ ಮಾಡಿಕೊಳ್ಳಲಾಗಿದೆ. ಒಂದೆಡೆ ಅಂದಿನ ವ್ಯವಸ್ಥಾಪಕರಿಗೆ ಮೋಸ ಮಾಡಿದ್ದರೆ, ಮತ್ತೂಂದೆಡೆ ಸಂಸ್ಥೆಗೂ ವಂಚಿಸಿ ನಷ್ಟ ಉಂಟುಮಾಡಲಾಗಿದೆ. ಶೌಚಾಲಯ ನಿರ್ವಹಣೆ ಮೊದಲು ಮಾಡಿ ಎಲ್ಲದರಲ್ಲೂ ಗೋಲ್‌ಮಾಲ್ ಮಾಡಿರುವುದು ಗೊತ್ತಾಗಿದೆ. ಫೋರ್ಜರಿಗೆ ಸಂಬಂಧಿಸಿದ ಪ್ರಕರಣಗಳ ಕಡತಗಳನ್ನು ಪರಿಶೀಲಿಸುವಾಗ ಇದು ಪತ್ತೆಯಾಗಿದೆ. ಅಂದರೆ ಘಟನೆ ನಡೆದು ಹೆಚ್ಚು-ಕಡಿಮೆ ಒಂದೂವರೆ ವರ್ಷದ ನಂತರ ತಿಳಿದುಬಂದಿದೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ಬಿಎಂಟಿಸಿಯಲ್ಲಿನ ಹಗರಣಗಳ ಬಗ್ಗೆ ಅದೇ ಸಂಸ್ಥೆಯಲ್ಲಿನ ಅಧಿಕಾರಿಗಳಲ್ಲಿರುವ ಉದಾಸೀನಕ್ಕೂ ಕನ್ನಡಿ ಹಿಡಿಯುತ್ತದೆ.
ಕೋವಿಡ್ ಎರಡನೇ ಅಲೆಯಲ್ಲಿ ವಾಣಿಜ್ಯ ಮಳಿಗೆಗಳ ಬಾಡಿಗೆ ಮನ್ನಾ ವಿಚಾರದಲ್ಲಿ ಐಎಎಸ್ ಅಧಿಕಾರಿಗಳ ಸಹಿ ಫೋರ್ಜರಿ ಮಾಡಿದ್ದಲ್ಲದೆ, ಅದೇ ಸಹಿಗಳನ್ನು ತೋರಿಸಿ ನಂತರದ ಬರುವ ಐಎಎಸ್ ಅಧಿಕಾರಿಗಳಿಗೂ ಚಳ್ಳೆಹಣ್ಣು ತಿನ್ನಿಸಿ ಕಡತಕ್ಕೆ ಅನುಮೋದನೆ ಪಡೆದಿದ್ದಾರೆ. ಫೋರ್ಜರಿ ತಂಡ ತನ್ನ ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುವ ಮೂಲಕ ವ್ಯವಸ್ಥಿತವಾಗಿ ದಾರಿ ತಪ್ಪಿಸಿ, ತನ್ನ ಕಾರ್ಯವನ್ನು ಸಾಧಿಸಿಕೊಂಡಿರುವುದು ಕೂಡ ತನಿಖೆಯಲ್ಲಿ ಕಂಡುಬಂದಿದೆ.
– ವಿಜಯ ಕುಮಾರ ಚಂದರಗಿ