ಸೈದಾಪುರ/ಯಾದಗಿರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವ, ಪಕ್ಷನಿಷ್ಠ ಹಾಗೂ ಪ್ರಬುದ್ಧ ಯುವ ರಾಜಕಾರಣಿ ಪ್ರಿಯಾಂಕ್ ಖರ್ಗೆಯವರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನವನ್ನು ನೀಡಬೇಕೆಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಯರಗೋಳ ಅವರ ಅಭಿಮಾನಿ ಬಳಗ ಹೈಕಮಾಂಡ್ ಅನ್ನು ಒತ್ತಾಯಿಸಿದೆ.
ದಕ್ಷ ಆಡಳಿತದ ಹಿನ್ನೆಲೆ:
ಪತ್ರಿಕಾ ಪ್ರಕಟಣೆಯಲ್ಲಿ ಅಭಿಮಾನಿ ಬಳಗವು ಪ್ರಿಯಾಂಕ್ ಖರ್ಗೆಯವರ ಸಾಧನೆಗಳನ್ನು ಎತ್ತಿಹಿಡಿದಿದೆ. ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅವರು ತೋರಿರುವ ದಕ್ಷತೆಯನ್ನು ಉಲ್ಲೇಖಿಸಿರುವ ಬಳಗ, “ಕೇಂದ್ರ ಸರ್ಕಾರ ಹಾಗೂ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯ ಅಧ್ಯಯನದ ಪ್ರಕಾರ, ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ವಿಕೇಂದ್ರೀಕರಣದಲ್ಲಿ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇದು ಅವರ ಆಡಳಿತಾತ್ಮಕ ಪಕ್ವತೆಗೆ ಸಾಕ್ಷಿ” ಎಂದು ಬಣ್ಣಿಸಿದೆ.
ಪಕ್ಷದ ಬಲವರ್ಧನೆಗೆ ಪೂರಕ:
ಸರಕಾರ ಹಾಗೂ ಪಕ್ಷದ ವಕ್ತಾರರಾಗಿ ಸಮರ್ಥವಾಗಿ ಕೆಲಸ ಮಾಡುತ್ತಿರುವ ಪ್ರಿಯಾಂಕ್ ಖರ್ಗೆ, ವಿರೋಧ ಪಕ್ಷಗಳ ಟೀಕೆಗಳಿಗೆ ತಾರ್ಕಿಕವಾಗಿ ಉತ್ತರಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. 2016, 2018 ಹಾಗೂ 2023ರ ಸಿದ್ದರಾಮಯ್ಯ ನೇತೃತ್ವದ ಸರಕಾರಗಳಲ್ಲಿ ಸಚಿವರಾಗಿ ಕೆಲಸ ಮಾಡಿದ ಸುದೀರ್ಘ ಅನುಭವ ಅವರಿಗಿದೆ. ಯುವಶಕ್ತಿಯನ್ನು ಪಕ್ಷಕ್ಕೆ ಆಕರ್ಷಿಸುವಲ್ಲಿ ಹಾಗೂ ಸಂಘಟನಾತ್ಮಕವಾಗಿ ಪಕ್ಷವನ್ನು ಬಲಪಡಿಸುವಲ್ಲಿ ಅವರ ಪಾತ್ರ ಮಹತ್ವದ್ದು ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ತಂದೆಯ ಕನಸಿನ ಮುಂದುವರಿಕೆ:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಐದು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ದೇಶದ ಸೇವೆ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಸಿಗಲಿಲ್ಲ ಎಂಬ ಕೊರಗು ಅಭಿಮಾನಿಗಳಲ್ಲಿ ಇದ್ದರೂ, ಅವರ ಪುತ್ರ ಪ್ರಿಯಾಂಕ್ ಖರ್ಗೆಯವರಿಗೆ ಡಿಸಿಎಂ ಹುದ್ದೆ ನೀಡುವ ಮೂಲಕ ಆ ಕೊರಗನ್ನು ನೀಗಿಸಬೇಕು ಹಾಗೂ ಯುವ ನಾಯಕತ್ವಕ್ಕೆ ಮನ್ನಣೆ ನೀಡಬೇಕೆಂದು ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವಪ್ಪ ಗೌಡ ರಾಚನಹಳ್ಳಿ, ಜಗದೀಶ್ ಸಜ್ಜನ್, ಹಣಮಂತ ದೊಡ್ಡಮನಿ, ಅನಿಲ್ ಹೆಡಗಿಮದ್ರಿ, ಬಸವಲಿಂಗಪ್ಪ ನಾಯಕ, ಆಂಜನೇಯ ಕಟ್ಟಿಮನಿ, ತಿಮ್ಮರೆಡ್ಡಿ ಬೆಳಗುಂದಿ ಸೇರಿದಂತೆ ಹಲವು ಮುಖಂಡರು ಮತ್ತು ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.
