ಕರ್ನಾಟಕ ಮಾಧ್ಯಮ ಅಕಾಡೆಮಿಯ 2025 ನೇ ಸಾಲಿನ ವಾರ್ಷಿಕ ಪ್ರದಾನ ಸಮಾರಂಭ
ತಂತ್ರಜ್ಞಾನದೊಂದಿಗೆ ಪತ್ರಕರ್ತರೂ ಬದಲಾಗಲಿ, ಸರ್ಕಾರವನ್ನು ಟೀಕೆ ಮಾಡಿ. ಆದರೆ ಸತ್ಯ ಹೇಳಿ
ಬೆಂಗಳೂರು ಮಾ 13: ಪತ್ರಕರ್ತರಿಗೆ ನಾವು ಯಾರ ಪರವಾಗಿ ಇದ್ದೇವೆ ಎಂಬ ಸ್ಪಷ್ಟವಾದ ಅರಿವು ಇರಬೇಕು. ಸರ್ಕಾರವು ಕಟ್ಟ ಕಡೆಯ ಮನುಷ್ಯನ ಪರವಾಗಿ ಇದೆಯಾ ಎನ್ನುವ ಬಗ್ಗೆ ಗಮನ ಹರಿಸಿ, ವೃತ್ತಿಧರ್ಮವನ್ನು ಬಹಳ ಮುಖ್ಯವಾಗಿ ಕಾಪಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಮಾಧ್ಯಮ ಅಕಾಡೆಮಿಯ 2025 ನೇ ಸಾಲಿನ ವಾರ್ಷಿಕ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಂತ್ರಜ್ಞಾನ ಇಂದು ವೇಗವಾಗಿ ಬೆಳೆಯುತ್ತಿದೆ. ತಂತ್ರಜ್ಞಾನ ಬದಲಾದಂತೆ ಪತ್ರಕರ್ತರೂ ಬದಲಾಗಬೇಕು. ಸರ್ಕಾರ ಮತ್ತು ಸಮಾಜದ ನಡುವೆ ಸೇತುವೆಯಾಗಿ ಕೆಲಸ ಮಾಡೋರು ಪತ್ರಕರ್ತರು ಎಂದರು.
ಪತ್ರಕರ್ತರು ನೊಂದವರ, ಅಲಕ್ಷಿತರ, ಬಡವರು, ದಲಿತರು, ಹಿಂದುಳಿದವ ಪ್ರತಿನಿಧಿಗಳಾಗಿ ಕೆಲಸ ಮಾಡಿ. ನೋವು ನಲಿವುಗಳಿಗೆ ಸ್ಪಂದಿಸವ ರೀತಿ ಕೆಲಸ ಮಾಡಬೇಕು. ಆಗ ಮಾತ್ರ ನಿಮ್ಮ ವೃತ್ತಿ ಧರ್ಮ ಪಾಲನೆ ಮಾಡಿದಂತೆ. ವೃತ್ತಿಧರ್ಮವನ್ನು ಯಾವುದೇ ಕಾರಣಕ್ಕೂ ಪತ್ರಕರ್ತರು ಮರೆಯಬಾರದು ಎಂದರು.
ಸಮಾಜದಲ್ಲಿ ಪತ್ರಕರ್ತರ ಜವಾಬ್ದಾರಿ ಹೆಚ್ಚು. ಸರ್ಕಾರವನ್ನು ಜಾಗೃತಿಗೊಳಿಸುವವರು ಮತ್ತು ಮಾಹಿತಿ ಕೊಡುವವರು ನೀವು. ಆದ್ದರಿಂದ ನಿಮ್ಮ ಜವಾಬ್ದಾರಿಯನ್ನು ತಿಳಿದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಇಂದು ಊಹಾ ಮಾಧ್ಯಮದ ಹಾವಳಿ ಜಾಸ್ತಿಯಾಗಿದೆ. ಅತಿರಂಜಿತ ಸುದ್ದಿಗಳೇ ಹೆಚ್ಚಾಗಿವೆ. ಸತ್ಯ ಬರೆಯುವ ಮತ್ತು ಸಂಶೋಧನೆ ನಡೆಸಿ ಬರೆಯುವ ಪತ್ರಕರ್ತರ ಸಂಖ್ಯೆ ಸುಳ್ಳು ಬರೆಯುವ ಪತ್ರಕರ್ತರ ಸಂಖ್ಯೆಗಿಂತ ಹೆಚ್ಚಾಗಬೇಕು. ವಾಸ್ತವಾಂಶವನ್ನು ಬರೆಯಬೇಕು. ಸರ್ಕಾರವನ್ನು ಟೀಕೆ ಮಾಡಿ ಆದರೆ ಸತ್ಯ ಹೇಳಿ ಎಂದು ಕರೆ ನೀಡಿದರು.
ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ಕೆ.ವಿ.ಪ್ರಭಾಕರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ, ಸರ್ಕಾರದ ಕಾರ್ಯದರ್ಶಿಗಳಾದ ಬಿ. ಬಿ. ಕಾವೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್, ನಾಟಕ ಅಕಾಡೆಮಿ ಅಧ್ಯಕ್ಷರಾದ ನಾಗರಾಜಮೂರ್ತಿ, ಹಿರಿಯ ಸಾಹಿತಿ ಡಾ.ಹಂಪನಾ, ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ, ಅಕಾಡೆಮಿ ಸದಸ್ಯರು, ಪ್ರಶಸ್ತಿ ಪುರಸ್ಕೃತರು ಉಪಸ್ಥಿತರಿದ್ದರು.
