ಬೆಂಗಳೂರ :: ಆದಿವಾಸಿ ದಲಿತ ಎಂಬ ಕಾರಣಕ್ಕೆ ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ, ಸಂವಿಧಾನ ನನ್ನನ್ನು ಕಾಪಾಡುತ್ತಿದೆ. ನಮ್ಮ ಪಕ್ಷ ಎದುರಿಸಲು ಸಿದ್ಧವಾಗಿದೆ. ಹೀಗಿರುವಾಗ ನಾನು ಏಕೆ ರಾಜೀನಾಮೆ ಕೊಡಬೇಕು? ಇವರು (ಬಿಜೆಪಿಗೆ) ರಾಮನ ಹುಂಡಿ ಕದ್ದರು. ವಾಲ್ಮೀಕಿ ಹಗರಣ ಅದಕ್ಕಿಂತ ದೊಡ್ಡ ಕೃತ್ಯವೇ ಎಂದು ಸಚಿವ ಬಿ.ನಾಗೇಂದ್ರ ಪ್ರಶ್ನಿಸಿದರು.
ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ತಮ್ಮ ರಾಜೀನಾಮೆಗೆ ಪಟ್ಟುಹಿಡಿದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚರ್ಚೆಗೆ ಆಹ್ವಾನ ನೀಡಿದರೂ ಪ್ರತಿಪಕ್ಷಗಳು ಚರ್ಚೆಗೆ ಬರುತ್ತಿಲ್ಲ. ಬದಲಿಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಒಬ್ಬ ದಲಿತ ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಆದರೆ, ಸಮುದಾಯ ಇದೆಲ್ಲವನ್ನೂ ನೋಡುತ್ತಿದೆ. ವಾಲ್ಮೀಕಿ ಸಮುದಾಯ ಏನು ಅಂತ ತೋರಿಸುತ್ತೇವೆ ಎಂದು ಎಚ್ಚರಿಸಿದರು.
ದೇಶದಲ್ಲಿ ಕೇಂದ್ರ ಮಂತ್ರಿಗಳನ್ನೂ ಒಳಗೊಂಡಂತೆ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ 336 ಜನಪ್ರತಿನಿಧಿಗಳ ಪೈಕಿ 126 ಜನರ ಮೇಲೆ ಗಂಭೀರ ಪ್ರಕರಣಗಳಿವೆ. ನನ್ನ ರಾಜೀನಾಮೆ ಕೇಳುವ ಮೊದಲು 126 ಜನರ ರಾಜೀನಾಮೆ ಪಡೆಯಲಿ. ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಮೇಲೆ 27 ಗಂಭೀರ ಪ್ರಕರಣಗಳಿವೆ. ಅವರಿಂದ ರಾಜೀನಾಮೆ ಪಡೆಯಲಿ ಎಂದು ಸವಾಲು ಹಾಕಿದರು.
ನಾನು ಅಪರಾಧಿ ಅಲ್ಲ, ಆರೋಪಿ ಅಷ್ಟೇ. ಅಷ್ಟಕ್ಕೂ ನಾನು ಎಲ್ಲದರೂ ಕನ್ವಿಕ್ಟ್ ಆಗಿದ್ದೀನಾ? ನ್ಯಾಯಾಲಯ ನೀನು ಆರೋಪಿ ಅಂದ್ರೆ, ಯಾವುದೇ ಶಿಕ್ಷೆ ಕೊಟ್ಟರು ತಲೆಬಾಗುತ್ತೇನೆ. ರಾಜ್ಯಾಪಾಲರು ಏಕೆ ಪ್ರಮಾಣ ವಚನ ಸ್ವೀಕಾರಕ್ಕೆ ಅವಕಾಶ ಕೊಟ್ಟರು? ರಾಜ್ಯಪಾಲರಿಗಿಂತ ನೀವೆಲ್ಲ ದೊಡ್ಡವರಾ ಎಂದು ಕೇಳಿದರು.
ನಾನು ಜಾಮೀನಿನ ಮೇಲೆ ಇದ್ದೇನೆ. ಹಾಗೆನೋಡಿದರೆ, 26 ಕೇಂದ್ರ ಸಚಿವರ ಮೇಲೆ ಕೇಸ್ ಇಲ್ಲವೇ? ತಮ್ಮ ತಟ್ಟೆಯಲ್ಲಿ ಹೆಗ್ಗಣ ಇಟ್ಟುಕೊಂಡು, ಮತ್ತೊಬ್ಬರ ತಟ್ಟೆಯಲ್ಲಿನ ನೊಣ ಹುಡುಕಿಕೊಂಡು ಹೊರಟಿದ್ದಿರಾ? ಪ್ರಕರಣ ನ್ಯಾಯಾಲಯದಲ್ಲಿ ಇದ್ದಾಗ ಹೇಗೆ ನನ್ನ ತಪ್ಪಿತಸ್ಥ ಅಂತೀರಾ ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಶ್ರೀರಾಮುಲುಗೂ ತಿರುಗೇಟು:
ಬಳ್ಳಾರಿಯ ಮಾಜಿ ಸಚಿವರು ತಮ್ಮ ಮೇಲೆ ಇರುವುದು ವೈಯಕ್ತಿಕ ಕೇಸ್ ಅಂತಾರೆ. ಶ್ರೀರಾಮುಲು ಅವರೇ ಕಾನೂನು ಎಲ್ಲರಿಗೂ ಒಂದೇ, ಅದನ್ನು ತಿಳಿದುಕೊಳ್ಳಿ. 26 ಎಕರೆ ಜಮೀನು ಯಾವ ರೀತಿ ಗುಳುಂ ಮಾಡಿದ್ದೀರಿ ಎಂಬುದು ಗೊತ್ತಿದೆ. ಅದನ್ನು ತನಿಖೆ ಮಾಡಿಸುತ್ತೇನೆ ಎಂದು ತಿರುಗೇಟು ನೀಡಿದರು.
ಮೊದಲು ಚರ್ಚೆ ಮಾಡಿ:
ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ರಾಜೀನಾಮೆ ಕೇಳುವ ಮೊದಲು ಚರ್ಚೆ ಆಗಬೇಕು. ಚರ್ಚೆ ಮಾಡಿ, ಸದನದಲ್ಲಿ ದಾಖಲೆ ಕೊಟ್ಟು ಮಾತನಾಡಲಿ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಜಾಗಕ್ಕೆ ಹೋಮ ಹವನ ಮಾಡಿ ಶುದ್ಧೀಕರಿಸುವ ಇವರಿಗೆ ರಾಜೀನಾಮೆ ಕೇಳುವ ಯಾವ ನೈತಿಕತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕುರ್ಚಿಗೂ ಹೋಮಹವನ ಮಾಡಿ ಶುದ್ಧೀಕರಿಸುವ ಪರಿಸ್ಥಿತಿ ಬರಬಹುದು ಎಂದು ತೀಕ್ಷ್ಣವಾಗಿ ಹೇಳಿದರು.
ಚಾರ್ಜ್ಶೀಟ್ನಲ್ಲಿ ಹೆಸರಿಲ್ಲ:
ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್ ಪೊನ್ನಣ್ಣ ಮಾತನಾಡಿ, ಹಣ ವರ್ಗಾವಣೆ ವಿಚಾರದಲ್ಲಿ 8 ಎಫ್ಐಆರ್ ಆಗಿದೆ. ಬಿ.ಕೆ. ಸಿಂಗ್ ನೇತೃತ್ವದ ಎಸ್ಐಟಿ ತನಿಖೆ ಮಾಡಿದೆ. ರಾಜ್ಯದ ಉನ್ನತ ತನಿಖಾ ಸಂಸ್ಥೆ ಸಿಐಡಿ ತನಿಖೆ ಮಾಡಿದೆ. ಚಾರ್ಜ್ಶೀಟ್ನಲ್ಲಿ ನಾಗೇಂದ್ರ ಹೆಸರು ಇಲ್ಲ. ಇ.ಡಿ. ತನಿಖೆ ಮಾಡಲು ಮುಂದಾಗಿತ್ತು. ಇ.ಡಿ. ಅವರಿಗೆ ಆರೋಪವೊಂದರಲ್ಲಿ ಜೈಲಿಗೆ ಹೋದವರು ಸಾಕ್ಷಿದಾರರು. ಕೇಂದ್ರ ಸರ್ಕಾರದ ‘ಮೌತ್ ಪೀಸ್’ನ ನಾವು ಹೇಗೆ ನಂಬುವುದು ಎಂದು ಪ್ರಶ್ನಿಸಿದರು.
ದಲಿತ ಹ್ಯಾಂಗ್ ಆಗಬೇಕಾ?
ಜೈಲು ಆಯಿತು, ಬೇಲ್ ಆಯಿತು. ಇನ್ನೇನಿದ್ದರೂ ಹ್ಯಾಂಗ್ ಆಗಬೇಕು ಎಂದು ಸಚಿವ ನಾಗೇಂದ್ರ ಬೇಸರ ವ್ಯಕ್ತಪಡಿಸಿದರು. ಒಬ್ಬ ದಲಿತ ಹ್ಯಾಂಗ್ ಆಗಬೇಕಾ? ಇನ್ನೇನು ಮಾಡಬೇಕು ಬಿಜೆಪಿಯವರೇ ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ಪ್ರತಿ ಎತ್ತಿ ಹಿಡಿದ ನಾಗೇಂದ್ರ
ವಿಧಾನ ಪರಿಷತ್: ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟು ಹಿಡಿದು ಬಿಜೆಪಿ ಸದಸ್ಯರು ತಮ್ಮ ಆಸನದ ಬಳಿಯೇ ನಿಂತು ಘೋಷಣೆ ಕೂಗುತ್ತಿದ್ದರು. ಇದೇ ವೇಳೆ ನಾಗೇಂದ್ರ ಅವರು ಕಲಾಪದಲ್ಲಿ ಪಾಲ್ಗೊಳ್ಳಲು ಸದನದ ಒಳಗೆ ಬರುತ್ತಿದ್ದಂತೆ ಬಿಜೆಪಿ ಸದಸ್ಯರ ಘೋಷಣೆ ಜೋರಾಯಿತು. ಆಗ ನಾಗೇಂದ್ರ ಅವರು ಸಂವಿಧಾನ ಕೃತಿಯನ್ನು ಎತ್ತಿ ಹಿಡಿಯುವ ಮೂಲಕ ಬಿಜೆಪಿ ಸದಸ್ಯರಿಗೆ ತಿರುಗೇಟು ನೀಡಿದರು. ಅಷ್ಟರಲ್ಲಿ ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಉಮಾಶ್ರೀ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.
