Monday, February 9, 2026
Homeಅಂತಾರಾಜ್ಯ ಸುದ್ದಿಗಳುಜಾತಿವಾದಿಗಳ ದೌರ್ಜನ್ಯ,ನಿಲ್ಲದ ಅತ್ಯಾಚಾರಪೂಲನ್ ದೇವಿಯ ಹೋರಾಟದ ಕಥೆ

ಜಾತಿವಾದಿಗಳ ದೌರ್ಜನ್ಯ,ನಿಲ್ಲದ ಅತ್ಯಾಚಾರಪೂಲನ್ ದೇವಿಯ ಹೋರಾಟದ ಕಥೆ

ಬರಹಗಾರರು : ಎಸ್.ಮೂರ್ತಿ ಮಾಜಿ ಕಾರ್ಯದರ್ಶಿ,ಕರ್ನಾಟಕ ವಿಧಾನಸಭೆ.M : 9740197676.

ನವದೆಹಲಿ : (1970-80-90ರ ದಶಕ, ಭಾರತದ ಆದಿವಾಸಿ ಕುಟುಂಬದ ಮಹಿಳೆ, ಗಂಡನಿಂದ, ಭೂ ಮಾಲೀಕರಿಂದ, ಪೊಲೀಸರಿಂದ, ಸಾಲದೇ ಜಾತಿವಾದಿಗಳ 22 ಗಂಡಸರಿಂದ ನಿರಂತರ ಅತ್ಯಾಚಾರಕ್ಕೆ ಒಳಗಾಗಿ, ಮುಂದೊಂದು ದಿನ ಅವರೆಲ್ಲರನ್ನು ಸಾಲಾಗಿ ನಿಲ್ಲಿಸಿ, ಬಂದೂಕಿನಿಂದ ಕೊಂದು, ಸೇಡು ತೀರಿಸಿಕೊಂಡು, ವಿಶ್ವದಲ್ಲಿ ‘Bandit Queen’, ‘Robin Hood’ …ಇತ್ಯಾದಿ ಹೆಸರುಗಳಿಸಿ, ಲೋಕಸಭೆ ಸಂಸದೆಯಾಗಿ, ಮುಂದೊಂದು ದಿನ ಜಾತಿವಾದಿಗಳ ಸಂಚಿನಿಂದ ಹತ್ಯೆಗೀಡಾದ ಚಂಬಲ್ ರಾಣಿ ‘ಪೂಲನ್ ದೇವಿ’ಯ ಜೀವನಗಾಥೆ.)

ಹಿನ್ನೆಲೆ:

ಉತ್ತರ ಪ್ರದೇಶ ರಾಜ್ಯದ ಜಲಹನ್ ಜಿಲ್ಲೆಯ, ಗೊರಹಕ್ ಪೂರ್ವ ಗ್ರಾಮದ ಆದಿವಾಸಿ ಕುಟುಂಬದ ದಲಿತ ಮಲ್ಲ ಜಾತಿಯ ಶ್ರೀ ದೇವಿದಿನ್ ಮಲ್ಲ ಮತ್ತು ಶ್ರೀಮತಿ ಮೂಲ ಈ ದಂಪತಿಗಳಿಗೆ 4ನೇ ಮಗಳಾಗಿ ದಿನಾಂಕ 10-8-1963ರಂದು ಜನಿಸಿದ ಮಗಳೇ ‘ಪೂಲನ್ ದೇವಿ’.

ಪೂಲನ್ ದೇವಿಗೆ 11 ವರ್ಷ ವಯಸ್ಸಿದ್ದಾಗ, ಅವರ ತಾತ ಮರಣ ಹೊಂದಿದ. ತಾತನಿಗಿದ್ದ ಒಂದು ಎಕರೆ ಜಮೀನನ್ನು ಈಕೆಯ ದೊಡ್ಡಪ್ಪ, ಕಬಳಿಸಿ, ಜಮೀನಿನಲ್ಲಿದ್ದ ಒಂದು ಬೇವಿನ ಮರವನ್ನು ಕಡಿದು ಹಾಕಿದ. ಆ ಜಮೀನು ಮತ್ತು ಆ ಮರದ ಬಳಿ ಬಾಲ್ಯದಿಂದಲೂ ಆಟ ಆಡುತ್ತಿದ್ದ ಪೂಲನ್ ದೇವಿ ತುಂಬಾ ದುಃಖ ಪಟ್ಟಳು. ಗ್ರಾಮದ ಕೆಲವರನ್ನು ಸೇರಿಸಿಕೊಂಡು, ತನ್ನ ಸ್ವಂತ ದೊಡ್ಡಪ್ಪನ ವಿರುದ್ಧವೇ ಬಾಲ್ಯದಲ್ಲಿಯೇ ಆಟ ಆಡಿದ್ದ ಮರದ ಬಳಿ ಧರಣಿ ಕುಳಿತಳು. ನೆರಳು ನೀಡುತ್ತಿದ್ದ ಮರ ಕಡಿದು ಬಿದ್ದಿರುವುದನ್ನು ನೋಡಿ ಕಣ್ಣೀರಿಟ್ಟಳು.

ಆ 11ನೇ ವಯಸ್ಸಿನಲ್ಲಿಯೇ ಪೂಲನ್ ದೇವಿಗೆ ಮೂರು ಪಟ್ಟು ಹೆಚ್ಚು ವಯಸ್ಸಿನ ದೂರದ ಗ್ರಾಮದ ಪುಟ್ಟಿಲಾಲ ಮಲ್ಲ ಎಂಬಾತನೊಂದಿಗೆ ತಂದೆ ತಾಯಿಗಳು ಬಾಲ್ಯ ವಿವಾಹ ಮಾಡಿದರು. ಅನಕ್ಷರಸ್ಥನಾಗಿದ್ದ ಗಂಡ, ಬಡತನ, ಹಸಿವು, ದೈಹಿಕ ಶೋಷಣೆ…ಹೀಗೆ ಪೂಲನ್ ದೇವಿಯನ್ನು ಹಿಂಸಿಸಿದ. ಗಂಡನ ಹಿಂಸೆ, ನೋವು, ಅನುಭವಿಸಲಾಗದೆ, ಪೂಲನ್ ದೇವಿ ತನ್ನ ತವರು ಮನೆಗೆ ಹಿಂದಿರುಗಿದಳು.

ತವರು ಮನೆ ಸುತ್ತಲಿನ ಗ್ರಾಮಸ್ಥರು, ಗಂಡ ಬಿಟ್ಟವಳು, ಗ್ರಾಮಕ್ಕೆ ಅನಿಷ್ಠ ಎಂದು ಹಾಡಿಕೊಂಡರು. ಅವಮಾನಿಸಿದರು. ಅವಮಾನಗಳ ನಡುವೆ, ಬಡತನ ಹಸಿವಿನ ಕಾರಣದಿಂದ ಗ್ರಾಮದಲ್ಲಿ ಕೂಲಿ ಕೆಲಸಕ್ಕೆ ಪೂಲನ್ ದೇವಿ ಹೋಗಲು ಪ್ರಾರಂಭಿಸಿದಳು. ಭೂಮಾಲೀಕರುಗಳಾದ ಠಾಕೂರ್ ಗಳು ಗಂಡ ಬಿಟ್ಟ ಇಂತಹ ಬಡ ಹೆಣ್ಣುಗಳನ್ನು ನಿರಂತರ ಮಜಾ ಮಾಡುತ್ತಿದ್ದರು. ಪೂಲನ್ ದೇವಿ ಒಮ್ಮೆ ಕೂಲಿ ಕೆಲಸ ಮಾಡುವಾಗ, ಭೂ ಮಾಲೀಕ ಈಕೆಯನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿದ. ಆಕೆ ವಿರೋಧಿಸಿ ಆತನನ್ನು ಥಳಿಸಿದಳು. ಈ ಬಗ್ಗೆ ಸ್ಥಳೀಯ ಭೂಮಾಲೀಕರು ಪಂಚಾಯಿತಿ ಸಭೆ ನಡೆಸಿ, ಪೂಲನ್ ದೇವಿಯನ್ನು ಧಾರಣವಾಗಿ ಹಲ್ಲೆ ಮಾಡಿದರು. ಗ್ರಾಮದಿಂದ ಬಹಿಷ್ಕಾರ ಹಾಕಿದರು.ಶಕ್ತಿಹೀನ ಕುಟುಂಬ ಮತ್ತು ರಕ್ಷಣೆ ನೀಡದ ಸಮುದಾಯದ ಹತಾಸೆ ಕಂಡು ಪೂಲನ್ ದೇವಿ ಗ್ರಾಮದಿಂದ ಹೊರ ನಡೆದಳು.

ದಾರಿ ಮಧ್ಯೆ ಪೋಲಿಸ್ ನವರು ತಡೆಗಟ್ಟಿದರು. ಭೂಮಾಲೀಕರು ನಿಮ್ಮ ವಿರುದ್ಧ ಕಳ್ಳತನದ ದೂರು ನೀಡಿದ್ದಾರೆ. ಪೊಲೀಸ್ ಠಾಣೆಗೆ ಬಾ ಎಂದು ಆಕೆಯನ್ನು ಕರೆದೊಯ್ಯುದರು. ಪೊಲೀಸ್ ಠಾಣೆಗೆ ಕರೆದುಕೊಂಡು ಬಂದ ಪೊಲೀಸ್ ನವರು ರಾತ್ರಿ ಇಡಿ ಠಾಣೆಯಲ್ಲಿ ಆಕೆಯನ್ನು ಇರಿಸಿಕೊಂಡು, ಒಬ್ಬರಾದ ಮೇಲೆ ಒಬ್ಬರಂತೆ ಅತ್ಯಾಚಾರ ಮಾಡಿದರು. ಬೆಳಗ್ಗೆ ತಂದೆ ತಾಯಿಗಳು ಪೊಲೀಸ್ ಠಾಣೆಗೆ ಬಂದು, ಲಂಚ ನೀಡಿ ಫೂಲನ್ ದೇವಿಯನ್ನು ಮನೆಗೆ ಕರೆದೊಯ್ಯುದರು. ಆದರೆ ಗ್ರಾಮಸ್ಥರು ಹಾಕಿದ್ದ ಬಹಿಷ್ಕಾರ ಕಾರಣಕ್ಕೆ ಪುನ: ಆಕೆ ಗ್ರಾಮವನ್ನು ತೊರೆದಳು.

ತವರು ಮನೆ ಬಡತನ, ಭಯದ ಜೀವನ ಮತ್ತು ಗ್ರಾಮದಲ್ಲಿ ಭೂಮಾಲೀಕರುಗಳು, ಪೋಲಿಸಿನವರ ನರಕ ಹಿಂಸೆ, ತಾಳಲಾರದೆ, ಪೂಲನ್ ದೇವಿ ಬೇಸತ್ತು ಪುನಃ ತನ್ನ ಗಂಡನ ಮನೆಗೆ ವಾಪಸಾದಳು. ಆಗಲೂ ಕೂಡ ಗಂಡನಿಂದ ಪುನಃ ಅದೇ ದೈಹಿಕ ಹಿಂಸೆ ಮುಂದುವರೆಯಿತು.

ತವರು ಮನೆ ಮತ್ತು ಗಂಡನ ಮನೆ ಈ ಎರಡೂ ಕಡೆ ಪೂಲನ್ ದೇವಿ ಚಿತ್ರಹಿಂಸೆ ಅನುಭವಿಸಿ, ಅನುಭವಿಸಿ, ಸಾಕಾಗಿ ಬದುಕಿಗಾಗಿ, ಕುಂತ್ರೆ ನಿಂತ್ರೆ ಮಾನಸಿಕವಾಗಿ ಬಂಡಾಯಗೊಳ್ಳಲು ಪ್ರಾರಂಭಿಸಿದಳು. ಗಂಡನ ಮನೆಯನ್ನು ತೊರೆಯಲು ಸಿದ್ದರಾದಳು.

ಈ ವೇಳೆಯಲ್ಲಿ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳ ಗಡಿ ‘ಚಂಬಲ್ ಕಣಿವೆ’ ಪ್ರದೇಶದಲ್ಲಿ ರಜಪೂತ್ ಜಾತಿಯ ಬಾಬು ಗುಜ್ಜಾರ್ ಎಂಬ ವ್ಯಕ್ತಿ , ಸ್ಥಳೀಯ ದಲಿತ ಯುವಕರ ಡಕಾಯಿತಿ ತಂಡವನ್ನು ಕಟ್ಟಿಕೊಂಡು, ಹೆದ್ದಾರಿಗಳಲ್ಲಿ ಡಕಾಯಿತಿ, ಸುಲಿಗೆ ಮಾಡುತ್ತಿದ್ದ. ಈ ಬಾಬು ಗುಜ್ಜಾರ್ ತಂಡವನ್ನು ವಿವಾಹ ಜೀವನದಿಂದ ಬಂಡಾಯ ಎದ್ದಿದ್ದ ಪೂಲನ್ ದೇವಿ ಸೇರಿಕೊಂಡಳು. ಇಲ್ಲಿಯೂ ಕೆಲ ದಿನಗಳ ಕಾಲ ತಂಡದ ಮುಖ್ಯಸ್ಥ ರಜಪೂತ್ ಜಾತಿಯ ಬಾಬು ಗುಜ್ಜಾರ್ ಪೂಲನ್ ದೇವಿ ಮೇಲೆ ನಿರಂತರ ಅತ್ಯಾಚಾರ ಎಸಗಿದ. ತಂಡದಲ್ಲಿಯೇ ಇದ್ದ ದಲಿತ ಸದಸ್ಯ ವಿಕ್ರಂಮಲ್ಲ ಇದನ್ನು ಖಂಡಿಸುತ್ತಿದ್ದ. ಒಮ್ಮೆ ಅತ್ಯಾಚಾರ ಎಸುಗುತ್ತಿದ್ದ ವೇಳೆಯಲ್ಲಿ ಪೂಲನ್ ದೇವಿಯನ್ನು ರಕ್ಷಿಸುವ ಸಲುವಾಗಿ, ತಂಡದ ಮುಖ್ಯಸ್ಥ ಬಾಬು ಗುಜ್ಜಾರ್ ನನ್ನೇ ವಿಕ್ರಂ ಮಲ್ಲ ಕೊಲೆ ಮಾಡಿದ. ಮುಂದೆ ಆ ಡಕಾಯಿತಿ ತಂಡಕ್ಕೆ ವಿಕ್ರಂ ಮಲ್ಲ ಮುಖ್ಯಸ್ಥನಾದ.

ಸತತ ಅತ್ಯಾಚಾರಗಳಿಂದ ರಕ್ಷಣೆ ಮಾಡಿದ ವಿಕ್ರಂ ಮಲ್ಲನ ಮೇಲೆ ಪೂಲನ್ ದೇವಿಗೆ ಪ್ರೇಮಾಂಕುರ ಆಯಿತು. ಪೂಲನ್ ದೇವಿ ವಿಕ್ರಂ ಮಲ್ಲನಿಂದ ರೈಫಲ್ ಮತ್ತು ಡಕಾಯಿತಿ ಕಲಿತುಕೊಂಡಳು. ಇವಳ ತಂಡ ರಾತ್ರಿ ವೇಳೆ ಹೆದ್ದಾರಿ ಜೊತೆಗೆ ಶ್ರೀಮಂತರ ಮನೆಗಳ ಮೇಲೆ ದಾಳಿ ಮಾಡಿ, ಡಕಾಯಿತಿ, ಸುಲಿಗೆ ಮಾಡಿದರು. ಬೆಳಗಿನ ವೇಳೆ ಚಂಬಲ್ ಕಣಿವೆಗಳಲ್ಲಿ ಅವಿತು ಜೀವಿಸಿಲು ಪ್ರಾರಂಭಿಸಿದರು.

ಈ ಡಕಾಯಿತಿ ಜೀವನದ ಮಧ್ಯೆ ವೇಳೆ, ಪೂಲನ್ ದೇವಿ, ಮೊದಲು ವಿವಾಹವಾಗಿದ್ದ, ಪುಟ್ಟಿಲಾಲ್ ಮಲ್ಲನ ಊರಿಗೆ ತೆರಳಿ, ಅವನನ್ನು ಹುಡುಕಿ ಬಂದೂಕಿನಿಂದ ಕೊಂದಳು. ಪತ್ನಿಯರನ್ನು ಶೋಷಣೆ ಮಾಡುವ ಗಂಡಂದಿರಿಗೆ ಇದೆ ‘ಉತ್ತರ’ ಎಂದು ಗ್ರಾಮಸ್ಥರಿಗೆ ಕೂಗಿ ಹೇಳಿದಳು.

ಆ ದಿನಗಳಲ್ಲಿ, ಹಿಂದಿನ ಬಾಬು ಗುಜ್ಜರ್ ತಂಡದಲ್ಲಿದ್ದ, ರಜಪೂತ್ ಜಾತಿಯ ಶ್ರೀರಾಮ ಮತ್ತು ಲಲರಾಮ್ ಇವರು ಹಳೆಯ ಪ್ರಕರಣಗಳಿಂದ ಜೈಲಿನಿಂದ ಬಿಡುಗಡೆ ಹೊಂದಿ, ವಾಪಸ್ ಬಂದರು. ಬಂದಾಗ ಡಕಾಯಿತ ತಂಡದ ಮುಖ್ಯಸ್ಥ ರಜಪೂತ್ ಜಾತಿಯ ಬಾಬು ಗುಜ್ಜಾರ್ ಕೊಲೆಯಾಗಿರುವುದು ತಿಳಿಯಿತು. ಆ ತರುವಾಯ ಇವರು ರಜಪೂತ ಹುಡುಗರ ಪ್ರತ್ಯೇಕ ಡಕಾಯಿತಿ ತಂಡ ಒಂದನ್ನು ಕಟ್ಟಿದರು. ದಲಿತ ವಿಕ್ರಂ ಮಲ್ಲನ ತಂಡದ ವಿರುದ್ಧ ಬಂದೂಕಿನ ಮಳೆಗೆರದು, ವಿಕ್ರಂ ಮಲ್ಲನನ್ನು ಹತ್ಯೆ ಮಾಡಿದರು. ಆ ಘಟನೆಯಲ್ಲಿಯೇ ಪೂಲನ್ ದೇವಿಯನ್ನು ಅಪರಿಸಿ, ದೂರದ ಬೇಹಮಹಿ ಗ್ರಾಮಕ್ಕೆ ಕೊಂಡೊಯ್ಯುದರು.

ಬೇಹಮಹಿ ಗ್ರಾಮದಲ್ಲಿ ಸುಮಾರು 22 ಮೇಲ್ವರ್ಗದ ರಜಪೂತ್, ಠಾಕೂರ್ ಹುಡುಗರು, ಮೂರು ವಾರಗಳ ಕಾಲ ನಿರಂತರವಾಗಿ, ಪೂಲನ್ ದೇವಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದರು. ತರುವಾಯ ನಗ್ನಗೊಳಿಸಿ ಗ್ರಾಮದಲ್ಲಿ ಬೆತ್ತಲೆ ಮೆರವಣಿಗೆ ಮಾಡಿದರು. ಮೇಲ್ವರ್ಗದವರ ದಬ್ಬಾಳಿಕೆಯನ್ನು ಎದುರಿಸಲು ಶಕ್ತಿಇಲ್ಲದೆ, ಅಸಹಾಯಕತೆ ಯಿಂದ ಮೌನವಾಗಿದ್ದ ಗ್ರಾಮದ ದಲಿತ ಹುಡುಗರ ಪೈಕಿ, ಮಾನ್ ಸಿಂಗ್ ಎಂಬ ಯುವಕ ಪೂಲನ್ ದೇವಿಯನ್ನು , ಒಮ್ಮೆ ರಾತ್ರಿ ಸಂತೈಸಿ, ಅಲ್ಲಿಂದ ಹೊರತಂದ.

ಮುಂದೆ, ಮಾನಸಿಂಗ್ ಒಳಗೊಂಡಂತೆ ಕೆಲವು ದಲಿತ ಹುಡುಗರ ಡಕಾಯಿತಿ ತಂಡವೊಂದನ್ನು ಪ್ರತ್ಯೇಕವಾಗಿ ಹೊಸದಾಗಿ ಪೂಲನ್ ದೇವಿ ಸ್ಥಾಪನೆ ಮಾಡಿದಳು. ಪುನ: ಚಂಬಲ್ ಕಣಿವೆಯ ಹೆದ್ದಾರಿ, ಮೇಲ್ವರ್ಗದ, ಶ್ರೀಮಂತರ ಮನೆಗಳ ಮೇಲೆ ರಾತ್ರಿ ವೇಳೆ ಡಕಾಯಿತಿ, ಸುಲಿಗೆ ಮಾಡಲು ಪ್ರಾರಂಭಿಸಿದಳು. ಬೆಳಕಿನ ವೇಳೆ ಚಂಬಲ್ ಕಣಿವೆ ಗುಹೆಗಳಲ್ಲಿ ನನ್ನ ತಂಡದೊಂದಿಗೆ ಅವಿತುಕೊಳ್ಳತೊಡಗಿದಳು.

ಈ ಡಕಾಯಿತಿ ಜೀವನದ ದಿನಗಳಲ್ಲಿ ಪೂಲನ್ ದೇವಿ ಒಬ್ಬಳೇ ಒಂದು ದಿನ (14-2-1981) ಪೊಲೀಸ್ ಡ್ರೆಸ್ ಹಾಕಿಕೊಂಡು, ಬೇಹಮಾಯಿ ಗ್ರಾಮಕ್ಕೆ ತೆರಳಿದಳು. ಈ ಹಿಂದೆ ಇವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ರಜಪೂತ್ ಠಾಕೂರ್ ಜಾತಿಯ, 22 ಹುಡುಗರನ್ನು ಹುಡುಕಿ, ಒಂದು ಕಡೆ ಕರೆತಂದಳು, ಸಾಲಾಗಿ ನಿಲ್ಲಿಸಿ, ಪ್ರತಿಕಾರಕ್ಕಾಗಿ ಬಂದೂಕಿನ ಗುಂಡಿನಿಂದ ಸಾಮೂಹಿಕವಾಗಿ ಹತ್ಯೆ ಮಾಡಿದಳು. ಬಡ ಮಹಿಳೆ ಮೇಲೆ ಅತ್ಯಾಚಾರ ಎಸಗುವ ಗಂಡಸರಿಗೆ ನಾನು ನೀಡುವ ಶಿಕ್ಷೆ, ಸಾವು ಎಂದು ಕೂಗಿ ಕೂಗಿ ಆ ಗ್ರಾಮದ ಜನರಿಗೆ ಹೇಳಿದಳು.

ಆದಿವಾಸಿ ಮಹಿಳೆ ಪೂಲನ್ ದೇವಿ ವಿರುದ್ಧ ಹಿಂದೆ ಸಾಮೂಹಿಕ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆ ಮಾಡಿದ ಸುದ್ದಿಯನ್ನು ಅಂದಿನ ಸುದ್ದಿ ಮಾಧ್ಯಮಗಳು ಪ್ರಚಾರ ಮಾಡಲಿಲ್ಲ . ಆದರೆ ಪೋಲನ್ ದೇವಿ ಹತ್ಯೆ ಮಾಡಿದ ಮೇಲ್ವರ್ಗದವರ ಈ ಘಟನೆಯನ್ನು ಸುದ್ದಿ ಮಾಧ್ಯಮಗಳು ರಾಷ್ಟ್ರ ಮತ್ತು ವಿಶ್ವದಲ್ಲಿ ಬಾರಿ ಸುದ್ದಿ ಮಾಡಿದವು.

ಆ ವೇಳೆಯಲ್ಲಿ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಆಗಿದ್ದ ಶ್ರೀ V.P.ಸಿಂಗ್ ಈ ಪೂಲನ್ ದೇವಿ ಹಿಡಿಯಲು ಪೊಲೀಸರಿಗೆ ಸೂಚಿಸಿದರು. ಪೂಲನ್ ದೇವಿ ಮತ್ತು ಅವರ ತಂಡವನ್ನು ಪೊಲೀಸರಿಂದ ಹಿಡಿಯಲು ಆಗಲಿಲ್ಲ. ಕೊನೆಗೆ ಬಹುಮಾನವನ್ನು ಘೋಷಣೆ ಮಾಡಲಾಯಿತು. ಆಗಲು ಈ ತಂಡವನ್ನು ಹಿಡಿಯಲು ಆಗಲಿಲ್ಲ. ಉತ್ತರ ಪ್ರದೇಶದಲ್ಲಿ ಮೇಲ್ವರ್ಗದವರ, ಭೂ ಮಾಲೀಕರುಗಳ ಪ್ರತಿಭಟನೆಗಳು, ವಿರೋಧಗಳು ಜಾಸ್ತಿಯಾದವು. ಒತ್ತಡ, ಅವಮಾನ ಎದುರಿಸಲಾಗದೆ ಶ್ರೀ V.P. ಸಿಂಗ್ ತನ್ನ ಮುಖ್ಯಮಂತ್ರಿ ಪದವಿಗೆ ಅಂದು ರಾಜೀನಾಮೆ ನೀಡಿದರು.

ದೇಶದಲ್ಲಿ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿ ಇವರು ಉತ್ತರಪ್ರದೇಶ ಸರ್ಕಾರ ಪೂಲನ್ ದೇವಿ ತಂಡವನ್ನು ಬಂಧನ ಮಾಡಲು ಆಗದಿರುವ ಅಸಹಾಯಕತೆಯನ್ನು ಗಮನಿಸಿ, ಮಧ್ಯ ಪ್ರವೇಶಿಸಿ, ಶರಣಾಗಲು ಅವಕಾಶಗಳ ಘೋಷಣೆ ಮಾಡಿದರು. ಪೂಲನ್ ದೇವಿ ಆಗ, ಕೆಲ ಷರತ್ತುಗಳನ್ನು ವಿಧಿಸಿ, ಫೆಬ್ರವರಿ 1983ರಲ್ಲಿ ಉತ್ತರ ಪ್ರದೇಶದ ಬದಲಿಗೆ, ಮಧ್ಯ ಪ್ರದೇಶ ಸರ್ಕಾರದ ಮುಂದೆ ತನ್ನ 10 ಜನರ ತಂಡದೊಂದಿಗೆ ಹಾಜರಾಗಿ, ಶಸ್ತ್ರ ತ್ಯಾಗ ಮಾಡಿ, ಶರಣಾದಳು. ಇವರೆಲ್ಲರನ್ನು ಬಂದನ ಮಾಡಿ ಮಧ್ಯ ಪ್ರದೇಶ ರಾಜ್ಯದ ಗ್ವಾಲಿಯರ್ ನ ಸೆಂಟ್ರಲ್ ಜೈಲಿನಲ್ಲಿ ಬಂದಿ ಮಾಡಲಾಯಿತು. IPC., ಅಪರಾಧಗಳಾದ ಡಕಾಯಿತಿ, ಸುಲಿಗೆ, ಕಳ್ಳತನ, ಕೊಲೆ, ಅಪಹರಣ… ಇತ್ಯಾದಿ 44 ಅಪರಾಧಗಳನ್ನು ಪೂಲನ ದೇವಿ ಮತ್ತು ಆಕೆಯ ತಂಡದ ವಿರುದ್ಧ ಉತ್ತರ ಪ್ರದೇಶ್ ಸರ್ಕಾರ ಹಾಕಿತು.

11 ವರ್ಷಗಳ ಅವಧಿ ವಿಚಾರಣೆ ನಡೆಯಿತು, ಯಾವುದೇ ಪ್ರಕರಣದಲ್ಲಿ ಸಾಕ್ಷಾಧಾರಗಳಿಲ್ಲದೆ ವಿಚಾರಣೆ ಮುಂದುವರೆಯುತ್ತಿತ್ತು. ಈ ವಿಳಂಬ ಕಾರಣಗಳಿಂದ 1994ರಲ್ಲಿ ಪುಲನ್ ದೇವಿ ಜೈಲಿನಿಂದ ಬಿಡುಗಡೆಯಾದರು.

1994ರಲ್ಲಿ ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ಮುಖ್ಯಮಂತ್ರಿ ಆಗಿದ್ದ ಶ್ರೀ ಮುಲಾಯಂ ಸಿಂಗ್ ಯಾದವ್ , ಪೂಲನ್ ದೇವಿ ವಿರುದ್ಧ ಇದ್ದ ಎಲ್ಲಾ ಕೇಸ್ ಗಳನ್ನು ವಾಪಸ್ ಪಡೆದರು. ಆಕೆಯನ್ನು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ, ಮಿರ್ಜಾಪುರ ಲೋಕಸಭಾ ಕ್ಷೇತ್ರದಿಂದ ದೇಶದ ಲೋಕಸಭೆಗೆ ಪೂಲನ್ ದೇವಿ MPಯಾಗಿ ಆಯ್ಕೆಯಾದರು. ಪುನಹ 1999ರಲ್ಲಿ ಲೋಕಸಭೆಗೆ MPಯಾಗಿ ಪುನರ್ ಆಯ್ಕೆಯಾದರು. ಈ ಮಧ್ಯೆ ರಾಜಕಾರಣಿ ಉಮೆದ್ ಸಿಂಗ್ ಅವರನ್ನು ಪೂಲನ್ ದೇವಿ ವಿವಾಹವಾದರು. ಈ ವೇಳೆಯಲ್ಲಿ ಪತಿ, ಪತ್ನಿ ಇಬ್ಬರೂ ದಲಿತರನ್ನು ಶೋಷಣೆ ಮಾಡುತ್ತಿದ್ದ ಮನುಸ್ಮೃತಿ ಯನ್ನು ಬೆಂಬಲಿಸುವುದು ಸರಿಯಲ್ಲ ಎಂದು ಬೌದ್ಧ ಧರ್ಮಕ್ಕೆ ಮತಾಂತರವಾದರು.

ಹೀಗೆ ಹಲವು ಏರಿಳಿತಗಳ ಜೀವನ ಸಾಗಿ ಲೋಕಸಭಾ ಸಂಸದೆಯಾಗಿದ್ದಾಗ, ಪೂಲನ್ ದೇವಿ, ದಿನಾಂಕ 25-7- 2001 ರಂದು ದೆಹಲಿಯ ತನ್ನ ಸರ್ಕಾರಿ ಬಂಗಲೆಯಿಂದ ಹೊರಗೆ ಬರುವಾಗ, ಗೇಟ್ ಬಳಿ ಕಾದು ಕೂತಿದ್ದ, ಶೇರ್ ಸಿಂಗ್ ರಾಣಾ ನೇತೃತ್ವದ ರಜಪೂತ್ ಜಾತಿಯ ಬಂದೂಕು ದಾರಿಗಳು, ಗುಂಡಿನ ಮಳೆಗೆರೆದು ಪೂಲನ್ ದೇವಿಯನ್ನು ಹಾಡುಹಗಲೇ ಹತ್ಯೆ ಮಾಡಿದರು. ಜಾತಿ ದ್ವೇಷ, ಜಾತಿವಾದಿಗಳ ಶಕ್ತಿ, ತೋಳ್ಬಲ, ಸೇಡು, ದಲಿತ ಆದಿವಾಸಿ ಮಹಿಳೆಯನ್ನು ಬದುಕಲು ಬಿಡಲಿಲ್ಲ. ರಕ್ತದ ಮಡುವಿನಿಂದ ಆಸ್ಪತ್ರೆಗೆ ಕೊಂಡೊಯ್ಯುವಾಗ, ಉಸಿರು ಹಿಡಿದು ಪೂಲನ್ ದೇವಿ ಹೇಳಿದ ಮಾತುಗಳು – “ಈ ದೇಶದಲ್ಲಿ ದಲಿತರಾಗಿ ಮತ್ತು ಬಡವರ ಹೊಟ್ಟೆಯಲ್ಲಿ ಮಹಿಳೆಯಾಗಿ, ಜನಿಸಬೇಡಿ. ಮುಂದೆಂದೂ ಮತ್ಯಾವ ಜನ್ಮದಲ್ಲೂ ನಾನು ಜನಿಸುವುದಿಲ್ಲ”. ಎಂದು ಹೇಳುತ್ತಾ ಪೂಲನ್ ದೇವಿ ಆಸ್ಪತ್ರೆಗೆ ಸಾಗುವ ರಸ್ತೆಯಲ್ಲಿಯೇ ಪ್ರಾಣಬಿಟ್ಟಳು.

ಘೋರ ದೌರ್ಜನ್ಯಗಳು; ನಿಲ್ಲದ ಅತ್ಯಾಚಾರ; ಮೇಲ್ವರ್ಗದ ಜಾತಿವಾದಿಗಳ, ಭೂಮಾಲೀಕರ ಮನಸ್ಥಿತಿ, ಅಟ್ಟಹಾಸ, ತೋಳ್ಬಲ,….. ಇವುಗಳೊಂದಿಗೆ
ಈ ದೇಶದ ಆದಿವಾಸಿ ಮಹಿಳೆ ಪೂಲನ್ ದೇವಿ (10-8-1963 ರಿಂದ 25-7-2001) (38 ವರ್ಷಗಳು) ಪಯಣಿಸಿದ ಹೋರಾಟದ ಜೀವನಗಾಥೆಯನ್ನು ನೋವಿನೊಂದಿಗೆ ತಿಳಿಸುತ್ತಿದೆನೆ

ಕಳೆದ ಕಾಲಘಟ್ಟಗಳಲ್ಲಿ ಪೂಲನ್ ದೇವಿ ಎದುರಿಸಿದಂತಹ ದೌರ್ಜನ್ಯ, ಶೋಷಣೆಗಳಂತಹ ಮತ್ತಷ್ಟು ರೂಪದ ದಲಿತರ, ಶೋಷಣೆಯ ಬದುಕುಗಳನ್ನು ತಿಳಿಯಲು ಈಗ ರಾಜ್ಯದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ “ಲ್ಯಾಂಡ್ ಲಾರ್ಡ್’ ಕನ್ನಡ ಸಿನಿಮಾವನ್ನು ನೋಡಿ

ಹೆಚ್ಚಿನ ಸುದ್ದಿ