Thursday, June 4, 2026
Homeಅಂಕಣಗಳುಚುನಾವಣೆಯಲ್ಲಿ ಗೆದ್ದದ್ದು ರಾಜಕೀಯ ಪಕ್ಷಗಳಾದರೆ, ಸೋಲುತ್ತಿರುವುದು ಮಾತ್ರ ಭಾರತದ ಪ್ರಜಾಪ್ರಭುತ್ವ!

ಚುನಾವಣೆಯಲ್ಲಿ ಗೆದ್ದದ್ದು ರಾಜಕೀಯ ಪಕ್ಷಗಳಾದರೆ, ಸೋಲುತ್ತಿರುವುದು ಮಾತ್ರ ಭಾರತದ ಪ್ರಜಾಪ್ರಭುತ್ವ!

ಭಾಸ್ಕರ ಎಂ ಮುದೇನೂರು ನ್ಯಾಯವಾದಿಗಳು ರಾಣೇಬೆನ್ನೂರು

ಚುನಾವಣೆಯಲ್ಲಿ ಗೆದ್ದದ್ದು ರಾಜಕೀಯ ಪಕ್ಷಗಳಾದರೆ, ಸೋಲುತ್ತಿರುವುದು ಮಾತ್ರ ಭಾರತದ ಪ್ರಜಾಪ್ರಭುತ್ವ!ಚುನಾವಣೆಗಳು ನೈತಿಕ ಮೌಲ್ಯಗಳ ತಳಹದಿಯ ಮೇಲೆ ನೆಡೆಯುತ್ತಿದ್ದವು ಆದರೆ ಇಂದು ಚುನಾವಣೆಗಳು ಅಕ್ಷರಶಃ ಚುನಾವಣಾ ಆಯೋಗದ ಸಮಾಧಿಯ ಮೇಲಿನ ವಿಜಯೋತ್ಸವವಾಗಿವೆ!ಹಣವಂತರಿಗೆ ಮಾತ್ರ ಚುನಾವಣೆಗಳು ಎಂಬಂತಾಗಿ ಹಣ ಹೆಂಡ ಸೀರೆ, ಕುಕ್ಕರ್, ಉಂಗುರ, ಇತ್ಯಾದಿ ಇತ್ಯಾದಿಗಳನ್ನು ಹಂಚುವುದು ಚುನಾವಣೆಯ ಭಾಗವಾಗಿಯೇ ಹೋಗಿದೆ!ಚುನಾವಣಾ ಭ್ರಷ್ಟಾಚಾರ ನಿಲ್ಲದ ಹೊರತು ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಗಳು ಈಡೇರಲು ಸಾಧ್ಯವೇ ಇಲ್ಲ!ಅಷ್ಟಕ್ಕೂ ರಾಜಕೀಯ ಪಕ್ಷಗಳು ಹಂಚುವ ಅಕ್ರಮಗಳು ಯಾರ ಸ್ವಂತ ದುಡಿಮೆಯ ಪ್ರತಿಫಲವಾಗಿವೆ?ಸ್ವಂತ ಪರಿಶ್ರಮದಿಂದ ಮಾಡಿದ ಆಸ್ತಿಯನ್ನು ದಾನ ಮಾಡಲಿ ನೋಡೋಣ!ಚುನಾವಣಾ ಅಕ್ರಮ ಸಂತಾನಕ್ಕೆ ಯಾವ ಪಕ್ಷಗಳು ಹೊರತಾಗಿಲ್ಲ!ರಾಷ್ಟ್ರೀಯತೆ ಧರ್ಮ ಇತ್ಯಾದಿ ಸಾರುವ ಬಿಜೆಪಿ, ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯೆಂದು ಹೇಳಿಕೊಳ್ಳುವ ಕಾಂಗ್ರೆಸ್ ಎಲ್ಲವೂ ಚುನಾವಣಾ ಅಕ್ರಮದ ಸಂತಾನವೇ!( ಉಳಿದ ಪಕ್ಷಗಳೇನು ಸಾಚಾ ಅಲ್ಲ)ಈ ಚುನಾವಣಾ ಅಕ್ರಮ ಇಂದು ನಿನ್ನೆಯದಲ್ಲ!ಅದಕ್ಕೂ ಇತಿಹಾಸವಿದೆ!1978 ರ ಕಾಲಘಟ್ಟದಿಂದ 2000 ರ ವರೆಗೆ ತೆರೆಮರೆಯಲ್ಲಿದ್ದ ಆಮಿಷಗಳು 2004 ರ ಕಾಲಘಟ್ಟದಿಂದಲೇ ಬಹಿರಂಗವಾಗಿಯೇ ಚುನಾವಣೆಯ ಭಾಗವಾದವು!ಪ್ರಸ್ತುತ ಪಂಚರಾಜ್ಯ ಚುನಾವಣೆಯನ್ನೇ ಗಮನಿಸಿ ಯಾವ ಪಕ್ಷ ಸೈದ್ಧಾಂತಿಕ ನಿಲುವಿನ ಮೇಲೆ ಚುನಾವಣೆ ಎದುರಿಸಿದೆ?ಪಶ್ಚಿಮ ಬಂಗಾಳದ ಚುನಾವಣೆಯನ್ನೇ ಗಮನಿಸಿ ಒಂದು ಕಾಲದಲ್ಲಿ ( 2011 ರಲ್ಲಿ) ಟಿ.ಎಂ.ಸಿ. ಯ ಬೆಂಬಲಕ್ಕೆ ನಿಂತಿದ್ದ ಬಿಜೆಪಿ ಅಲ್ಲಿನ ಎಡರಂಗ, ಮತ್ತು ಕಾಂಗ್ರೆಸ್ ಪಕ್ಷದ ಸಂಘಟನೆಯ ಕೊರತೆಯ ಲಾಭಪಡೆದು ರಾಜಕೀಯ ಮುನ್ನೆಲೆಗೆ ಬಂದಿತಾದರೂ ಟಿ.ಎಂ.ಸಿ ಯ ಏಳು ಜನ ಬೃಹತ್ ಹಗರಣಗಳ ಆಪಾದಿತರು ತನ್ನ ಪಕ್ಷಕ್ಕೆ ಬಂದ ಮೇಲೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಸಾಧ್ಯವಾಯಿತು!ಒಂದು ಕಾಲದ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಆಗಿದ್ದ ಸಿ.ಬಿ.ಐ, ಇಂದು ಐ.ಟಿ. ಇ.ಡಿ ಗಳು ಬಿಜೆಪಿಯ ಅಸ್ತ್ರವಾಗಿರುವುದು ಗುಟ್ಟಾಗಿ ಉಳಿದಿಲ್ಲ!ಯಾರೆಲ್ಲ ಭ್ರಷ್ಟಾಚಾರದ ಆಪಾದಿತರಾಗಿದ್ದರೋ ಅವರೆಲ್ಲರೂ ಬಿಜೆಪಿಯ ಪಡಸಾಲೆಯಲ್ಲಿದ್ದಾರೆ!ಇನ್ನು ಟಿ.ವಿ.ಕೆ ಯ ಚುನಾವಣಾ ಫಲಿತಾಂಶ ತಮಿಳುನಾಡಿನ ಮತದಾರನ ಯೋಚನಾ ಲಹರಿಯ ವಿಚಿತ್ರವನ್ನು ಪ್ರದರ್ಶನ ಮಾಡಿದೆ!ಅಲ್ಲಿಯೂ ಆಮಿಷಗಳ ಸಂತೆ ಇದೆ!ರಾಜಕೀಯ ಸಿದ್ಧಾಂತ, ಹೋರಾಟದ ಹಿನ್ನೆಲೆ ಯಾವುದೂ ಇಲ್ಲದಿದ್ದರೂ ಸಹ ರಾತ್ರೋರಾತ್ರಿ ಒಬ್ಬ ಚಲನಚಿತ್ರ ನಟ ಒಂದು ಸರಕಾರವನ್ನು ರಚಿಸುತ್ತಾನೆಂದರೆ ಅದು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೇ ತಮಿಳುನಾಡಿನಲ್ಲೂ ಸಾಧ್ಯ ಎಂದು ನಿರೂಪಿಸಿದ್ದಾನೆ!ಇಷ್ಟೆಲ್ಲಾ ಚುನಾವಣಾ ಅಕ್ರಮಗಳು ನೆಡೆಯುತ್ತಿದ್ದರೂ ಸಹ ಪ್ರಶ್ನಿಸಬೇಕಾದ ಮಾಧ್ಯಮಗಳಾಗಲಿ, ಚುನಾವಣಾ ಆಯೋಗವಾಗಲಿ ಪ್ರಶ್ನಿಸದೇ ಮೂಕ ಸಾಕ್ಷಿಗಳಾಗಿದ್ದಾರೋ ಅಥವಾ ಸುಮ್ಮನಿರಿಸಿದ್ದಾರೋ?ಒಟ್ಟಿನಲ್ಲಿ ಚುನಾವಣೆಯಲ್ಲಿ ಗೆದ್ದವನು ರಾಜಕೀಯ ಚಾಣಾಕ್ಯನಾಗುತ್ತಾನೆ, ಹಣ ಹಂಚಿದವನು ಮಾಣಿಕ್ಯನಾಗುತ್ತಾನೆ!ಚುನಾವಣೆಯಲ್ಲಿ ಗೆಲುವೊಂದೇ ಮುಖ್ಯ!ಚುನಾವಣೆಯನ್ನು ಗೆಲ್ಲಲು ಹಾದರದ ಹಾದಿಯನ್ನೇ ತುಳಿದಿರಲಿ ಮಾಧ್ಯಮಗಳು ಮಾತ್ರ ಅತಿರಂಜಿತವಾಗಿ ವರ್ಣರಂಜಿತವಾಗಿ ಚಿತ್ರಿಸುತ್ತಿವೆ!ಮತದಾನದ ಹಕ್ಕು ನಮ್ಮ ಕೈಯಲ್ಲೇ ಇದ್ದರೂ ಸಹ ಯೋಗ್ಯ ವ್ಯಕ್ತಿಯನ್ನು, ಪರಿಣಾಮಕಾರಿ ಚುನಾವಣಾ ವ್ಯವಸ್ಥೆಯನ್ನು ಹಾಗೂ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲಾಗುತ್ತಿಲ್ಲ!ರಾಜಕಾರಣಿ ಮತದಾರನನ್ನು ಜಾಗೃತನಾಗಲು ಬಿಡುತ್ತಿಲ್ಲ, ಆತನದೇ ಸರ್ಕಾರ ಚುನಾವಣಾ ಆಯೋಗದ ಮೂಲಕ ಮತದಾನದ ಜಾಗೃತಿಗಾಗಿ ಕೋಟಿ ಗಟ್ಟಲೆ ಹಣವನ್ನು ಖರ್ಚು ಮಾಡುತ್ತದೆ!ನಾವೇ ಸರಕಾರವನ್ನು ಆಯ್ಕೆ ಮಾಡಬಹುದಾದ ಅಭೂತಪೂರ್ವ ಹಕ್ಕನ್ನು ಸಂವಿಧಾನ ನಮಗೆ ನೀಡಿದ್ದರೂ ಸಹ ನಮ್ಮ ಮತಗಳು ಮಾರಾಟವಾಗುತ್ತಿರುವುದು ಮಾತ್ರ ದುರಂತ!ಉದ್ಯೋಗಕ್ಕಾಗಿ, ಶಿಕ್ಷಣಕ್ಕಾಗಿ, ಆರೋಗ್ಯಕ್ಕಾಗಿ, ವಸತಿಗಾಗಿ ಮತ ಚಲಾಯಿಸದ ನಾವುಗಳು, ನಾವೇ ಆಯ್ಕೆ ಮಾಡಿದ ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದೇವೆ! ಯಾವ ವಿಷಯಗಳು ಚುನಾವಣೆಯಲ್ಲಿ ಚರ್ಚೆಯಾಗುತ್ತವೆಯೋ ಅಂತಹದ್ದೇ ಸರ್ಕಾರ ರಚನೆಯಾಗುತ್ತದೆ!ಮತದಾರ ಜಾಗೃತನಾಗದ ಹೊರತು ಚುನಾವಣೆಗಳು ಎದುರಾಗುತ್ತಲೇ ಇರುತ್ತವೆ, ಕಾರಣವಿಲ್ಲದೇ ಉಪಚುನಾವಣೆಗಳು ಬರುತ್ತವೆ, ಪ್ರಶ್ನಿಸದೇ ಮತದಾನಕ್ಕೆ ಸಿದ್ಧರಾಗಬೇಕು!ಇಲ್ಲದಿದ್ದರೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಗೆಲ್ಲುತ್ತವೆ, ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಭಾರತ ಸೋಲುತ್ತಲೇ ಹೋಗುತ್ತದೆ!

ಹೆಚ್ಚಿನ ಸುದ್ದಿ