Tuesday, August 11, 2026
Homeರಾಜಕೀಯಗ್ಯಾರಂಟಿ ಕಿರುಕುಳ: ಡಾ. ಅಶ್ವತ್ಥನಾರಾಯಣ್ ಆಕ್ಷೇಪ

ಗ್ಯಾರಂಟಿ ಕಿರುಕುಳ: ಡಾ. ಅಶ್ವತ್ಥನಾರಾಯಣ್ ಆಕ್ಷೇಪ

ಬೆಂಗಳೂರು: ಗ್ಯಾರಂಟಿ ಫಲಾನುಭವಿಯ ಹೆಸರು ಏಕಾಏಕಿ ತೆಗೆದುಹಾಕುವುದು ಮತ್ತು ಕಿರುಕುಳ ಕೊಡುವುದು ಎಷ್ಟು ಸರಿ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಆಕ್ಷೇಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡಿದರು. ಗೃಹಲಕ್ಷ್ಮಿ ಎಲ್ಲರಿಗೂ ಕೊಡುವುದಾಗಿ ಹೇಳಿದ್ದರು. ಜನರು ಕೇಳಿದ್ದಾರಾ? ಗೃಹಜ್ಯೋತಿ ಕೊಡಿ ಎಂದು ಜನರು ಕಾಂಗ್ರೆಸ್ಸಿನವರನ್ನು ಕೇಳಿದ್ದಾರಾ? ಕಾಂಗ್ರೆಸ್ ದುಡ್ಡಿನಿಂದ ಕೊಡುತ್ತಿದ್ದಾರಾ? ಸರಕಾರದ, ಜನರ ತೆರಿಗೆ ದುಡ್ಡಿನಿಂದ ಕೊಡುತ್ತಿದ್ದಾರೆ. ಇವರಿಗೆ ಮತ ಬೇಕಿತ್ತು. ಆಗ ಎಲ್ಲರಿಗೂ ಕೊಡುವುದಾಗಿ ಹೇಳಿ ಈಗ ಬರೆ ಎಳೆಯುವುದು ಸರಿಯೇ ಎಂದು ಕೇಳಿದರು.
ಪಡಿತರ ಶೇ 50 ಜನರಿಗೆ ಸಿಗುತ್ತಿಲ್ಲ. ಕೇವಲ ಸರತಿ ಸಾಲಿನಲ್ಲಿ ಕಾಯುವಂತಾಗಿದೆ. ಬಡವರಿಗೆ ಕಿರುಕುಳ ಕೊಡುವ ಸರಕಾರ ಇದೆಂದು ಟೀಕಿಸಿದರು. ರೇಷನ್ ಇಲ್ಲ; ಕಾಯುವುದೇ ಗ್ಯಾರಂಟಿ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಬೆಂಗಳೂರಿನ ಜನರು ಶಾಪಗ್ರಸ್ತರಾಗಿದ್ದಾರೆ ಎಂದು ಆರೋಪಿಸಿದರು. ನಗರವನ್ನು ಕಾಂಗ್ರೆಸ್ ಕಡೆಗಣಿಸಿದೆ. ಒಂದೂವರೆ ಕೋಟಿ ಜನರಿದ್ದಾರೆ. 20ರಿಂದ 30 ಲಕ್ಷ ಜನರು ಬರುತ್ತಾರೆ. ಅವರು ಬೆಂಗಳೂರು ನಗರಕ್ಕೆ ಬರಲು ಹೆದರಬೇಕೇ ಎಂದು ಕೇಳಿದರು. ಜಾಗೃತಿ ಕಾರ್ಯ ನಮ್ಮ ಕೆಲಸ ಎಂದು ತಿಳಿಸಿದರು.
ಸರಕಾರ ರೀ ಬೂಟ್ ಆಗುತ್ತಿದೆ. 3 ವರ್ಷ ಕಣ್ಣೀರಲ್ಲೇ ತೊಳೆದಿದ್ದಾರೆ. ಅಭಿವೃದ್ಧಿ ಶೂನ್ಯತೆ ಸೇರಿ ಭ್ರಷ್ಟಾಚಾರ, ಅವ್ಯವಸ್ಥೆ, ಕೆಟ್ಟ ಆಡಳಿತ ನೀಡಿದ್ದಾರೆ. 3 ರ್ಷದ ಆಡಳಿತ ನೋಡಿಯೇ ಜನರು ಸುಸ್ತಾಗಿದ್ದಾರೆ. ಇನ್ನೆರಡು ವರ್ಷದ್ದು ಕಾದು ನೋಡೋಣ ಎಂದು ವ್ಯಂಗ್ಯವಾಡಿದರು. 3 ವರ್ಷದ ಆಡಳಿತ ನೋಡಿ ಜನರು ಏನೂ ಬಯಸದ ಸ್ಥಿತಿ ಬಂದಿದೆ ಎಂದು ತಿಳಿಸಿದರು.
ಬಿಡಬ್ಲ್ಯುಎಸ್‍ಎಸ್‍ಬಿ ನೀರು ಸಂಗ್ರಹ ಉತ್ತೇಜನಕ್ಕೆ ಇದೆಯೇ? ದಂಡ ಸಂಗ್ರಹಕ್ಕಾಗಿ ಇದೆಯೇ ಎಂದು ಕೇಳಿದರು. ಇವರು ನೀರು ಸಂರಕ್ಷಣೆಗೆ ಇದ್ದಾರಾ? ನೀರು ಪೋಲು ಮಾಡಲು ಇದ್ದಾರಾ ಎಂದು ಪ್ರಶ್ನಿಸಿದರು. ಮಳೆನೀರು ಸಂಗ್ರಹ ಆದರೆ, ನೀರಿನ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ನಗರವೇ ಇವತ್ತು ಕಾಂಕ್ರೀಟ್ ಕಾಡಿನಂತಾಗಿದೆ. ಎಲ್ಲೂ ನೀರು ಇಂಗುತ್ತಿಲ್ಲ. ಬೋರ್‍ವೆಲ್ ನೀರು ತೆಗೆಯುತ್ತಿದ್ದು, ನೀರಿಂಗಿಸುವಿಕೆ ಹೇಗೆ? ಅದಕ್ಕಾಗಿ ಬಿಡಬ್ಲ್ಯುಎಸ್‍ಎಸ್‍ಬಿ ಇದೆಯೇ? ಅಥವಾ ದಂಡ ಸಂಗ್ರಹಿಸಿ ಸಾಮ್ರಾಜ್ಯ ಕಟ್ಟುತ್ತಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಸುಧಾರಣೆ ಏನಾದರೂ ಮಾಡಿದ್ದಾರಾ ಎಂದು ಕೇಳಿದರು. ಜವಾಬ್ದಾರಿಯುತವಾಗಿ ಕೆಲಸ ಮಾಡಿ; ಗುಣಮಟ್ಟದ ನೀರು ಕೊಡಿ. ಇನ್ನೂ ಒಂದೈದು ಪ್ರಶಸ್ತಿ ಬರಲಿ ಎಂದು ತಿಳಿಸಿದರು. ಜನರಿಗೆ ಸಂತೃಪ್ತಿ ಇರಲಿ ಎಂದರು.
ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ರಾಜ್ಯ ವಕ್ತಾರ ಪ್ರಕಾಶ್ ಶೇಷರಾಘವಾಚಾರ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್ ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಅವರು ಭಾಗವಹಿಸಿದ್ದರು.

ಹೆಚ್ಚಿನ ಸುದ್ದಿ