Thursday, September 3, 2026
Homeರಾಜಕೀಯಕರ್ನಾಟಕದ ಪ್ರಗತಿಗೆ 'ಎಚ್‌ಡಿಬಿ' ಪ್ರದೇಶ ಬಲವಾದತಂತ್ರಜ್ಞಾನ ಎಂಜಿನ್: ಸಚಿವ ಪ್ರಿಯಾಂಕ್ ಖರ್ಗೆ

ಕರ್ನಾಟಕದ ಪ್ರಗತಿಗೆ ‘ಎಚ್‌ಡಿಬಿ’ ಪ್ರದೇಶ ಬಲವಾದತಂತ್ರಜ್ಞಾನ ಎಂಜಿನ್: ಸಚಿವ ಪ್ರಿಯಾಂಕ್ ಖರ್ಗೆ

ಹುಬ್ಬಳ್ಳಿ (ಸೆಪ್ಟೆಂಬರ್ 03, 2026): ಹುಬ್ಬಳ್ಳಿ-ಧಾರವಾಡ-ಬೆಳಗಾವಿ (HDB) ಪ್ರದೇಶವು ಕರ್ನಾಟಕದ ತಂತ್ರಜ್ಞಾನ, ಸುಧಾರಿತ ತಯಾರಿಕೆ ಮತ್ತು ಹೂಡಿಕೆಯ ಪ್ರಮುಖ ಕಾರಿಡಾರ್ ಆಗಿ ಹೊರಹೊಮ್ಮುತ್ತಿದೆ ಎಂದು ಗೃಹ, ಐಟಿ/ಬಿಟಿ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ 6ನೇ ಆವೃತ್ತಿಯ ‘ಎಚ್‌ಡಿಬಿ ಟೆಕ್ಸೆಲರೇಷನ್ 2026’ (ಹುಬ್ಬಳ್ಳಿ ಧಾರವಾಡ, ಬೆಳಗಾವಿ ಪ್ರದೇಶ) ಕಾರ್ಯಕ್ರಮದ ಸಂದರ್ಭದಲ್ಲಿ ಸಚಿವರು ಸಂದೇಶ ನೀಡಿ “ಎಚ್‌ಡಿಬಿ ಪ್ರದೇಶವು ಸೆಮಿಕಂಡಕ್ಟರ್, ಇಎಸ್‌ಡಿಎಮ್ (ESDM), ಎಲೆಕ್ಟ್ರಿಕ್ ವಾಹನ, ಕೃತಕ ಬುದ್ಧಿಮತ್ತೆ (AI) ಮತ್ತು ಡೀಪ್‌ಟೆಕ್ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುತ್ತಿದೆ. ಹುಬ್ಬಳ್ಳಿಯ ತಂತ್ರಜ್ಞಾನ ವಲಯ, ಧಾರವಾಡದ ಶೈಕ್ಷಣಿಕ ಸಂಸ್ಥೆಗಳು ಹಾಗೂ ಬೆಳಗಾವಿಯ ಏರೋಸ್ಪೇಸ್ ಮತ್ತು ತಯಾರಿಕಾ ರಂಗ — ಈ ಮೂರೂ ನಗರಗಳ ಬಲವನ್ನು ಒಂದೆಡೆ ತರುವುದು ನಮ್ಮ ‘ಬಿಯಾಂಡ್ ಬೆಂಗಳೂರು’ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಉತ್ತರ ಕರ್ನಾಟಕದಲ್ಲಿ ಹೊಸ ಉದ್ಯಮಗಳು ಬೆಳೆಯಲು ಹಾಗೂ ಗುಣಮಟ್ಟದ ಉದ್ಯೋಗಗಳು ಸೃಷ್ಟಿಯಾಗಲು ಸರ್ಕಾರ ಎಲ್ಲ ರೀತಿಯ ಬೆಂಬಲ ನೀಡಲಿದೆ.” ಎಂದಿದ್ದಾರೆ.

ಈ ಶೃಂಗಸಭೆಯಲ್ಲಿ 700ಕ್ಕೂ ಹೆಚ್ಚು ಪ್ರತಿನಿಧಿಗಳು 100ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಹಾಗೂ 25ಕ್ಕೂ ಹೆಚ್ಚು ಹೂಡಿಕೆದಾರರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಟಾರ್ಟ್‌ಅಪ್‌ಗಳಲ್ಲಿ ಶೇ. 40 ರಿಂದ 50 ರಷ್ಟು ಸಂಸ್ಥೆಗಳು ಬೆಂಗಳೂರು, ಗುಜರಾತ್ ಸೇರಿದಂತೆ ಎಚ್‌ಡಿಬಿ ಪ್ರದೇಶದ ಹೊರಗಿನಿಂದ ಆಗಮಿಸಿದ್ದವು. ಮುಂದಿನ 6 ತಿಂಗಳಲ್ಲಿ ಬೆಳಗಾವಿಯಲ್ಲಿ 2 ಲಕ್ಷ ಚದರ ಅಡಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದ್ದು, ನವೋದ್ಯಮಗಳ ಪ್ರೋತ್ಸಾಹಕ್ಕೆ ₹25 ಕೋಟಿ ಕ್ಲಸ್ಟರ್ ಫಂಡ್ ಘೋಷಿಸಲಾಗಿದೆ. ಎಚ್‌ಡಿಬಿ ಕ್ಲಸ್ಟರ್ ₹2.79 ಲಕ್ಷ ಕೋಟಿ ಮೌಲ್ಯದ ಆರ್ಥಿಕತೆಯನ್ನು ಹೊಂದಿದ್ದು, ರಾಜ್ಯದ ಜಿಡಿಪಿಗೆ ಶೇ. 11 ರಷ್ಟು ಕೊಡುಗೆ ನೀಡುತ್ತಿದೆ.

ಹೆಚ್ಚಿನ ಸುದ್ದಿ