ಬೆಂಗಳೂರು, ಮೇ 15: ಸಂತ ಕವಿ ಕನಕದಾಸರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರು ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ ಸಮಾಜ ಸುಧಾರಕರು. ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರನ್ನು ‘ವಿಶ್ವಮಾನವ’ನಾಗಿ ಕಾಣಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂತ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ವತಿಯಿಂದ ನಗರದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕನಕದಾಸರ ಸಮಗ್ರ ಸಾಹಿತ್ಯದ ಅನುವಾದಿತ 40 ಕೃತಿಗಳ ಸಂಪುಟಗಳನ್ನು ಬಿಡುಗಡೆಗೊಳಿಸಿದರು ಹಾಗೂ ನೂತನವಾಗಿ ನಿರ್ಮಿಸಲಾದ ‘ಕನಕ ಶಿಲ್ಪವನ’ವನ್ನು ಸಾರ್ವಜನಿಕ ಲೋಕಾರ್ಪಣೆ ಮಾಡಿದರು.
ಸಮಸಮಾಜದ ಕನಸು ಇಂದಿಗೂ ನನಸಾಗಿಲ್ಲ
ಬಳಿಕ ಮಾತನಾಡಿದ ಸಿಎಂ, “ಕನಕದಾಸರು ಮತ್ತು ಜಗದ್ಗುರು ಬಸವಣ್ಣನವರು ಅಂದು ಬಯಸಿದ್ದ ಸಮಸಮಾಜ ಇಂದಿಗೂ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿಲ್ಲ. ಇಂದಿನ ಯುವ ಪೀಳಿಗೆಯು ಇತಿಹಾಸವನ್ನು ಅರಿಯುವುದು ಅತ್ಯಗತ್ಯ. ಇತಿಹಾಸವನ್ನು ಅರಿಯದಿದ್ದರೆ ಸಮಾಜದ ಲೋಪದೋಷಗಳನ್ನು ತಿದ್ದಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
ಜಾಗತಿಕ ಮಟ್ಟಕ್ಕೆ ದಾಸ ಸಾಹಿತ್ಯ
ಕನಕದಾಸರು 350ಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿದ ಬಹುಮುಖ ಪ್ರತಿಭೆ ಎಂದು ಶ್ಲಾಘಿಸಿದ ಸಿದ್ದರಾಮಯ್ಯ, ಅವರ ಸಾಹಿತ್ಯವು ಇತರ ರಾಜ್ಯ ಹಾಗೂ ದೇಶಗಳಿಗೆ ತಲುಪುತ್ತಿರುವುದು ಸಂತಸದ ಸಂಗತಿ ಎಂದರು. ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಕಾ.ತ.ಚಿಕ್ಕಣ್ಣ ಅವರ ನೇತೃತ್ವದಲ್ಲಿ ಕನಕದಾಸರ ಕೃತಿಗಳು ಈಗಾಗಲೇ 14 ಭಾಷೆಗಳಿಗೆ ತರ್ಜಮೆಯಾಗಿವೆ. ಈ ಅನುವಾದಿತ ಪ್ರತಿಗಳ ಹೆಚ್ಚಿನ ಮುದ್ರಣಕ್ಕಾಗಿ ಸರ್ಕಾರದಿಂದ ಇನ್ನಷ್ಟು ಹೆಚ್ಚಿನ ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದರು. ಇದೇ ವೇಳೆ ಕೃತಿಗಳನ್ನು ಭಾಷಾಂತರಿಸಿದ ವಿದ್ವಾಂಸರನ್ನು ಸರ್ಕಾರದ ಪರವಾಗಿ ಗೌರವಿಸಲಾಯಿತು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕ ಮುನಿರತ್ನ, ಸಾಹಿತಿ ಬಂಜಗೆರೆ ಜಯಪ್ರಕಾಶ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
