Sunday, March 22, 2026
Homeಜಿಲ್ಲಾ ಸುದ್ದಿಗಳುಒಳಮೀಸಲಾತಿ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆಗೆ ಗೋರ ಸೇನಾ ಬೆಂಬಲ

ಒಳಮೀಸಲಾತಿ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆಗೆ ಗೋರ ಸೇನಾ ಬೆಂಬಲ

ಲಿಂಗಸುಗೂರು, ಮಾ.21: ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಒಳಮೀಸಲಾತಿ ರೋಸ್ಟರ್ ಹಂಚಿಕೆ ಕ್ರಮವನ್ನು ವಿರೋಧಿಸಿ ಹಾಗೂ ಹಳೆಯ ಮೀಸಲಾತಿ ವ್ಯವಸ್ಥೆಯನ್ನು ಮುಂದುವರಿಸುವಂತೆ ಆಗ್ರಹಿಸಿ ಮಾರ್ಚ್ 24 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಪ್ರತಿಭಟನೆಗೆ ಗೋರ ಸೇನಾ ರಾಷ್ಟ್ರೀಯ ಸಂಘಟನೆ ಬಾಹ್ಯ ಬೆಂಬಲ ಘೋಷಿಸಿದೆ.
ಈ ಕುರಿತು ಲಿಂಗಸುಗೂರಿನಲ್ಲಿ ಸಂಘಟನೆಯ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲಾತಿ ಜಾರಿಯಿಂದ ಬಂಜಾರ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು. ಈಗಾಗಲೇ ರಾಜ್ಯದ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆದಿರುವ ನೇಮಕಾತಿಗಳಲ್ಲಿ ರೋಸ್ಟರ್ ಬಿಂದುವಿನ ಅನ್ವಯ ಬಿ ಮತ್ತು ಸಿ ವರ್ಗಗಳಿಗೆ ಶೂನ್ಯ ಉದ್ಯೋಗ ಹಂಚಿಕೆ ಆಗಿರುವುದನ್ನು ಅವರು ತೀವ್ರವಾಗಿ ಖಂಡಿಸಿದರು.
ಈ ಪರಿಸ್ಥಿತಿ ಮುಂದುವರಿದರೆ ಸಮುದಾಯದ ಯುವಕರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಹೀಗಾಗಿ, ಸರ್ಕಾರ ತಕ್ಷಣವೇ ಒಳಮೀಸಲಾತಿ ರೋಸ್ಟರ್ ಹಂಚಿಕೆಯನ್ನು ಹಿಂತೆಗೆದು, ಹಿಂದಿನ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಮಾರ್ಚ್ 24 ರಂದು ನಡೆಯುವ ಪ್ರತಿಭಟನೆಗೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಎಲ್ಲಾ ತಾಂಡಾಗಳ ನಾಯಕರು, ಕಾರ್ಯಕರ್ತರು ಹಾಗೂ ಯುವಕರು ಭಾಗವಹಿಸಿ ಬೆಂಬಲ ಸೂಚಿಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಮರೇಶ ಸರ್ಕಾರ್, ಅಮರೇಶ್ ರಾಠೋಡ್, ದೇವರಾಜ ಪವಾರ, ಅಮರೇಶ ಕಾರಬರಿ, ಪ್ರಕಾಶ ರಾಠೋಡ್ ಹಾಗೂ ಪ್ರವೀಣ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ