ಬೆಂಗಳೂರು: ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ತಮ್ಮ ತಂಡದೊಂದಿಗೆ ಬರ ಅಧ್ಯಯನ ನಡೆಸಿದ ಬಿಜೆಪಿ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ಕೇವಲ ಬಾಯಲ್ಲಿ ಬರ ಇದೆ ಎನ್ನುತ್ತಿದೆಯೇ ಹೊರತು, ಬರಪೀಡಿತ ತಾಲ್ಲೂಕುಗಳನ್ನು ಅಧಿಕೃತವಾಗಿ ಘೋಷಿಸಲು ಮೀನಾಮೇಷ ಎಣಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
- ಬರ ಘೋಷಣೆ ಹಾಗೂ ಸಾಲ ಮನ್ನಾಕ್ಕೆ ಆಗ್ರಹ
ಬರ ಪರಿಸ್ಥಿತಿ: “ನಾವು ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪರಿಶೀಲನೆ ನಡೆಸಿದ್ದೇವೆ. ಸ್ವಲ್ಪ ಮಟ್ಟಿಗೆ ಮಳೆಯಾಗಿದ್ದರೂ ಮೇಲ್ನೋಟಕ್ಕೆ ಹಸಿರು ಕಾಣಿಸುತ್ತಿದೆ. ಆದರೆ ಆ ಹಸಿರು ಯಾವುದೇ ಆರ್ಥಿಕ ಬೆಳೆಯಾಗಿ ರೈತರ ಕೈ ಸೇರುತ್ತಿಲ್ಲ. ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೂ ಸರ್ಕಾರ ತಕ್ಷಣವೇ ಬರಪೀಡಿತ ತಾಲ್ಲೂಕುಗಳನ್ನು ಘೋಷಣೆ ಮಾಡಬೇಕು” ಎಂದು ಸಿ.ಟಿ. ರವಿ ಒತ್ತಾಯಿಸಿದರು.
ರೈತರ ಸಾಲ ಮನ್ನಾ:”ಸಂಕಷ್ಟದಲ್ಲಿರುವ ರೈತರು ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ತಕ್ಷಣವೇ ರೈತರ ಸಾಲ ಮನ್ನಾ ಮಾಡಿ ಆದೇಶ ಹೊರಡಿಸಬೇಕು” ಎಂದರು.
- ಗೊಬ್ಬರ ಕಾಳಸಂತೆ ಹಾಗೂ ಸರ್ಕಾರದ ಸ್ಪಷ್ಟನೆಗೆ ಆಕ್ರೋಶ “ರಾಜ್ಯದಲ್ಲಿ ರೈತರಿಗೆ ಸಕಾಲಕ್ಕೆ ರಸಗೊಬ್ಬರ ಸಿಗುತ್ತಿಲ್ಲ. ಕೇವಲ ಕಾಗದದ ಮೇಲೆ ‘ಗೊಬ್ಬರ ಇದೆ’ ಎಂದು ಸರ್ಕಾರ ಹೇಳುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಕಾಳಸಂತೆ ಜೋರಾಗಿ ನಡೆಯುತ್ತಿದ್ದು, ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಈ ಕಾಳಸಂತೆಕೋರರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
- ಸರ್ಕಾರದ ಹಗರಣಗಳು ಮತ್ತು ಸಿಬಿಐ ತನಿಖೆಗೆ ಒತ್ತಾಯ ಉದ್ಯೋಗ ಹಗರಣ:”ಸರ್ಕಾರಿ ಉದ್ಯೋಗಗಳನ್ನು ಮಾರಾಟ ಮಾಡಿಕೊಳ್ಳಲಾಗುತ್ತಿರುವ ಆಡಿಯೋ ವೈರಲ್ ಆಗಿರುವುದನ್ನು ಎಲ್ಲರೂ ನೋಡಿದ್ದೀರಿ. ಇದರ ಹಿಂದೆ ಆಡಳಿತಾರೂಢ ಸರ್ಕಾರದವರೇ ಇದ್ದಾರೆ ಎಂಬ ಗಂಭೀರ ಮಾಹಿತಿ ಇದೆ.” ತನಿಖೆ: “ಈ ವ್ಯವಸ್ಥೆಯ ಅಕ್ರಮಗಳನ್ನು ನೋಡಿದರೆ, ಇಡೀ ಪ್ರಕರಣದ ಕುರಿತು ಸಿಬಿಐ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಗ್ರ ತನಿಖೆಯಾಗಬೇಕು” ಎಂದು ಒತ್ತಾಯಿಸಿದರು.
- ನೀರಾವರಿ ಹಾಗೂ ಮುಖ್ಯಮಂತ್ರಿಯವರ ಪಾದಯಾತ್ರೆ ನೆನಪು
“ಮುಖ್ಯಮಂತ್ರಿಗಳು ಹಿಂದೆ ‘ನಮ್ಮ ನೀರು ನಮ್ಮ ಹಕ್ಕು’ ಎಂದು ಪಾದಯಾತ್ರೆ ಮಾಡಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಒಳನಾಡಿನ ರೈತರ ಜಮೀನುಗಳಿಗೆ ಒಂದು ಹನಿ ನೀರನ್ನೂ ಬಿಟ್ಟಿಲ್ಲ. ನಿಮ್ಮದೇ ಆ ಹೋರಾಟ ನಿಮಗೆ ಈಗ ನೆನಪಿದೆಯೇ? ದಯವಿಟ್ಟು ನೆನಪಿಸಿಕೊಳ್ಳಿ ಮತ್ತು ರೈತರ ಪರವಾಗಿ ಗಟ್ಟಿ ನಿರ್ಧಾರ ಕೈಗೊಳ್ಳಿ, ನಾವು ನಿಮ್ಮ ಜೊತೆಗಿರುತ್ತೇವೆ” ಎಂದು ಸಿ.ಟಿ. ರವಿ ಸವಾಲು ಹಾಕಿದರು.
“ಬಜೆಟ್‌ನಲ್ಲಿ ಹಣವಿಲ್ಲ, ಖಜಾನೆ ಖಾಲಿಯಿದೆ ಎಂದು ಸಬೂಬು ಹೇಳುವುದನ್ನು ಬಿಟ್ಟು, ಮೊದಲು ರೈತರ ಪರಿಹಾರಕ್ಕಾಗಿ ಬಜೆಟ್‌ನಲ್ಲಿ ಹಣ ಮೀಸಲಿಡಿ” ಎಂದರು.
- ರಾಜಕೀಯ ಮುಖಂಡರ ಪರಸ್ಪರ ಆರೋಪಗಳ ಬಗ್ಗೆ ಪ್ರತಿಕ್ರಿಯೆ
ಕೆಪಿಸಿಸಿ ಟ್ವೀಟ್ ಹಾಗೂ ರಾಷ್ಟ್ರಭಕ್ತಿ: “ಕೆಪಿಸಿಸಿಯವರು ‘ನನ್ನ ಮೂತ್ರ, ರಕ್ತ, ಮಲವನ್ನು ಕಳಿಸಿಕೋಡುತ್ತೇನೆ, ಕಾರಣ ನಾನು ಓಟಿ ಕುಡಿಯುತ್ತೆನೆ’ ಎಂದು ಟ್ವೀಟ್ ಮಾಡಿದ್ದಾರೆ. ಅಕ್ಕಿ ಹೊರ ರಾಜ್ಯಕ್ಕೆ ಹೋಗುತ್ತಿದೆ ಎಂದು ಆಹಾರ ಸಚಿವರು ಹೇಳುತ್ತಾರೆ. ಪ್ರಿಯಾಂಕ ಖರ್ಗೆ ಅವರು ಬಿಜೆಪಿಯವರು ಶಾಮೀಲಾಗಿದ್ದಾರೆ ಎಂದು ಆರೋಪಿಸುತ್ತಾರೆ.”
ಗೃಹ ಸಚಿವರ ವಿರುದ್ಧ ವಾಗ್ದಾಳಿ: “ಪ್ರಿಯಾಂಕ ಖರ್ಗೆ ಬಿದಿ ಬಸವ ಅಲ್ಲ, ಅವರು ಗೃಹ ಸಚಿವರು! ಹಾಗಿದ್ದಮೇಲೆ ಅಕ್ರಮದಲ್ಲಿ ಭಾಗಿಯಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಯಾಕೆ ಹಿಂಜರಿಯುತ್ತಿದ್ದೀರಿ? ಸಚಿವರ ತಲೆದಂಡ ಯಾಕೆ ಆಗುತ್ತಿಲ್ಲ?” ಎಂದು ಪ್ರಶ್ನಿಸಿದರು.
- ಎಫ್‌ಐಆರ್ (FIR) ಮತ್ತು ಕಾನೂನು ಪ್ರಶ್ನೆ
“ನಮ್ಮ ಮೇಲೆ ಯಾವ ಆಧಾರದ ಮೇಲೆ ಇಂತಹ ಕಾಯ್ದೆಗಳಡಿ ಎಫ್‌ಐಆರ್ ಹಾಕಿದ್ದೀರಿ ಎಂದು ನಾವು ಪ್ರಶ್ನಿಸಿದ್ದೇವೆ. ಅದಕ್ಕೆ ಸರ್ಕಾರ ಉತ್ತರ ಕೊಡಲೇಬೇಕು. ಕಾಲ ಬಂದಾಗ ನಾವು ಸೂಕ್ತ ಉತ್ತರ ನೀಡುತ್ತೇವೆ” ಎಂದು ಸಿ.ಟಿ. ರವಿ ಎಚ್ಚರಿಕೆ ನೀಡಿದರು.
