ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಅಧಿಕಾರ ಸ್ವೀಕರಿಸಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಅದ್ಧೂರಿ ಪ್ರಮಾಣವಚನ ಸಮಾರಂಭಕ್ಕೆ ವೇದಿಕೆ ಸಿದ್ಧವಾಗಿದೆ. ದೇಶದ ಹಲವು ಭಾಗಗಳಿಂದ ವಿವಿಐಪಿಗಳು, ರಾಜಕೀಯ ಗಣ್ಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇರುವುದರಿಂದ, ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆಯು (Bengaluru police) ನಗರದ ಸಾರ್ವಜನಿಕರು ಹಾಗೂ ಸಮಾರಂಭಕ್ಕೆ ಬರುವ ಜನರಿಗಾಗಿ ವಿಶೇಷ ಮಾರ್ಗಸೂಚಿ ಮತ್ತು ಸಂಚಾರ ಬದಲಾವಣೆಗಳನ್ನು ಪ್ರಕಟಿಸಿದೆ
ಸಮಾರಂಭದ ಹಿನ್ನೆಲೆಯಲ್ಲಿ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ (CBD) ಅಂದರೆ ನಗರದ ಮಧ್ಯಭಾಗದ ಪ್ರಮುಖ ರಸ್ತೆಗಳಲ್ಲಿ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಭಾರಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ವಾಹನ ಸವಾರರು ಮತ್ತು ಸಾರ್ವಜನಿಕರು ಸುಗಮ ಸಂಚಾರಕ್ಕಾಗಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಮುಖ್ಯವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಹೆಬ್ಬಾಳ ಮತ್ತು ಶಿವಾಜಿನಗರದ ಕಡೆಗೆ ಸಂಚರಿಸುವವರು ಶಿವಾಜಿನಗರ, ಕನ್ನಿಂಗ್‌ಹ್ಯಾಮ್ ರಸ್ತೆ, ನೃಪತುಂಗ ರಸ್ತೆ, ಶಿವಾನಂದ ಜಂಕ್ಷನ್ ಹಾಗೂ ಹೊರವರ್ತುಲ ರಸ್ತೆಗಳ ಮೂಲಕ ಪ್ರಯಾಣ ಬೆಳೆಸಲು ಸೂಚಿಸಲಾಗಿದೆ.
ಕಾರ್ಯಕ್ರಮ ನಡೆಯುವ ಸುತ್ತಮುತ್ತಲಿನ ರಸ್ತೆಗಳಲ್ಲಿ ಸುಗಮ ಸಂಚಾರಕ್ಕಾಗಿ ಕಟ್ಟುನಿಟ್ಟಿನ ಪಾರ್ಕಿಂಗ್ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಅಂಬೇಡ್ಕರ್ ರಸ್ತೆ, ಪ್ಯಾಲೇಸ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಕ್ವೀನ್ಸ್ ರಸ್ತೆ, ಕಸ್ತೂರಬಾ ರಸ್ತೆ, ಕಬ್ಬನ್ ರಸ್ತೆ ಸೇರಿದಂತೆ ಕಬ್ಬನ್ ಪಾರ್ಕ್ ಒಳಗಿನ ಆಂತರಿಕ ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿ ರಸ್ತೆ ಬದಿಯಲ್ಲಿ ನಿಲ್ಲಿಸುವ ವಾಹನಗಳನ್ನು ಪೊಲೀಸರು ತಕ್ಷಣವೇ ಟೋಯಿಂಗ್ ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಲಾಗಿದೆ.
ಕಾರ್ಯಕ್ರಮದ ಪಾಸ್ ಹೊಂದಿರುವ ಗಣ್ಯರ ವಾಹನಗಳಿಗೆ ಮಾತ್ರ ವಿಧಾನ ಸೌಧ, ವಿಕಾಸ ಸೌಧ, ರಾಜಭವನ ಹಾಗೂ ಜವಾಹರಲಾಲ್ ನೆಹರು ತಾರಾಲಯದ ಆವರಣದಲ್ಲಿ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಪಾಸ್ ಇಲ್ಲದೆ ಕೇವಲ ಕಾರ್ಯಕ್ರಮ ವೀಕ್ಷಿಸಲು ಆಗಮಿಸುವ ಸಾಮಾನ್ಯ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲ್ಲಿಸಲು ಕಂಠೀರವ ಕ್ರೀಡಾಂಗಣ, ಯುಬಿ ಸಿಟಿ ಮಾಲ್ ಆವರಣ, ಶಿವಾಜಿನಗರ ಬಸ್ ನಿಲ್ದಾಣದ ಮಲ್ಟಿ ಲೆವೆಲ್ ಪಾರ್ಕಿಂಗ್, ಸರ್ಕಾರಿ ಕಲಾ ಕಾಲೇಜು ಮೈದಾನ ಮತ್ತು ಅರಮನೆ ಮೈದಾನದಲ್ಲಿ ಸ್ಥಳ ನಿಗದಿಪಡಿಸಲಾಗಿದೆ.
ಭದ್ರತೆ ಹಾಗೂ ಗಣ್ಯರ ಸುಗಮ ಸಂಚಾರದ ದೃಷ್ಟಿಯಿಂದ ಬುಧವಾರ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರು ನಗರದಾದ್ಯಂತ ಭಾರಿ ವಾಹನಗಳ ಅಂದರೆ ಲಾರಿ, ಟ್ರಕ್‌ಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಕಚೇರಿ ಅಥವಾ ವೈಯಕ್ತಿಕ ಕೆಲಸಗಳಿಗಾಗಿ ಹೊರಡುವ ಮುನ್ನ ತಮ್ಮ ಪ್ರಯಾಣವನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳಬೇಕು ಮತ್ತು ಟ್ರಾಫಿಕ್ ಪೊಲೀಸರೊಂದಿಗೆ ಸಹಕರಿಸಬೇಕೆಂದು ನಗರ ಪೊಲೀಸ್ ಕಮಿಷನರ್ ಕೋರಿದ್ದಾರೆ
