Tuesday, May 26, 2026
Homeಜಿಲ್ಲಾ ಸುದ್ದಿಗಳುಅಥಣಿಯಲ್ಲಿ ರೈತರಿಗೆ ವಂಚನೆ: ಕೋಟ್ಯಂತರ ರೂ. ಸಾಲದ ಸುಳಿಯಲ್ಲಿ ನೂರಾರು ರೈತರು; ಆರೋಪಿಗಳ ಬಂಧನಕ್ಕೆ ಒತ್ತಾಯ

ಅಥಣಿಯಲ್ಲಿ ರೈತರಿಗೆ ವಂಚನೆ: ಕೋಟ್ಯಂತರ ರೂ. ಸಾಲದ ಸುಳಿಯಲ್ಲಿ ನೂರಾರು ರೈತರು; ಆರೋಪಿಗಳ ಬಂಧನಕ್ಕೆ ಒತ್ತಾಯ

ಅಥಣಿ: ಹಾಲಿನ ಡೇರಿ ಆರಂಭಿಸುವುದಾಗಿ ನಂಬಿಸಿ, ಸಣ್ಣ ರೈತರ ಹೆಸರಿನಲ್ಲಿ ಬ್ಯಾಂಕ್‌ಗಳಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದು ವಂಚಿಸಿರುವ ಘಟನೆ ತಾಲೂಕಿನ ಅಡಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ನ್ಯಾಯ ಒದಗಿಸುವಂತೆ ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.

ಅಡಹಳ್ಳಿಯ ಚಂದ್ರಕಾಂತ ಸಖಾರಾಮ ಡಂಬಳಕರ, ಸೂರ್ಯಕಾಂತ ಸಖಾರಾಮ ಡಂಬಳಕರ ಮತ್ತು ಕೊಟ್ಟಲಗಿಯ ಸಿದರಾಯ ಬಿರಾದರ ಎಂಬುವವರು ಸೇರಿಕೊಂಡು, “ಪ್ರತಿಭಾ ಕೃಷಿ ಪ್ರಕ್ರೀಯಾ ಲಿ” ಕಂಪನಿಯ ಹೆಸರಿನಲ್ಲಿ ಹಾಲಿನ ಡೇರಿ ಸಂಘ ಮಾಡುವುದಾಗಿ ರೈತರಿಗೆ ಆಮಿಷವೊಡ್ಡಿದ್ದರು. ಸಬ್ಸಿಡಿ ಸಾಲದ ನೆಪದಲ್ಲಿ ಬಡ ರೈತರ ದಾಖಲೆ ಮತ್ತು ಸಹಿಗಳನ್ನು ಪಡೆದ ಆರೋಪಿಗಳು, ಪುಣೆಯ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ ಪ್ರತಿಯೊಬ್ಬ ರೈತರ ಹೆಸರಿನಲ್ಲಿ 20 ಲಕ್ಷದಿಂದ 50 ಲಕ್ಷ ರೂ.ವರೆಗೆ ಸಾಲ ಮಾಡಿಸಿದ್ದಾರೆ. ಆದರೆ, ಸಾಲದ ಹಣವನ್ನು ತಾವೇ ಪಡೆದು ದುರ್ಬಳಕೆ ಮಾಡಿಕೊಂಡಿದ್ದು, ರೈತರಿಗೆ ಕೇವಲ 50 ಸಾವಿರದಿಂದ 1 ಲಕ್ಷ ರೂಪಾಯಿ ಮಾತ್ರ ಸಾಲ ನೀಡಲಾಗಿದೆ.

ಸಾಲ ಮರುಪಾವತಿಸುವಂತೆ ಬ್ಯಾಂಕ್‌ನಿಂದ ರೈತರಿಗೆ ನೋಟಿಸ್ ಬಂದಿದೆ. ಹಣ ಪಾವತಿಸದಿದ್ದರೆ ಜಮೀನು ಹರಾಜು ಹಾಕುವುದಾಗಿ ಬ್ಯಾಂಕ್ ಅಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದಾರೆ. ಈ ಆಘಾತದಿಂದಾಗಿ ಗುರಪ್ಪಾ ದುಂಡಪ್ಪಾ ಬಾಡಿಗೆ ಎಂಬ ರೈತ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇತ್ತ, ಹಣದ ಬಗ್ಗೆ ಪ್ರಶ್ನಿಸಿದ ರೈತರಿಗೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಸಿ. ತಾಂಬೋಳಿ ಅವರು ಅಮಾಯಕ ರೈತರ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು, ಅವರ ಭೂಮಿಯನ್ನು ಹರಾಜಿನ ಅಂಚಿಗೆ ತಂದಿರುವ ಆರೋಪಿಗಳ ಕೃತ್ಯ ಅಕ್ಷಮ್ಯ. ಸಾಲ ಮರುಪಾವತಿ ಮಾಡದಂತೆ ಬ್ಯಾಂಕ್‌ಗೆ ವಂಚಕರು ನೀಡಿದ್ದ ಭರವಸೆಗಳು ಹುಸಿಯಾಗಿವೆ. ಬಡ ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಆರೋಪಿಗಳ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ವಂಚನೆಗೆ ಒಳಗಾದ ರೈತರಿಗೆ ಸೂಕ್ತ ರಕ್ಷಣೆ ನೀಡಿ, ಅವರಿಗಾದ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟದಿಂದ ಪಾರು ಮಾಡಬೇಕು. ಇಲ್ಲವಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು,” ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ದಶರಥ ನಾಯಕ, ಪ್ರಕಾಶ ಪೂಜಾರಿ, ಮುರಿಗೆಪ್ಪಾ ಅರ್ಜನಗಿ, ಲಕ್ಷ್ಮಣ ಕೋಳಿ, ಅಭಯಗೌಡ ಪಾಟೀಲ, ಅಣ್ಣಪ್ಪ ಹಳ್ಳೂರ, ಡಿ.ಎಂ. ನಾಯಕ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು

ಹೆಚ್ಚಿನ ಸುದ್ದಿ