Thursday, May 21, 2026
Homeಜಿಲ್ಲಾ ಸುದ್ದಿಗಳುಅಥಣಿ ಅತ್ಯಾಧುನಿಕ ಕೆ.ಎಂ.ಸಿ. ಹೆರಿಗೆ ಆಸ್ಪತ್ರೆ ಉದ್ಘಾಟನೆ

ಅಥಣಿ ಅತ್ಯಾಧುನಿಕ ಕೆ.ಎಂ.ಸಿ. ಹೆರಿಗೆ ಆಸ್ಪತ್ರೆ ಉದ್ಘಾಟನೆ

ಬಡ ರೋಗಿಗಳಿಗೆ ಲಕ್ಷ್ಮಣ ಸವದಿ ಫೌಂಡೇಶನ್ ನೆರವು: ಯುವ ನಾಯಕ ಚಿದಾನಂದ ಸವದಿ ಭರವಸೆ

ಅಥಣಿ: ತಾಲೂಕಿನ ಹಲ್ಯಾಳ ರಸ್ತೆಯ ಬೃಂದಾವನ ಹೋಟೆಲ್ ಪಕ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕೆ. ಎಂ. ಸಿ. (KMC) ಸುಸಜ್ಜಿತ ಹೆರಿಗೆ ಆಸ್ಪತ್ರೆ ಕಟ್ಟಡದ ಉದ್ಘಾಟನಾ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸಿದ್ದ ಕಾಂಗ್ರೆಸ್ ಯುವ ಧುರೀಣ ಹಾಗೂ ಸಮಾಜ ಸೇವಕ ಚಿದಾನಂದ ಸವದಿ ಅವರು ಸಸಿಗೆ ನೀರು ಎರೆಯುವ ಮೂಲಕ ನೂತನ ಸುಸಜ್ಜಿತ ಹೆರಿಗೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

“ಅಥಣಿ ಭಾಗದ ಸಾರ್ವಜನಿಕರಿಗೆ, ಅದರಲ್ಲೂ ವಿಶೇಷವಾಗಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಒಂದೇ ಸೂರಿನಡಿ ಸಿಗುವಂತಾಗಿರುವುದು ಅತ್ಯಂತ ಶ್ಲಾಘನೀಯ. ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಹೆರಿಗೆ ಚಿಕಿತ್ಸೆ ಸಿಗುವುದು ಅತ್ಯಗತ್ಯವಾಗಿದೆ. ಸರಕಾರಿ ಆಗಲಿ ಅಥವಾ ಖಾಸಗಿ ಆಸ್ಪತ್ರೆಯಲ್ಲಾಗಲಿ, ಚಿಕಿತ್ಸೆ ಪಡೆಯಲು ಬರುವ ಕಡು ಬಡವರಿಗೆ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದಿದ್ದರೆ ಅಂತಹ ರೋಗಿಗಳಿಗೆ (In-patients) ಉಚಿತ ಅಥವಾ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಬೇಕು. ವೈದ್ಯಕೀಯ ವೆಚ್ಚದ ಕೊರತೆಯಿಂದಾಗಿ ಯಾರೂ ಚಿಕಿತ್ಸೆಯಿಂದ ವಂಚಿತರಾಗಬಾರದು. ಚಿಕಿತ್ಸಾ ವೆಚ್ಚ ಭರಿಸಲಾಗದ ಅಸಹಾಯಕ ಬಡ ರೋಗಿಗಳಿಗೆ ‘ಶ್ರೀ ಲಕ್ಷ್ಮಣ ಸವದಿ ಫೌಂಡೇಶನ್’ ವತಿಯಿಂದ ಆರ್ಥಿಕ ನೆರವು ನೀಡಲಾಗುವುದು,” ಎಂದು ಅವರು ಭರವಸೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ನದಿ ಇಂಗಳಗಾಂವ ಗುರುಲಿಂಗ ದೇವರ ಮಠದ ಶ್ರೀ ಮ. ನಿ. ಪ್ರ. ಸಿದ್ದಲಿಂಗ ಸ್ವಾಮೀಜಿ ಹಾಗೂ ಅಥಣಿ ಶೆಟ್ಟರ ಮಠದ ಶ್ರೀ ಮ. ನಿ. ಪ್ರ. ಮರುಳಸಿದ್ಧ ಮಹಾಸ್ವಾಮಿಗಳು ಆಶೀರ್ವಚನ ನೀಡಿ, “ಆರೋಗ್ಯ ಸೇವೆಯು ಅತ್ಯಂತ ಪವಿತ್ರವಾದದ್ದು. ತಾಯಿ ಮತ್ತು ಮಗುವಿನ ಪ್ರಾಣ ರಕ್ಷಿಸುವ ಹೆರಿಗೆ ಆಸ್ಪತ್ರೆಗಳು ತಾಲೂಕಿನ ಜನರಿಗೆ ವರದಾನವಾಗಲಿ” ಎಂದು ಹಾರೈಸಿದರು.

ಆರಂಭದಲ್ಲಿ ಪ್ರಮುಖ ವೈದ್ಯರಾದ ಡಾ. ಸಂಜಯ ಕುರೇನ್ನವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಆಸ್ಪತ್ರೆಯ ಉದ್ದೇಶಗಳನ್ನು ವಿವರಿಸಿದರು.

ಇದೇ ವೇಳೆ ಡಾ. ರಶ್ಮಿ ಎಸ್. ಕುರೇನ್ನವರ, ಡಾ. ಸೋಮಶೇಖರ್ ಪಾಟೀಲ್ ಹಾಗೂ ಜಿ.ಎಂ. ತೇವರಮನಿ ಅವರು ಉಪಸ್ಥಿತರಿದ್ದು, ಆಸ್ಪತ್ರೆಯಲ್ಲಿ ಲಭ್ಯವಿರುವ ಅತ್ಯಾಧುನಿಕ ಚಿಕಿತ್ಸಾ ಉಪಕರಣಗಳು ಹಾಗೂ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಮತ್ತೋರ್ವ ಪ್ರಮುಖ ಗಣ್ಯರಾದ ಶಿವರುದ್ರ ಗುಳ್ಳಪ್ಪನವರ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ಆಸ್ಪತ್ರೆಯ ಯಶಸ್ಸಿಗೆ ಮತ್ತು ವೈದ್ಯರ ತಂಡಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಸಾರ್ವಜನಿಕರು ಹಾಗೂ ವೈದ್ಯಕೀಯ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ವಿಜಯ ಹುದ್ದಾರ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.

ಹೆಚ್ಚಿನ ಸುದ್ದಿ