ಕೆ.ಆರ್.ಪೇಟೆ: ಈ ಶತಮಾನ ಕಂಡ ಕಾಯಕ ಯೋಗಿ, ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ವಿಶ್ವಶ್ರೇಷ್ಠ ಸಂತ ಎಂದು ಸಮಾಜ ಸೇವಕ ಹಾಗೂ ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕಸಬಾ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಿಂಗೈಕ್ಯ ಡಾ.ಶಿವಕುಮಾರ ಮಹಾಸ್ವಾಮೀಜಿಯವರ ಪುತ್ತಳಿ ನಿರ್ಮಾಣ ಕಾರ್ಯಕ್ಕೆ ಆರ್ಥಿಕ ಸಹಾಯ ಹಸ್ತ ಚಾಚಿ ಅವರು ಮಾತನಾಡಿದರು.
ಆದರ್ಶಗಳನ್ನು ಮೈಗೂಡಿಸಿಕೊಳ್ಳಿ:
“ಸಿದ್ದಗಂಗಾ ಶ್ರೀಗಳ ಪುಣ್ಯ ಸ್ಮರಣೆಗಾಗಿ ಪುತ್ತಳಿ ನಿರ್ಮಿಸಿದರೆ ಮಾತ್ರ ಸಾಲದು. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದು ಮುಖ್ಯ. ಲಿಂಗಾಪುರ ಗ್ರಾಮದ ಯುವ ಸಮುದಾಯ ಶ್ರೀಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಪ್ರತಿನಿತ್ಯ ಸ್ಮರಿಸಿದಾಗ ಮಾತ್ರ ಪುತ್ತಳಿ ನಿರ್ಮಾಣಕ್ಕೆ ನಿಜವಾದ ಸಾರ್ಥಕತೆ ದೊರೆಯುತ್ತದೆ” ಎಂದು ಅವರು ಕಿವಿಮಾತು ಹೇಳಿದರು.
ತ್ರಿವಿಧ ದಾಸೋಹದ ಮಹತ್ವ:
ಶ್ರೀಗಳು ಬಡವರು, ದೀನರು ಮತ್ತು ಶೋಷಿತರಿಗೆ ಅನ್ನ, ಅರಿವು ಮತ್ತು ಆಶ್ರಯ ಎಂಬ ತ್ರಿವಿಧ ದಾಸೋಹ ನೀಡುವ ಮೂಲಕ ಲಕ್ಷಾಂತರ ಕುಟುಂಬಗಳಲ್ಲಿ ಜ್ಞಾನದ ಜ್ಯೋತಿಯಾಗಿದ್ದಾರೆ. ‘ನಡೆದಾಡುವ ದೇವರು’ ಭಕ್ತರಿಗೆ ನೀಡಿದ ಸಂದೇಶಗಳನ್ನು ಪಾಲಿಸುವ ಮೂಲಕ ಪ್ರತಿಯೊಬ್ಬರೂ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ತಾಲ್ಲೂಕಿನಾದ್ಯಂತ ಜಾತಿ-ಮತ ಭೇದವಿಲ್ಲದೆ ಶ್ರೀಗಳ ಭಕ್ತಿಯ ಸ್ಮರಣೆ ಹಾಗೂ ಪುತ್ತಳಿ ನಿರ್ಮಾಣವಾಗುತ್ತಿರುವುದು ಸ್ವಾಗತಾರ್ಹ ಎಂದು ಮಲ್ಲಿಕಾರ್ಜುನ್ ತಿಳಿಸಿದರು.
ಹಳ್ಳಿಕಾರ್ ರಾಸುಗಳ ಮೆರವಣಿಗೆ:
ಇದೇ ಸಂದರ್ಭದಲ್ಲಿ ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟದ ದನಗಳ ಜಾತ್ರೆಗೆ ತೆರಳುತ್ತಿದ್ದ ಹಳ್ಳಿಕಾರ್ ತಳಿಯ ರಾಸುಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಚನ್ನಬಸಪ್ಪ, ನಿಂಗರಾಜಪ್ಪ, ಪುಟ್ಟಬಸವಪ್ಪ, ಯುವ ಮುಖಂಡರಾದ ಹರೀಶ್, ಯಶವಂತ್, ಡೈರಿ ಲೋಕೇಶ್, ಯಡಿಯೂರಪ್ಪ, ಪ್ರಸನ್ನ, ರಾಜು, ಕಿರಣ್, ಸಾಗರ್, ಪ್ರಭು, ಗುರು ಹಾಗೂ ಮಲ್ಲಿಕಾರ್ಜುನ್ ಅವರ ಆಪ್ತ ಸಹಾಯಕ ಗಂಜಿಗೆರೆ ಮಹೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಮನು ಮಾಕವಳ್ಳಿ, ಕೆ.ಆರ್.ಪೇಟೆ
