
“ಮುಂಡಗೋಡ: “ನೀಡಿ ಮತ್ತು ಗಳಿಸಿ – ಲಿಂಗ ಸಮಾನತೆಗಾಗಿ ಪರಸ್ಪರ ಬೆಂಬಲ, ಜ್ಞಾನ ಹಂಚಿಕೆ ಹಾಗೂ ಅವಕಾಶಗಳನ್ನು ಹೆಚ್ಚಿಸುವ ಮೂಲಕ ಮಹಿಳೆಯರ ಸಬಲೀಕರಣ” ಎಂಬ ೨೦೨೬ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಧ್ಯೇಯವಾಕ್ಯದೊಂದಿಗೆ ಸಿಸಿಎಫ್ ಲೊಯೋಲ ಜನಸ್ಫೂರ್ತಿ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ(ರಿ) ಮತ್ತು ಲೊಯೋಲ ವಿಕಾಸ ಕೇಂದ್ರ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಅಂಬೇಡ್ಕರ್ ಜಯಂತಿ ಪ್ರಯುಕ್ತ ಮಹಿಳೋತ್ಸವ ಕಾರ್ಯಕ್ರಮವನ್ನು ದಿನಾಂಕ ೨೨-೦೪-೨೦೨೬ ರಂದು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಭವ್ಯವಾಗಿ ಆಯೋಜಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ೧೦:೩೦ ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು. ಜಾಥಾವನ್ನು ಶ್ರೀ ಎಸ್.ಡಿ. ಮುಡೆಣ್ಣನವರು, ಜಿಲ್ಲಾಧ್ಯಕ್ಷರು, ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘ (ರಿ), ಉತ್ತರ ಕನ್ನಡ ಇವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಮೂಲಕ ಜಗತ್ತಿಗೆ ಜ್ಞಾನ ನೀಡಿದ ಮಹಾನ್ ಚಿಂತಕ ಎಂದು ಶ್ಲಾಘಿಸಿದರು. ಮಹಿಳೆಯರಿಗೆ ಸಮಾನ ಹಕ್ಕು ನೀಡಿದ ಹಿಂದು ಕೋಡ್ ಬಿಲ್, ಹಾಗೂ ಒಬ್ಬೊಬ್ಬರಿಗೂ ಸಮಾನ ಮತದಾನದ ಹಕ್ಕು ದೊರೆಯುವಲ್ಲಿ ಅಂಬೇಡ್ಕರ್ ಅವರ ಪಾತ್ರ ಮಹತ್ತರವಾಗಿದೆ ಎಂದು ತಿಳಿಸಿದರು.ಜಾಥಾದಲ್ಲಿ ಮಹಿಳೆಯರು ಸ್ವಾತಂತ್ರ್ಯ ಹೋರಾಟಗಾರ್ತಿಯರು, ಸಂವಿಧಾನ ಸಭೆಯ ಸದಸ್ಯರು ಹಾಗೂ ವೈದ್ಯೆ, ಶಿಕ್ಷಕಿ, ವಕೀಲರು, ರಾಜಕೀಯ ಕ್ಷೇತ್ರದ ಮಹಿಳೆಯರಂತೆ ವೇಷಭೂಷಣ ಧರಿಸಿ ಸ್ತಬ್ಧಚಿತ್ರ ಪ್ರದರ್ಶನ ನೀಡಿದರು. ಡಾ. ಅಂಬೇಡ್ಕರ್ ಹಾಗೂ ಸಂವಿಧಾನ ಭಾವಚಿತ್ರಗಳೊಂದಿಗೆ ಟ್ರಾಕ್ಟರ್‌ಗಳಲ್ಲಿ ಮೆರವಣಿಗೆ ನಡೆಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು. ಶಿವಾಜಿ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಸಂವಿಧಾನ, ಮಹಿಳಾ ಹಕ್ಕುಗಳು ಹಾಗೂ ಸಮಾನತೆ ಕುರಿತು ಘೋಷಣೆ ಕೂಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಮೆರವಣಿಗೆಯ ನಂತರ ಭಾಗವಹಿಸಿದವರಿಗೆ ಮಜ್ಜಿಗೆ ಪಾನಕ ವಿತರಣೆ ಮಾಡಲಾಯಿತು.ವೇದಿಕೆ ಕಾರ್ಯಕ್ರಮವು ಯುವತಿಯರ ತಂಡದ ಸಂವಿಧಾನ ನೃತ್ಯ ಗೀತೆ ಮೂಲಕ ಆರಂಭವಾಯಿತು. ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕರಾದ ಫಾ. ಅನಿಲ್ ಡಿಸೋಜಾ ಅವರು, ಲೊಯೋಲ ವಿಕಾಸ ಕೇಂದ್ರವು ಕಳೆದ ೪೦ ವರ್ಷಗಳಿಂದ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದು, ಜನಸ್ಫೂರ್ತಿ ಒಕ್ಕೂಟವು ಕಳೆದ ೧೯ ವರ್ಷಗಳಿಂದ ಟ್ರಸ್ಟ್ ಕಾಯ್ದೆಯಡಿ ನೋಂದಾಯಿಸಿಕೊಂಡು ೫೩ ಹಳ್ಳಿಗಳಲ್ಲಿ ೧೨೬ ಮಹಿಳಾ ಸ್ವಸಹಾಯ ಸಂಘಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮವನ್ನು ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಫಾ. ಮೆಲ್ವಿನ್ ಲೊಬೊ, ಮುಖ್ಯಸ್ಥರು, ಲೊಯೋಲ ಸಮೂಹ ಸಂಸ್ಥೆಗಳು ಅವರು ಮಾತನಾಡಿ, ಮಹಿಳೆಯರು ಕ್ರಿಯಾತ್ಮಕ ಚಿಂತನೆಯೊಂದಿಗೆ ಮುಂದುವರಿದು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಐಎಎಸ್/ಐಪಿಎಸ್/ಐಎಫ್‌ಎಸ್ ಹುದ್ದೆಗಳತ್ತ ಪ್ರೇರೇಪಿಸಬೇಕು ಎಂದು ಕರೆ ನೀಡಿದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀಮತಿ ಮಲ್ಲಿಗೆ ಸಿರಿಮನೆ, ರಾಜ್ಯ ಮಟ್ಟದ ಸಾಮಾಜಿಕ ಹೋರಾಟಗಾರ್ತಿ (ಜನಶಕ್ತಿ ಸಂಘಟನೆ) ಅವರು, ಮಹಿಳಾ ದಿನಾಚರಣೆ ಅಲಂಕಾರಕ್ಕಾಗಿ ಅಲ್ಲ, ಅದು ಹಕ್ಕು, ಸಮಾನತೆ ಮತ್ತು ಸಂವಿಧಾನ ಮೌಲ್ಯಗಳ ಅರಿವಿಗಾಗಿ ಎಂಬುದನ್ನು ಮನಮುಟ್ಟುವಂತೆ ವಿವರಿಸಿದರು. ರಮಾಬಾಯಿ ಅಂಬೇಡ್ಕರ್ ಅವರ ತ್ಯಾಗಮಯ ಜೀವನ ಹಾಗೂ ಸಾವಿತ್ರಿಬಾಯಿ ಪುಲೆ ಅವರ ಶಿಕ್ಷಣ ಹೋರಾಟವನ್ನು ಉದಾಹರಿಸಿ ಮಹಿಳಾ ಸಂಘಟನೆಗಳ ಮಹತ್ವವನ್ನು ವಿವರಿಸಿದರು. ಮತದಾನದ ಹಕ್ಕು ರಕ್ಷಿಸಿಕೊಳ್ಳುವಂತೆ ಹಾಗೂ ಸಂವಿಧಾನಿಕ ಹಕ್ಕುಗಳನ್ನು ಅರಿತುಕೊಳ್ಳುವಂತೆ ಕರೆ ನೀಡಿದರು.ಕಾರ್ಯಕ್ರಮದಲ್ಲಿ ಯುವ ಚಿಂತಕಿ ಕುಮಾರಿ ವೈಷ್ಣವಿ ಅವರು ಅಂಬೇಡ್ಕರ್ ಅವರ ಹೋರಾಟ ಮತ್ತು ಮಹಿಳಾ ಹಕ್ಕುಗಳ ಕುರಿತು ಉತ್ಸಾಹಭರಿತವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಸುಮಾ ಜಿ. ಅವರು ಸಂವಿಧಾನದಿಂದ ದೇಶದ ಸ್ಥಿರತೆ ಸಾಧ್ಯವಾಗಿದೆ ಎಂದು ತಿಳಿಸಿ, ಮಹಿಳೆಯರು ಸಮಾಜದ ಪ್ರಗತಿಗೆ ಮೂಲಶಕ್ತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಸರೋಜಾ ಡಿ. ಚೌಹಾಣ ಅವರು ಅಂಬೇಡ್ಕರ್ ಜಯಂತಿ ಹಾಗೂ ಮಹಿಳೋತ್ಸವದ ಶುಭಾಶಯಗಳನ್ನು ತಿಳಿಸಿದರು.ಮುಖ್ಯ ಆಕರ್ಷಣೆಯಾಗಿ ಗುಲ್ಬರ್ಗದ ರಂಗಚೇತನ ಕಲಾತಂಡದಿಂದ “ಅಂಬೇಡ್ಕರ್ ಮತ್ತು ರಮಾಬಾಯಿ” ಜೀವನಾಧಾರಿತ ನಾಟಕ ಪ್ರದರ್ಶನಗೊಂಡಿತು. ಮಹಾಡ್ ಕೆರೆ ಹೋರಾಟ, ದೇವಸ್ಥಾನ ಪ್ರವೇಶ ಚಳವಳಿ, ಕುಟುಂಬದ ಸಂಕಷ್ಟ, ಬಡತನದ ನೋವು ಹಾಗೂ ಸಂವಿಧಾನ ರೂಪುಗೊಂಡ ಹಿನ್ನಲೆ ಇತ್ಯಾದಿಗಳನ್ನು ನೈಜವಾಗಿ ಪ್ರದರ್ಶಿಸಿದ ನಾಟಕವು ಸಭಿಕರ ಮನ ಗೆದ್ದಿತು.ಕಾರ್ಯಕ್ರಮದಲ್ಲಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಸ್ವರೂಪ ರಾಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರೂಪಾ ಅಂಗಡಿ, ಜೂಲಿಯಾನಾ ಪೆದ್ರು ಫರ್ನಾಂಡಿಸ್ ಸಿದ್ದಿ, ಡಾ. ಸಿಸ್ಟರ್ ಗ್ಲ್ಯಾಡಿಸ್ ಮೆನೆಜಸ್, ಫಾ. ಜೈಸನ್ ಪಾಯ್ಸ, ಫಾ. ಅಲ್ವಿನ್ ಡಿಸೋಜಾ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಮಿಕ ಇಲಾಖೆ ನಿರೀಕ್ಷಕಿ ಶ್ರೀಮತಿ ಅನುರಾಧ ಕಾಕತ್ಕರ್, ಯುವ ಒಕ್ಕೂಟದ ಪದಾಧಿಕಾರಿಗಳು, ಲೊಯೋಲ ವಿಕಾಸ ಕೇಂದ್ರದ ಸಿಬ್ಬಂದಿ ಹಾಗೂ ಮುಂಡಗೋಡ ತಾಲೂಕಿನ ವಿವಿಧ ಗ್ರಾಮಗಳ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಶ್ರೀಮತಿ ಸುನೀತಾ ಪ್ರಕಾಶ ಗೌಳಿ ಸ್ವಾಗತ ಭಾಷಣ ನಡೆಸಿದರು. ಗಣ್ಯರಿಗೆ ಸಂವಿಧಾನ ಫಲಕ, ಶಾಲು ಹಾಗೂ ಪುಷ್ಪಗುಚ್ಛ ನೀಡಿ ಸನ್ಮಾನಿಸಲಾಯಿತು. ವಂದನಾರ್ಪಣೆಯನ್ನು ಶ್ರೀಮತಿ ಮಂಜುಳಾ ಮನೋಹರ ಲಮಾಣಿ, ನಿರೂಪಣೆಯನ್ನು ಶ್ರೀಮತಿ ಗಿರಿಜಾ ಭುಜಂಗಿ ನೆರವೇರಿಸಿದರು.
