
ನಾಲತವಾಡ: ಸಮೀಪದ ಕೃಷ್ಣಾ ನದಿ ತೀರದ ಚಿಕ್ಕಬಿಟ್ಟೂರ ಗ್ರಾಮದ ಇತಿಹಾಸ ಪ್ರಸಿದ್ಧ ಕಲ್ಲಿನಾಥೇಶ್ವರ ಸ್ವಾಮಿ ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.
ದೇವಾಲಯದ ಮುಂಭಾಗದಲ್ಲಿರುವ ಕೃಷ್ಣಾ ನದಿ ನೀರಿನಿಂದ ಬುಧವಾರ ಬೆಳಗಿನ ಜಾವ ಅಭಿಷೇಕ ಮಾಡಿ ಜಾತ್ರೆಗೆ ಚಾಲನೆ ನೀಡಲಾಯಿತು. ಗುರುವಾರ ಬೆಳಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗೊಂಬೆಗುಣಿತ ನಡೆಯಿತು. ಮಹಿಳೆಯರ ಡೊಳ್ಳು ಕುಣಿತ, ಕರಡಿ ಮಜಲು, ಮಂಗಲಕರ ವಾದ್ಯಗಳ ಮೂಲಕ ಗಂಗಾಸ್ಥಳಕ್ಕೆ ಹೋಗಿ ಬರಲಾಯಿತು.
ಸಂಜೆ ರಥದ ಅಲಂಕಾರಕ್ಕೆ ಟಕ್ಕಳಕಿ ಇಂಗಳಗಿ ಗ್ರಾಮದಿಂದ ಬೃಹತ್ ರುದ್ರಾಕ್ಷಿ ಮಾಲೆ ಆಗಮನವಾಯಿತು. ಘಾಳಪೂಜಿ ಹಾಗೂ ಲೋಟಗೇರಿ ಗ್ರಾಮಸ್ಥರು ರಥ ಹಾಗೂ ದೇಗುಲಕ್ಕೆ ಕಳಶ ತಂದರು. ಕಾನಿಕೇರಿ ಗ್ರಾಮಸ್ಥರಿಂದ ನಂದಿಕೋಲು ಹಾಗೂ ರಥದ ಹಗ್ಗವನ್ನು ಸ್ವಾಗತಿಸಲಾಯಿತು.
ಕಲ್ಲಿನಾಥೇಶ್ವರ ಸ್ವಾಮಿ ರಥಕ್ಕೆ ಗುರುವಾರ ಸಂಜೆ ವಿಶೇಷ ಪೂಜೆ ನೆರವೇರಿಸಲಾಯಿತು. ರಾತ್ರಿ ನಾಲತವಾಡ ವೀರೇಶ್ವರ ನಾಟ್ಯ ಸಂಘದಿಂದ ಸಿದ್ದು ನಾಲತವಾಡ ನೇತೃತ್ವದಲ್ಲಿ ‘ತಾಯಿಯ ಹಾಲು ವಿಷವಾಯ್ತು’ ಸಾಮಾಜಿಕ ನಾಟಕ ಜರುಗಿತು. ಟಗರಿನ ಕಾಳಗ, ಗಡಿಗಿ ಒಡೆಯುವ ಕಾರ್ಯಕ್ರಮ, ಲೂಡೋ ಗೇಮ್, ಶ್ಲೋ ಬೈಕ್ ರೇಸ್ ಸೇರಿ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಲೋಟಗೇರಿಯ ಡಾ.ಗುರುಮೂರ್ತಿದೇವರು ಕಣಕಾಲಮಠ ಸಾನ್ನಿಧ್ಯ ವಹಿಸಿದ್ದರು. ಈರಯ್ಯ ಹಿರೇಮಠ, ಶ್ರೀಶೈಲ ಗುರುವಿನ, ಕಲ್ಲಯ್ಯ ಹಿರೇಮಠ, ವಿವಿಧ ಗ್ರಾಮಗಳ ಹಿರಿಯರಾದ ಮುದಕಪ್ಪ ಕಮರಿ, ರಾಮಣ್ಣ ನಂದಿಹಾಳ, ಶರಣಪ್ಪ ಬೇಣಕಲ, ಬಸಪ್ಪ ಕಚೇರಿ, ಶಿವಪುತ್ರ ಚಾಕರಿ, ಬೀರಪ್ಪ ಗೌರೋಜಿ, ಮಹಾದೇವಪ್ಪಗೌಡ ತುಂಬಗಿ, ಗೌಡಪ್ಪ ತುಂಬಗಿ, ಗಂಗಪ್ಪ ಮುರಟಗಿ, ಮಹಾಂತೇಶ ಗಂಗನಗೌಡರ, ಅಮರಗೋಳ ಮೇಟಿ, ಚಿಕ್ಕಪ್ಪ ಸಂಗಪ್ಪನಗೌಡರ ಹಾಗೂ , ಟಕ್ಕಳಕಿ ಇಂಗಳಗಿ, ಘಾಳಪೂಜಿ, ಬಿಜೂರ, ಕಾನೀಕೇರಿ, ಸುಲ್ತಾನಪೂರ, ಜಮ್ಮಲದಿನ್ನಿ, ನವಲಿ, ಮಡಿಕೇಶ್ವರ ಗ್ರಾಮದ ಭಕ್ತರು ಇದ್ದರು.
ವರಧಿಗಾರರು : ಶಿವು ರಾಠೋಡ ನಾಲತವಾಡ
