Monday, October 12, 2026
HomeUncategorizedಕಲೆ ಮತ್ತು ಸಾಹಿತ್ಯಪುಷ್ಪಮೇಳ ಮತ್ತು ಸಸ್ಯತೋಟ ಭೇಟಿ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

ಪುಷ್ಪಮೇಳ ಮತ್ತು ಸಸ್ಯತೋಟ ಭೇಟಿ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

ಮೈಸೂರು: ಅ.11(ಕರ್ನಾಟಕ ವಾರ್ತೆ) :- ನಾಡಹಬ್ಬ ಮೈಸೂರು ದಸರಾ 2026ರ ಹಿನ್ನೆಲೆ ತೋಟಗಾರಿಕೆ ಇಲಾಖೆ ವತಿಯಿಂದ ಲಿಂಗಾಬುಧಿ ಸಸ್ಯ ಶಾಸ್ತ್ರಿಯ ತೋಟದಲ್ಲಿ ನಿರ್ಮಿಸಿರುವ “ಪುಷ್ಪಮೇಳ ಮತ್ತು ಸಸ್ಯತೋಟ ಭೇಟಿ” ಕಾರ್ಯಕ್ರಮಕ್ಕೆ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು.

ಬಳಿಕ ಸಸ್ಯತೋಟದೊಳಗೆ ಭೇಟಿ ನೀಡಿ ಅಧಿಕಾರಿಗಳಿಂದ ಈ ಬಾರಿಯ ವಿಶೇಷತೆ ಬಗ್ಗೆ ಮಾಹಿತಿ ಪಡೆದರು.

ಈ ಬಾರಿ ಲಿಂಗಾಂಬುಧಿ ಸಸ್ಯತೋಟ ಸಸ್ಯೋಧ್ಯಾನದ ಪ್ರವೇಶ ದ್ವಾರದಲ್ಲಿ ಗುಲಾಬಿ, ಸೇವಂತಿಗೆ ಹೂವುಗಳ ಮತ್ತು ಅಲಂಕಾರಿಕೆ ಎಲೆಗಳನ್ನು ಬಳಸಿ ರಚಿಸಲಾದ ಆನೆಗಳ ಬೃಹತ್ ಪ್ರತಿಕೃತಿ ಹಾಗೂ ಬಾಲಿ ಶೈಲಿಯ ಜಾನೂರ್ ಕಲೆಯ (ಇಂಡೋನೇಷಿಯನ್ ತೆಂಗಿನ ಎಲೆ ಕಲಾಕೃತಿ) ಸ್ವಾಗತ ಕಮಾನು ವೀಕ್ಷಕರನ್ನು ಆದರಣೀಯವಾಗಿ ಸ್ವಾಗತಿಸಲಿವೆ.

ಬಿದಿರಿನ ಪಟ್ಟಿಗಳು, ಬೆತ್ತ ಹಾಗೂ ಇತರೆ ಬಿದಿರಿನ ಉತ್ಪನ್ನಗಳನ್ನು ಬಳಸಿ ಗ್ಯಾಲರಿಯನ್ನು ನಿರ್ಮಿಸಲಾಗುವುದು ಹಾಗೂ ಬಿದಿರಿನಿಂದ ತಯಾರಿಸಲಾದ ಪ್ಲಾಂಟರ್ ಬಾಕ್ಸ್ಗಳಲ್ಲಿ ಅಂಥೋರಿಯಂ ಕುಂಡದ ಸಸ್ಯಗಳನ್ನು ಅಳವಡಿಸಿ ಅಲಂಕಾರ ಮಾಡಲಾಗಿದೆ.

ಜಾನೂರ್ ತೆಂಗಿನ ಎಲೆಗಳ ನೇಯ್ದೆ ಹಾಗೂ ಸೆಣಬಿನಿಂದ ಕಂಬಗಳನ್ನು ಆಲಂಕರಿಸಿ ಹೂವಿನ ವಾಕ್ – ಹೂ ನಿರ್ಮಿಸಿ ಹಾಗೂ ಮೇಲ್ಬಾವಣಿಯಲ್ಲಿ ಉಷ್ಣವಲಯದ ಹೂವಿನ ನೇತಾಡುವ ಅಲಂಕಾರಗಳು ಹಾಗೂ ಹೂವಿನ ವಿನ್ಯಾಸ ಅಳವಡಿಸಲಾಗಿದೆ.

ಆರ್ಕಿಡ್, ಅಡಿಕೆ ತಾಳೆ ಎಲೆಗಳ ನೇಯ್ದೆ ಹಾಗೂ ತಾಳೆ ಹಾಳೆ,ಸ್ಪೇತ್ ಗಳನ್ನು ಬಳಸಿ ಹಾರ್ಟ್ ಮಾದರಿಯ ಕಮಾನುಗಳನ್ನು ನಿರ್ಮಿಸಿ ಡೆಂಡೋಬಿಯಂ, ವಾಂಡಾ, ಮೊಕಾರಾ ಮತ್ತು ಫಲೇನೋಪ್ಪಿಸ್ ಆರ್ಕಿಡ್‌ಗಳಿಂದ ಅಲಂಕರಿಸಿ ಉಷ್ಣವಲಯದ ಹೂವಿನ ಪ್ರದರ್ಶನ ರೂಪಿಸಿರುವುದು ವಿಶೇಷವಾಗಿದೆ.

ಕರ್ನಾಟಕದ ಮೊದಲ ರಾಜ ಮನೆತನಗಳೊಲ್ಲೊಂದಾದ ಗಂಗ ಸಾಮ್ರಾಜ್ಯದ ಮಹಾ ದಂಡನಾಯಕ ಮತ್ತು ಮಂತ್ರಿ ಚಾವುಂಡರಾಯನ ಬಸದಿಯ ಪ್ರತಿಕೃತಿಯನ್ನು ಥರ್ಮೋಕೋಲ್ ಬಳಸಿ ನಿರ್ಮಿಸಿ, ನೈಸರ್ಗಿಕ ಕಲ್ಲಿನಂತೆ ಕಾಣುವಂತೆ ಕಲ್ಲಿನ ಫಿನಿಷ್ ಹಾಗೂ ಪುರಾತನ ರೂಪವನ್ನು ನೀಡಿ ಬಸದಿ ಸುತ್ತಲೂ ಮಿನಿ ಜರ್ಬೆರಾ ಹೂವಿನ ಪಟ್ಟಿಗಳಿಂದ ಅಲಂಕರಿಸಲಾಗುವುದು ಹಾಗೂ ಬಸದಿ ಪಕ್ಕದಲ್ಲಿ ಕಲ್ಲಿನ ಫಿನಿಷ್ ಹೊಂದಿರುವ ವೇದಿಕೆಯ ಮೇಲೆ ಶಾಂತಿ, ಅಹಿಂಸೆ, ಸರಳ ಜೀವನ ಹಾಗೂ ತ್ಯಾಗದ ಸಂದೇಶವನ್ನು ಭಗವಾನ್ ಬಾಹುಬಲಿಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.

ಸಸ್ಯೋದ್ಯಾನದಲ್ಲಿ ಸಾಲು ಸಾಲು ಪುಷ್ಪ ಹಾಸಿಗೆಗಳು, ಕಲ್ಲಿನ ದಾರಿಗಳು ಮತ್ತು ಕಲ್ಲಿನ ವೃತ್ತಗಳು, ಪುಷ್ಪ ತ್ರಿಕೋನಗಳು, ಬೋನ್ಸಾಯ್ ಉದ್ಯಾನ, ಪಕ್ಷಿ ವೀಕ್ಷಣಾ ಗೋಪುರ, ಕಮಲದ ಕೊಳ, ಬಿದಿರು ವನ ಹಾಗೂ ಸಂಗೀತ ಕಾರಂಜಿ ಸೇರಿದಂತೆ ವಿವಿಧ ಆಕರ್ಷಣೆಗಳನ್ನು ರೂಪಿಸಲಾಗಿದೆ.

ವಿಶಿಷ್ಟ ಮರಗಳು, ನೈಸರ್ಗಿಕ ಕಲ್ಲು ಮತ್ತು ಹುಲ್ಲಿನ ಪರ್ಗೋಲಾಗಳು, ಜಲಕೊಳಗಳು ಹಾಗೂ ವಿವಿಧ ಸ್ಥಳೀಯ ಮತ್ತು ವಿದೇಶಿ ಸಸ್ಯ ಸಂಪತ್ತು ಉದ್ಯಾನವನದ ಸೌಂದರ್ಯವನ್ನು ಹೆಚ್ಚಿಸಲಿದೆ. ದೊಡ್ಡ ಕೆರೆ ಮತ್ತು ಸಂರಕ್ಷಿತ ಅರಣ್ಯ ಪ್ರದೇಶದಿಂದ ಸುತ್ತುವರಿದಿರುವ ಈ ಸಸ್ಯತೋಟವು ಸಸ್ಯ, ಪಕ್ಷಿ ಹಾಗೂ ಪ್ರಾಣಿ ವೈವಿಧ್ಯವನ್ನು ಆಸ್ವಾದಿಸಲು ಉತ್ತಮ ತಾಣವಾಗಿದೆ.

ಪುಷ್ಪ ಮೇಳದ ಅಂಗವಾಗಿ ಬೆಳೆಸಲಾದ ಸುಮಾರು 35 ಸಾವಿರ ಸಂಖ್ಯೆಗಳಲ್ಲಿ 49 ಬಗೆಯ ವಾರ್ಷಿಕ ಅಲಂಕಾರಿಕ ಪುಷ್ಪ ಕುಂಡಗಳನ್ನು ಪುಷ್ಪ ಮೇಳದಲ್ಲಿ ಜೋಡಿಸಲಾಗಿರುವುದು ವಿಶೇಷವಾಗಿದೆ.

ಈ ಸಂದರ್ಭ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಎನ್.ರಂಗಸ್ವಾಮಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಹೆಚ್ಚಿನ ಸುದ್ದಿ