Monday, October 12, 2026
HomeUncategorizedಕಲೆ ಮತ್ತು ಸಾಹಿತ್ಯನಾಡಹಬ್ಬ ಮೈಸೂರ ದಸರಾ 2026ದಲ್ಲಿ ಮೈಸೂರ ನೆಲದ‌ ಹಿರಿಮೆ ಬಣ್ಣಿಸಿದ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ

ನಾಡಹಬ್ಬ ಮೈಸೂರ ದಸರಾ 2026ದಲ್ಲಿ ಮೈಸೂರ ನೆಲದ‌ ಹಿರಿಮೆ ಬಣ್ಣಿಸಿದ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ

ಮೈಸೂರು ಕರ್ನಾಟಕ ಸಂಸ್ಕೃತಿಯ ಆತ್ಮ, ಸಂಸ್ಕಾರವಂತರ ನಗರ

ಮೈಸೂರು, ಅಕ್ಟೋಬರ್ 11 (ಕ.ವಾ.): ಮೈಸೂರು ನಗರ ಕರ್ನಾಟಕ ಸಂಸ್ಕೃತಿಯ ಆತ್ಮ, ಇದು ಸಂಸ್ಕಾರವಂತರ ನಗರ, ಅರಿವಿನ ಮಂಟಪ, ಸುಸಂಸ್ಕೃತರ ನಗರ,
ಅರಿವಿನ ಮನೆಗಳ ನಗರ, ಸ್ವಚ್ಛ ನಗರ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಮೈಸೂರ ನೆಲದ ಹಿರಿಮೆಯನ್ನು ಬಣ್ಣಿಸಿದರು.

ಮೈಸೂರಿನ ಚಾಮುಂಡೇಶ್ವರಿ ಬೆಟ್ಟದಲ್ಲಿ ಅಕ್ಟೋಬರ್ 11ರಂದು ಐತಿಹಾಸಿಕ ಮೈಸೂರ ದಸರಾ ಮಹೋತ್ಸವ 2026 ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿಗಳು, ಹಂಪಿಯ ಮಹಾನವಮಿ ದಿಬ್ಬದ ಹಬ್ಬ ಈಗ ಮೈಸೂರು ಹಬ್ಬವಾಗಿದೆ. ದೊರೆಯ ಹಬ್ಬ, ಈಗ ಧರೆಯ ಹಬ್ಬವಾಗಿದೆ ಎಂದು ಶ್ರೀಗಳು ಮೈಸೂರು ದಸರಾ ಉತ್ಸವದ ವಿಶೇಷತೆಯನ್ನು ಬಣ್ಣಿಸಿದರು.

ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಹೊಂಗನಸು ಕಂಡ ಗಂಡುಗಲಿ ಕುಮಾರರಾಮನ ಕುಮ್ಮಟದುರ್ಗ ಕೊಪ್ಪಳ -ಗಂಗಾವತಿ ಮಧ್ಯೆ ಜಬ್ಬಲಗುಡ್ಡ ಗ್ರಾಮದ ಸಮೀಪದಲ್ಲಿದೆ.ಅಲ್ಲಿ ದಸರೆ ಮೊದಲು ಪ್ರಾರಂಭವಾಯಿತು ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.

ನಂತರ ಕಾಲಾಂತರದಲ್ಲಿ ವಿಜಯನಗರ ಅರಸರ ಅವಧಿಯಲ್ಲಿ ಅದು ಉಚ್ಛ್ರಾಯ ಹಂತ ತಲುಪಿತು. ಅದರ ಕುರುಹಾಗಿ ಇಂದಿಗೂ ಹಂಪಿಯಲ್ಲಿ ಮಹಾನವಮಿ ದಿಬ್ಬ ಮೂಕಸಾಕ್ಷಿಯಾಗಿ ನಿಂತಿದೆ. ವಿಜಯನಗರ ಪತನದ ನಂತರ ಕಾಲಾನುಕ್ರಮವಾಗಿ ಪೆನುಗೊಂಡೆ, ಶ್ರೀರಂಗಪಟ್ಟಣ, ಮೈಸೂರಿನಲ್ಲಿ ಆ ಪರಂಪರೆಯ ವೈಭವ ಮುಂದುವರೆದಿದೆ ಎಂದರು.

ನಾಡ ಹಬ್ಬ ಮೈಸೂರು ದಸರಾ ಉದ್ಘಾಟಿಸುವಷ್ಟು ದೊಡ್ಡವ ನಾನಲ್ಲ,
ಈ ನಾಡಿನ ಹಿರಿಯ ಮಹನಿಯರು, ಸಾಹಿತಿಗಳು, ಪಂಡಿತರು, ಶಿಕ್ಷಣ ತಜ್ಞರು,
ವಿಜ್ಞಾನಿಗಳು, ತಂತ್ರಜ್ಞರು, ಯತಿಗಳು, ರಾಜನೀತಿಜ್ಞರು ಹಚ್ಚಿದ ಮೈಸೂರ ನಾಡಹಬ್ಬದ ಆಶಯದೀಪ ಆರದಿರಲಿ ಎಂದು ಪ್ರಾರ್ಥನೆ ಮಾಡಲು ಬಂದಿರುವೆ ಎಂದು ಗವಿಶ್ರೀಗಳು ವಿನಮ್ರವಾಗಿ ಹೇಳುತ್ತಾ, ನಾನು ಜೋಳಿಗೆಯ ಜಂಗಮ. ನನ್ನ ಮೈಸೂರ ದಸರಾ ಉತ್ಸವದ
ಕೈ ದೀಪ ಹಚ್ಚಿದೆ; ನಾಡಿಗಾಗಿ ಪ್ರಾರ್ಥನೆ ಸಲ್ಲಿಸಲು ನಾನು ಶಕ್ತಿ ದೇವತೆಯ ತಾಣಕ್ಕಾಗಿ ಬಂದಿದ್ದೇನೆ ಎಂದರು.

ಈ ನಾಡಹಬ್ಬ ನಾಡಿನ ಗತವೈಭವಕ್ಕೆ ಸಾಕ್ಷಿ, ನಮ್ಮ‌ ಮುಂದಿನ ಭವಿಷ್ಯಕ್ಕೆ ದಿಕ್ಸೂಚಿ ಎಂದರು.
ಈ ನಾಡು, ನೆಲ ಎಂತಹ ಅಧ್ಬುತ. ಈ ನಾಡು ಅನೇಕ ಮಹನಿಯರಿಗೆ ಜನ್ಮವಿತ್ತಿದೆ.

ಎದೆಯ ದನಿಗೆ ಮಿಗಿಲು ಶಾಸ್ತ್ರ ಇಹುದೇನು’, ‘ಮಾನವ ಕುಲ ತಾನೋಂದೇ ವಲಂ‘ ಎಂದು ಬರೆದು ಹಾಡಿದ ಕವಿಪುಂಗವರ ನೆಲವಿದು. ಇದು ಕವಿ ದಾಸ ಶರಣರ ನಾಡು. ಬಸವಣ್ಣನವರು ನಮಗೆ ದುಡಿದು ತಿನ್ನುವುದನ್ನು ಕಲಿಸಿದ್ದಾರೆ ವಿನಃ ಬಡಿದು ತಿನ್ನೋದಲ್ಲ. ಕಲ್ಯಾಣದ ಶರಣರು ಕಲಿಸಿದ ಸುಸಂಸ್ಕೃತಿಯ ಪಾಠಶಾಲೆ ಈ ನಾಡು. ಮೈಸೂರಿನ ಮಹಾರಾಜರನ್ನು ರಾಜರುಷಿಗಳು ಎಂದು ಅನೇಕ ಮಹನಿಯರು ಕರೆದರು. ಮೈಸೂರಿನ ರಾಜರು ನಾಡಿನ ಜನರಿಗಾಗಿ ದುಡಿದರು; ರಾಣಿಯರು ಕನ್ನಂಬಾಡಿ ಕಟ್ಟಿಸಲು ತಮ್ಮ ಆಭರಣಗಳನ್ನು ಒತ್ತೆ ಇರಿಸಲು ಮುಂದಾಗಿದ್ದು ಅವರ ಜನಪರ ಕಾಳಜಿಗೆ ದ್ಯೋತಕವಾಗಿದೆ ಎಂದರು.

ಅರಸರು ಎಂದರೆ ಬರೀ ಆಳುವವರಲ್ಲ; ಜನರ ಅಳಲನ್ನು ಕೇಳುವವರು ಎನ್ನುವಂತೆ ಮೈಸೂರಿನ ಅರಸು ಬದುಕಿದರು.
ಬುದ್ದನ ಕೊನೆಯ ಸಂದೇಶ, ನಿನಗೆ ನೀನು ಬೆಳಕಾಗು ಎಂದು ಹೇಳಿರುವುದು. ಹೀಗೆ ಜ್ಯೋತಿಯಾಗು ಜಗಕೆಲ್ಲ ಎಂದು ಈ ನಾಡ ಜನಪದರು ಹಾಡಿದ್ದಾರೆ.
ಕನ್ನಡದ ನೆಲ ಧರ್ಮಕ್ಕೆ ಅನೇಕ ಪರಿಭಾಷೆ ನೀಡಿದೆ. ಧರ್ಮ ಅಂದ್ರೆ ಮನುಷ್ಯನನ್ನು ಸ್ವರ್ಗಕ್ಕೆ ಕರೆದೊಯ್ಯುವುದಲ್ಲ; ಈ ಭೂಮಿಯನ್ನೇ ಸ್ವರ್ಗಸ್ಥಮಯ ಮಾಡುವುದು.

ಇನ್ನೊಬ್ಬರನ್ನು ತುಳಿದು ಬದುಕೋದಲ್ಲ: ತಿಳಿದು ಬದುಕೋದು ಧರ್ಮ.
ಸಾಧುಂಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ. ಪ್ರೇಮ ಕೊಟ್ಟವಗೆ ಪ್ರೇಮ ಕೊಡುತ್ತದೆ ಈ ನೆಲ. ಒಬ್ಬ ಹೆಣ್ಣು ಮಗಳು ಸೈನಿಕರನ್ನು ಒಟ್ಟುಗೂಡಿಸಿ ಯುದ್ದ ನಡೆಸಿ ಇಂಗ್ಲೀಷರನ್ನು ಹೊಡೆದೋಡಿಸಿದ ವೀರರ ನಾಡಿದು. ರೈತ, ವಿಜ್ಞಾನಿ, ಕವಿ ಸೇರಿದಂತೆ ಅನೇಕ ಮಹನಿಯರು ಕಟ್ಟಿದ ನಾಡು ಇದು. ನಾವು ದೀಪ ಹಚ್ಚುವ ಕೆಲಸ ಮಾಡಬೇಕು. ವಿಶ್ವವೇ ದೇವರ ಮನೆ. ನಿಸರ್ಗ ನಮಗೆ ಒಂದು ಬದುಕು ಕೊಟ್ಟಿದೆ. ಆಯುಧ ಪೂಜೆ ಅಂದ್ರೆ ಕೃತಜ್ಞತೆ ಸಲ್ಲಿಸೋದು.‌ ನಮಗೆ ಬದುಕು ನೀಡಿದ ಮಣ್ಣಿಗೆ ನಾವು ಕೃತಜ್ಞತೆ ಸಲ್ಲಿಸಬೇಕು.

ಗೂಗಲನಲ್ಲಿ ಏನೆಲ್ಲಾ ಡೌನಲೋಡ್ ಮಾಡಬಹುದು. ಆದರೆ ತಿನ್ನುವ ಅನ್ನ, ನೀರು ಡೌನಲೋಡ್ ಮಾಡೋಕೆ ಆಗೊಲ್ಲ. ಅನ್ನ ಮತ್ತು ನೀರು ಬೇಕು ಅಂದ್ರೆ ರೈತ ಬೆವರು ಸುರಿಸಲೇಬೇಕು.
ಈ ನೆಲದಲ್ಲಿ ಅನೇಕ ನದಿಗಳು ಹರಿದಿವೆ. ಅವೇ ಈ ನಾಡಿನ ಸಂಪತ್ತು. ಇವು ಬರೀ ಆಣೆಕಟ್ಟುಗಳಲ್ಲ; ಅನ್ನದ ತಟ್ಟೆಗಳು. ನದಿ ಮೂಲಗಳನ್ನು ನಾಶ ಮಾಡುವುದು ಬೇಡ. ತುಂಗಭದ್ರೆ, ಕಾವೇರಿ ಬತ್ತಿ ಹೋದರೆ ನಾವು ಅವುಗಳನ್ನು ಯಾವುದೇ ಕಡೆಯಿಂದ ಆಮದು ಮಾಡೋಕೆ ಆಗೊಲ್ಲ. ಹಾಗಾಗಿ ನದಿ ಹಳ್ಳ ಕೊಳ್ಳಗಳನ್ನು ನಾವು ರಕ್ಷಿಸಬೇಕು.

ನೆಲ ಜಲ ಸಂರಕ್ಷಣೆ ಮಾಡುವುದು ನಮ್ಮ ಸರ್ಕಾರಗಳ ಆದ್ಯ ಕರ್ತವ್ಯ ಎಂದು ತಿಳಿಸಿದರು.
ವಿಶ್ವೇಶ್ವರಯ್ಯ ಕನ್ನಂಬಾಡಿಯ ಕಟ್ಟಿಸದಿದ್ದರೆ ಎಂದು ಹಾಡುವ ನಮ್ಮ ಮೇಲೆ ಕೆರೆ, ಹಳ್ಳ, ಕಟ್ಟುವ‌ ಜವಾಬ್ದಾರಿ ಇದೆ. ಲಕ್ಷ ದೀಪಕ್ಕಿಂತ ಹಚ್ಚುವುದಕ್ಕಿಂತ
ವೃಕ್ಷ ದೀಪ ಹಚ್ಚುವುದೇ ಇತಿಹಾಸದದಿಂದ ಕಲಿಯುವ ವರ್ತಮಾನದ ಪಾಠ.

ನಾವು ಕಲಿತ ಶಾಲೆಗೆ ಒಂದು ಪ್ರಯೋಗ ಶಾಲೆ ಕಟ್ಟಿಸಿದರೆ ಅದು ಈಗ ನಾವು ಮಾಡುವ ಉತ್ತಮ ಕಾರ್ಯ. ಮಕ್ಕಳಿಗೆ ನಿತ್ಯ ಮನೆಯಲ್ಲಿ ಒಂದು ಶರಣರ ನುಡಿ ಕಲಿಸುವ ಕಾರ್ಯವನ್ನು ಗೃಹಿಣಿಯರು ಮಾಡಬೇಕು.

ಕನ್ನಡಿಗರಲ್ಲಿ ಒಬ್ಬನಾದ ನಾನು ಏನಾದರೊಂದು ಉತ್ತಮ ಕಾರ್ಯ ಮಾಡಬೇಕು ಎಂದು ಪ್ರತಿಯೊಬ್ಬರು ಒಂದು ಉತ್ತಮ ಸಂಕಲ್ಪದ ಹೆಜ್ಜೆ ಹಾಕಿದರೆ, ಏಕಕಾಲಕ್ಕೆ 6 ಕೋಟಿ ಜನರ ಹೆಜ್ಜೆಗಳು ಮುಂದಕ್ಕೆ ಹೋಗುತ್ತವೆ. ಅಂತೆಯೇ ನಾವು ಉತ್ತಮ ಸಂಕಲ್ಪದೊಂದಿಗೆ ಮುಂದೆ ಸಾಗಿದರೆ ತಾಯಿ ಚಾಮುಂಡೇಶ್ವರಿಯೇ ನಮ್ಮ ಮನೆಯ ಜಗಲಿಯಲ್ಲಿ ದೀಪವಾಗಿ ನಮ್ಮ ಮನೆ-ಮನ ಬೆಳೆಗುತ್ತಾಳೆ ಎಂದು ಗವಿಸಿದ್ದೇಶ್ವರ ಶ್ರೀಗಳು ಆಶೀರ್ವಚನ ನೀಡಿದರು.

ಸಮಾರಂಭದಲ್ಲಿ ನಾಡಿನ ಬೇರೆ ಬೇರೆ ಭಾಗದ ಸ್ವಾಮೀಜಿಯವರು, ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಹಾಗೂ ಗಣ್ಯಮಹನಿಯರು ಇದ್ದರು.

ಹೆಚ್ಚಿನ ಸುದ್ದಿ