ಧಾರವಾಡ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ) ಧಾರವಾಡ ಜಿಲ್ಲೆ ಮತ್ತು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್(ರಿ) ಧಾರವಾಡ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಗಾಂಧಿ ಜಯಂತಿ ಆಚರಣೆ ಪ್ರಯುಕ್ತ ಹುಬ್ಬಳ್ಳಿ ವಿದ್ಯಾನಗರದ ಮರಾಠಾ ಭವನದಲ್ಲಿ ಗಾಂಧಿಸ್ಕೃತಿ, ಜನಜಾಗೃತಿ ಸಮಾವೇಶ ಮತ್ತು ಪಾನಮುಕ್ತ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮ ಆರಂಭದಲ್ಲಿ ಹುಬ್ಬಳ್ಳಿ ಕಿಮ್ಸ್ ಪ್ರಧಾನ ದ್ವಾರದ ಮುಂಭಾಗದಲ್ಲಿರುವ ಗಾಂಧಿಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾರಿವಾಳ, ಬಲೂನ್ ಹಾರಿಸುವುದರ ಮೂಲಕ ಬೃಹತ್ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ರಾಜ್ಯ ಸಂಘಟನಾಧ್ಯಕ್ಷ ಶ್ರೀ ರಾಜಣ್ಣ ಮೂ. ಕೊರವಿರವರು ಚಾಲನೆ ನೀಡಿದರು ಮತ್ತು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿದ ಪೂಜ್ಯ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ ಮಣಕವಾಡರವರು ಉದ್ಘಾಟಿಸಿ, ಮಹಾತ್ಮಾ ಗಾಂಧಿಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ನೆರವೇರಿಸಿ ಗಾಂಧಿಜಿಯವರು ಕಂಡ ರಾಮರಾಜ್ಯದ ಕನಸನ್ನು ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಪೂಜ್ಯ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು ನನಸಾಗಿಸಿದ್ದಾರೆ. ಸರ್ಕಾರ ಕೈಗೊಳ್ಳಬೇಕಾದ ಅನೇಕ ಕಾರ್ಯಕ್ರಮಗಳನ್ನು ಯೋಜನೆಯ ಮೂಲಕ ಅನುಷ್ಠಾನ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಮದ್ಯವರ್ಜನ ಶಿಬಿರಗಳ ಮೂಲಕ ಪಾನಮುಕ್ತರನ್ನಾಗಿಸಿ ನವಜೀವನ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇಂತಹ ಜಾಗೃತಿ ಸಮಾವೇಶಗಳಲ್ಲಿ ಭಾಗವಹಿಸಿದ ತಾವೆಲ್ಲರೂ ಧನ್ಯರೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೊರಾಟಗಾರರಾದ ಹುಬ್ಬಳ್ಳಿಯ ಜಿ.ಎಂ.ಚಿಕ್ಕಮಠರವರನ್ನು ಗೌರವಿಸಲಾಯಿತು. ಅಲ್ಲದೇ ಪೌರಕಾರ್ಮಿಕರಿಗೆ ಹಾಗೂ ಯೋಜನೆಯ ಮೂಲಕ ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ಪಾನಮುಕ್ತರಾದ ನವಜೀವನ ಸಮಿತಿಯ ಸದಸ್ಯರಿಗೆ ಅಭಿನಂದನೆ ನಡೆಸಲಾಯಿತು.
ಆಯ್ದ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನದ ಮಂಜೂರಾತಿ ಪತ್ರ ವಿತರಿಸಲಾಯಿತು.
ಪ್ರೊಫೆಸರ್ ಕೆ.ಎಸ್.ಕೌಜಲಗಿರವರು ದಿಕ್ಕೂಚಿ ಭಾಷಣ ಮಾಡಿ ಗಾಂಧೀಜಿಯವರ ತತ್ವಾದರ್ಶಗಳನ್ನು ವಿವರಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿಕಟಪೂರ್ವ ರಾಜ್ಯಾ ಸಂಘಟನಾಧ್ಯಕ್ಷರಾದ ಶ್ರೀ ರಾಜಣ್ಣ ಮೂ. ಕೊರವಿ ಅವರು ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಗಾಂಧೀಜಿಯವರ ತತ್ವ ಸಿದ್ಧಾಂತವನ್ನು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಇಡೀ ರಾಜ್ಯಕ್ಕೆ ವಿಸ್ತರಿಸಿದ್ದಾರೆ. ಸ್ವ-ಸಹಾಯ ಸಂಘಗಳ ಸಂಘಟನೆಯ ಮೂಲಕ ಮಹಿಳೆಯರಿಗೆ ಆರ್ಥಿಕ ಶಕ್ತಿಯನ್ನು ತುಂಬಿದ್ದಾರೆ. ಅಲ್ಲದೇ ಮಕ್ಕಳಿಗೆ ಸುಜ್ಞಾನನಿಧಿಯಂತಹ ಶಿಷ್ಯವೇತನವನ್ನು ಕೊಟ್ಟು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಹಲವಾರು ಸರ್ಕಾರಿ ಶಾಲೆಗಳಿಗೆ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದ ಮೂಲಕ ಬೆಂಚು ಡೆಸ್ಕಗಳ ಒದಗಣಿ, ಶಿಕ್ಷಕರ ಒದಗಣೆ ಸೇರಿದಂತೆ ಹಲವಾರು ರೀತಿಯಲ್ಲಿ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ. ಅಶಕ್ತರಿಗೆ ಮಾಶಾಸನ ಒದಗಣೆ. ವಾತ್ಸಲ್ಯ ಮಿಕ್ಸ ಪೂರೈಕೆ. ವಾತ್ಸಲ್ಯ ಮನೆಯಂತಹ ಕಾರ್ಯಕ್ರಮಗಳು, ಕೆರೆಗಳ ಅಭಿವೃದ್ಧಿ, ಮಠ ಮಂದಿರಗಳ ಮತ್ತು ಗುಡಿ ಗೋಪುರಗಳ ಜೀರ್ಣೋದ್ದಾರ, ಶುದ್ಧ ನೀರಿನ ಘಟಕಗಳು, ಪ್ರತಿ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳು ಹೀಗೆ ನೂರಾರು ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಜನರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಇಂತಹ ಕಾರ್ಯಕ್ರಮಗಳ ಜೊತೆಗೆ ಭಾಗವಹಿಸುವುದು ಹೆಮ್ಮೆಯ ವಿಷಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಜಿಲ್ಲಾ ನಿರ್ದೇಶಕರಾದ ಹನುಮಂತ ನಾಯ್ಕರವರು ಕಾರ್ಯಕ್ರಮವನ್ನು ಉದ್ದೇಶಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಧಾರವಾಡ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ವಸಂತ ಅರ್ಕಾಚಾರವರು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆಯ ಎಲ್ಲಾ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪಾನಮುಕ್ತ ಸದಸ್ಯರು, ಪ್ರಗತಿಬಂಧು, ಸ್ವ-ಸಹಾಯ ಸಂಘದ ಸದಸ್ಯರು. ಒಕ್ಕೂಟದ ಪದಾಧಿಕಾರಿಗಳು, ಶೌರ್ಯ ಘಟಕದ ಸ್ವಯಂ ಸೇವಕರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು. ಈ ಸಮಾವೇಶದಲ್ಲಿ ಜನಜಾಗೃತಿ ವೇದಿಕೆಯ ಮೂಲಕ ಹಕ್ಕೋತ್ತಾಯ ಮತ್ತು ಠರಾವುಗಳನ್ನು ಮಂಡನೆ ಮಾಡಿ ರಾಜ್ಯದ ಮುಖ್ಯ ಮಂತ್ರಿಗಳಿಗೆ ಸಲ್ಲಿಸಲು ತೀರ್ಮಾನಿಸಲಾಯಿತು.
ಧಾರವಾಡ ಪ್ರಾದೇಶಿಕ ಜನಜಾಗೃತಿ ವಿಭಾಗದ ಯೋಜನಾಧಿಕಾರಿ ಭಾಸ್ಕರ್ ಎನ್. ರವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ದೀಪಾ ಮತ್ತು ಚೈತ್ರಾರವರು ಪ್ರಾರ್ಥಿಸಿದರು. ಧಾರವಾಡ ಗ್ರಾಮೀಣ ಯೋಜನಾಧಿಕಾರಿ ಮೇದಪ್ಪ ಗೌಡರವರು ಕಾರ್ಯಕ್ರಮ ನಿರೂಪಿಸಿದರು, ಹುಬ್ಬಳ್ಳಿ ಗ್ರಾಮೀಣ ಯೋಜನಾಧಿಕಾರಿ ಸೋಮಲಿಂಗರವರು ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿದರು….
ಸಂಪಾದಕರು: ರಾಮಚಂದ್ರಪ್ಪ ಪೂಜೇರ
