ಸೊರಬ, ಅ.3:
ಸೊರಬ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ರಸ್ತೆ ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಗಳಿಗೆ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಶ್ರೀ ಮಧು ಬಂಗಾರಪ್ಪ ಅವರು ಶಂಕುಸ್ಥಾಪನೆ ಹಾಗೂ ಭೂಮಿಪೂಜೆ ನೆರವೇರಿಸಿದರು.
ದೇವತಿಕೊಪ್ಪದಲ್ಲಿ ಉರುಗನಹಳ್ಳಿ–ದೇವತಿಕೊಪ್ಪ ರಸ್ತೆ ಹಾಗೂ ಹಿರಿಯಾವಲಿ ಕ್ರಾಸ್ನಿಂದ ದೇವತಿಕೊಪ್ಪ ಮಾರ್ಗವಾಗಿ ಹುಣಸಿಕಟ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಗೆ ಸಚಿವರು ಭೂಮಿಪೂಜೆ ನೆರವೇರಿಸಿದರು. ಸುಮಾರು ₹1 ಕೋಟಿ ಅಂದಾಜು ಮೊತ್ತದ ಈ ಕಾಮಗಾರಿಯಿಂದ ಈ ಭಾಗದ ಗ್ರಾಮೀಣ ಪ್ರದೇಶದ ಜನರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.
ಇದೇ ವೇಳೆ ಕುಂಬತ್ತಿಯಲ್ಲಿ ಮಾವಲಿ–ಕಡಸೂರು ರಸ್ತೆ ಹಾಗೂ ಕುಂಬತ್ತಿಯಿಂದ ಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಮತ್ತು ಆಯ್ದ ಭಾಗಗಳಲ್ಲಿ ಡಾಂಬರೀಕರಣ ಕಾಮಗಾರಿಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು. ಈ ಕಾಮಗಾರಿಗೂ ಸುಮಾರು ₹1 ಕೋಟಿ ಅಂದಾಜು ಮೊತ್ತ ನಿಗದಿಪಡಿಸಲಾಗಿದೆ.
ಮಳಲಿಕೊಪ್ಪದಲ್ಲಿ ಉಳವಿ–ಸೊರಬ ಮುಖ್ಯ ರಸ್ತೆಯಿಂದ ಹಾಲಗಳಲೆ–ಇಂಡುವಳ್ಳಿ–ಮಳಲಿಕೊಪ್ಪ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು. ಹಾಲಗಳಲೆ–ಶಿಗ್ಗಾ–ಮಳಲಿಕೊಪ್ಪ ಸರಪಳಿಯಿಂದ 27.34 ಕಿ.ಮೀ.ವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿ ಇದರಲ್ಲಿ ಒಳಗೊಂಡಿದೆ.
ನಿಮ್ಮ ಮತ ನನ್ನನ್ನು ಶಿಕ್ಷಣ ಸಚಿವನನ್ನಾಗಿ ಮಾಡಿದೆ
ದೇವತಿಕೊಪ್ಪದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, ಸೊರಬದ ಜನರೊಂದಿಗೆ ತಮ್ಮ ಕುಟುಂಬದ ಬಾಂಧವ್ಯ ಹಾಗೂ ಕ್ಷೇತ್ರದ ಅಭಿವೃದ್ಧಿಯ ಕುರಿತು ಭಾವುಕರಾಗಿ ಮಾತನಾಡಿದರು.
“ಹಿಂದೆ ನಿಮ್ಮ ಒಂದೊಂದು ಮತ ನಮ್ಮ ತಂದೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಇಂದು ನಿಮ್ಮ ಮತ ನನ್ನನ್ನು ಶಿಕ್ಷಣ ಸಚಿವನನ್ನಾಗಿ ಮಾಡಿದೆ. ಈ ಋಣವನ್ನು ಅಭಿವೃದ್ಧಿ ಕಾರ್ಯಗಳ ಮೂಲಕ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ,” ಎಂದು ಹೇಳಿದರು.
“ನನ್ನ ಇಲಾಖೆಯಲ್ಲಿ ಸುಮಾರು 46 ಲಕ್ಷ ಮಕ್ಕಳು ಇದ್ದಾರೆ. ಅವರ ಭವಿಷ್ಯವನ್ನು ರೂಪಿಸುವ ಮಹತ್ವದ ಜವಾಬ್ದಾರಿ ನನ್ನ ಮೇಲಿದೆ. ರಾಜ್ಯದ ಸರ್ಕಾರಿ ಶಾಲೆಗಳನ್ನು ಗುಣಮಟ್ಟದ ಶಿಕ್ಷಣದ ಕೇಂದ್ರಗಳನ್ನಾಗಿ ರೂಪಿಸುವ ಕೆಲಸ ನಡೆಯುತ್ತಿದೆ. ಕೆಪಿಎಸ್ ಶಾಲೆಗಳು ರಾಜ್ಯದ ಮಾದರಿ ಶಾಲೆಗಳಾಗಲಿವೆ. ಪ್ರತಿಯೊಂದು ಕೆಪಿಎಸ್ ಶಾಲೆಯಲ್ಲಿ ಸುಮಾರು 1,250 ಮಕ್ಕಳು ಕಲಿಯುವ ವ್ಯವಸ್ಥೆ ರೂಪಿಸಲಾಗುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತ್ಯೇಕ ಬಸ್ ವ್ಯವಸ್ಥೆಯನ್ನೂ ಕಲ್ಪಿಸುವ ಉದ್ದೇಶವಿದೆ,” ಎಂದು ಸಚಿವರು ತಿಳಿಸಿದರು.
ಡಿಸೆಂಬರ್ ಒಳಗಾಗಿ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ
“ಡಿಸೆಂಬರ್ ಒಳಗಾಗಿ ನನ್ನ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಜನರನ್ನು ನೇರವಾಗಿ ಭೇಟಿ ಮಾಡುತ್ತೇನೆ. ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ, ಸಾಧ್ಯವಾದಷ್ಟು ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತೇನೆ,” ಎಂದು ಸಚಿವರು ಹೇಳಿದರು.
ಸೊರಬ ಕ್ಷೇತ್ರದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಸುಮಾರು ₹400 ಕೋಟಿ ಮೊತ್ತದ ಪ್ರಯೋಜನ ತಲುಪಿದೆ ಎಂದು ತಿಳಿಸಿದ ಅವರು, ಕ್ಷೇತ್ರದ ಅಭಿವೃದ್ಧಿಯಲ್ಲಿ ರಸ್ತೆ ಸಂಪರ್ಕಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದರು.
“ನನ್ನ ಕ್ಷೇತ್ರದಲ್ಲಿ ಸುಮಾರು 500 ಹಳ್ಳಿಗಳಿವೆ. ಪ್ರತಿಯೊಂದು ಹಳ್ಳಿಗೂ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವುದು ನನ್ನ ಉದ್ದೇಶ. ಎಲ್ಲ ಗ್ರಾಮಗಳ ರಸ್ತೆಗಳನ್ನು ಒಂದೇ ಬಾರಿಗೆ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ಪ್ರತಿಯೊಂದು ಗ್ರಾಮದ ರಸ್ತೆಗಳನ್ನೂ ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತೇನೆ,” ಎಂದು ಸಚಿವರು ಭರವಸೆ ನೀಡಿದರು.
ಆತ್ಮೀಯ ಸ್ವಾಗತ
ಸಚಿವ ಮಧು ಬಂಗಾರಪ್ಪ ಅವರು ಗ್ರಾಮಗಳಿಗೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ತುಂಬು ಪ್ರೀತಿಯಿಂದ ಸ್ವಾಗತಿಸಿದರು. ಮಹಿಳೆಯರು ಸಚಿವರಿಗೆ ಕಂಕಣ ಕಟ್ಟಿ ಆತ್ಮೀಯವಾಗಿ ಬರಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಜನರು ತಮ್ಮ ರಸ್ತೆ ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ಆದ್ಯತೆ ಮೇಲೆ ಈಡೇರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
