ರೈತರು, ಕಾರ್ಖಾನೆಗಳು ಹಾಗೂ ಗ್ರಾಹಕರ ಹಿತ ಕಾಪಾಡಲು ಕೇಂದ್ರ ಸರ್ಕಾರ ಸೂಕ್ತ ನೀತಿ ರೂಪಿಸಬೇಕು: ಸಹಕಾರ ಸಚಿವ ಲಕ್ಷ್ಮಣ ಸವದಿ
ಅಥಣಿ: ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ (MSP) ನಿಗದಿಪಡಿಸುವುದರ ಜೊತೆಗೆ ಕಬ್ಬಿಗೆ ನಿಗದಿಯಾಗುವ FRP ಜತೆಗೆ ಸಕ್ಕರೆಯ MRPಯನ್ನೂ ವೈಜ್ಞಾನಿಕವಾಗಿ ನಿಗದಿಪಡಿಸಬೇಕು ಎಂದು ಸಹಕಾರ ಸಚಿವ ಹಾಗೂ ಶಾಸಕ ಲಕ್ಷ್ಮಣ ಸವದಿ ಆಗ್ರಹಿಸಿದರು.
ಅಥಣಿ ತಾಲೂಕಿನಲ್ಲಿ 7 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ರಸ್ತೆ ಮತ್ತು ಡ್ಯಾಂ ನಿರ್ಮಾಣ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಮಹಾರಾಷ್ಟ್ರ ಮತ್ತು ಕರ್ನಾಟಕದ ರೈತರು ಜಂಟಿಯಾಗಿ ಸಕ್ಕರೆಗೆ MSP ನಿಗದಿಪಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ಸ್ವಾಗತಾರ್ಹ. ಪ್ರತಿ ವರ್ಷ ಕಬ್ಬಿಗೆ FRP ನಿಗದಿಯಾಗುತ್ತದೆ. ಅದರ ಜೊತೆಗೆ ಸಕ್ಕರೆಗೆ MSP ಮತ್ತು MRP ನಿಗದಿಯಾಗುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಹೇಳಿದರು.
“ಮೊದಲು ಸಕ್ಕರೆಯ ದರ ನಿಗದಿಯಾಗಬೇಕು, ನಂತರ ಕಬ್ಬಿನ ದರ ನಿಗದಿಯಾಗಬೇಕು. ಕಾರ್ಖಾನೆಗಳಿಗೆ ಎಷ್ಟು ಲಾಭಾಂಶ ಇರಬೇಕು ಎಂಬುದನ್ನೂ ಕೇಂದ್ರ ಸರ್ಕಾರವೇ ನಿರ್ಧರಿಸುವ ವ್ಯವಸ್ಥೆ ಬರಬೇಕು. ಇದು ಹಲವು ವರ್ಷಗಳಿಂದ ರೈತರು ಹಾಗೂ ಸಕ್ಕರೆ ಉದ್ಯಮದ ವಲಯದಿಂದ ಕೇಳಿಬರುತ್ತಿರುವ ಬೇಡಿಕೆಯಾಗಿದೆ,” ಎಂದು ಲಕ್ಷ್ಮಣ ಸವದಿ ತಿಳಿಸಿದರು.
ಈ ಬೇಡಿಕೆಯನ್ನು ತಾವು ಹಲವು ವರ್ಷಗಳಿಂದ ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತಿದ್ದೇನೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಕ್ಕರೆ ದರ ನಿಗದಿ ಹಾಗೂ MSP ಜಾರಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಈ ಕುರಿತು ಹಲವು ಮನವಿಗಳನ್ನು ಸಲ್ಲಿಸಲಾಗಿದೆ ಎಂದರು.
MSP ನಿಗದಿ ಮಾಡುವಾಗ ಕೇವಲ ಕಬ್ಬು ಬೆಳೆಗಾರರು ಅಥವಾ ಸಕ್ಕರೆ ಕಾರ್ಖಾನೆಗಳ ಹಿತವನ್ನಷ್ಟೇ ಪರಿಗಣಿಸದೆ ಗ್ರಾಹಕರ ಹಿತವನ್ನೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸವದಿ ಅವರು ಹೇಳಿದರು.
ಸಕ್ಕರೆಯನ್ನು ಸಮಾಜದ ಎಲ್ಲ ವರ್ಗದ ಜನರೂ ಬಳಸುತ್ತಾರೆ. ಆದ್ದರಿಂದ ಗೃಹ ಬಳಕೆಯ ಸಕ್ಕರೆಗೆ ಒಂದು ದರ ಹಾಗೂ ಪಾನೀಯ ತಯಾರಿಕಾ ಕಂಪನಿಗಳಂತಹ ವಾಣಿಜ್ಯ ಬಳಕೆದಾರರಿಗೆ ಪ್ರತ್ಯೇಕ ದರ ನಿಗದಿಪಡಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಗ್ಯಾಸ್ಗೆ ಗೃಹಬಳಕೆ ಮತ್ತು ವಾಣಿಜ್ಯ ಬಳಕೆಗೆ ಪ್ರತ್ಯೇಕ ದರ ಇರುವಂತೆ ಸಕ್ಕರೆಗೂ ವ್ಯವಸ್ಥೆ ರೂಪಿಸಬಹುದು ಎಂದು ಅಭಿಪ್ರಾಯಪಟ್ಟರು.
ಇಂತಹ ವ್ಯವಸ್ಥೆಯಿಂದ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗಳು ಹಾಗೂ ಗ್ರಾಹಕರು—ಮೂರೂ ವರ್ಗಗಳ ಹಿತ ಕಾಪಾಡಲು ಸಾಧ್ಯವಾಗುತ್ತದೆ. MSP ಮತ್ತು FRP ನಿಗದಿ ಮಾಡುವುದು ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲ; ಅದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಸವದಿ ಸ್ಪಷ್ಟಪಡಿಸಿದರು.
ಕೇಂದ್ರದ ತೆರಿಗೆ ಪಾಲು ಬಹಿರಂಗಪಡಿಸಲು ಆಗ್ರಹ
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ದೊರೆಯುತ್ತಿರುವ ಅನುದಾನ ಮತ್ತು ತೆರಿಗೆ ಪಾಲಿನ ಕುರಿತು ಸಮಗ್ರ ಲೆಕ್ಕ ನೀಡಬೇಕು ,2014ರಿಂದ ಇಲ್ಲಿಯವರೆಗೆ ಕೇಂದ್ರದಿಂದ ಕರ್ನಾಟಕಕ್ಕೆ ಬಂದಿರುವ ಹಣಕಾಸಿನ ವಿವರವನ್ನು ಬಹಿರಂಗಪಡಿಸಬೇಕು. ದೇಶದಲ್ಲಿ ಅತಿ ಹೆಚ್ಚು GST ನೀಡುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಜ್ಯ ನೀಡಿರುವ GSTಗೆ ನ್ಯಾಯ ಸಮ್ಮತವಾಗಿ ಎಷ್ಟು ಪಾಲು ರಾಜ್ಯಕ್ಕೆ ಮರಳಿದೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದರು.
ಕಳೆದ 50 ವರ್ಷಗಳ ಇತಿಹಾಸದಲ್ಲಿ ಈ ವರ್ಷ ಅತ್ಯಂತ ಕಡಿಮೆ ಮಳೆಯಾಗಿದ್ದು, ಸುಮಾರು 220 ಕ್ಷೇತ್ರಗಳಲ್ಲಿ ಬರಗಾಲ ಘೋಷಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಹಣಕಾಸು ಇಲಾಖೆಯ ಪತ್ರ ಸಹಜ ಪ್ರಕ್ರಿಯೆ
ಹೊಸ ಯೋಜನೆಗಳ ಘೋಷಣೆಯಿಂದ ರಾಜ್ಯದ ಹಣಕಾಸು ವ್ಯವಸ್ಥೆಗೆ ಒತ್ತಡ ಉಂಟಾಗಬಾರದು ಎಂಬ ಉದ್ದೇಶದಿಂದ ಹಣಕಾಸು ಇಲಾಖೆ ಅಧಿಕಾರಿಗಳು ಶಿಸ್ತು ಕಾಪಾಡುವಂತೆ ಪತ್ರ ಬರೆದಿದ್ದಾರೆ. ಆದಾಯಕ್ಕೆ ತಕ್ಕಂತೆ ಖರ್ಚು ಹೊಂದಿಸುವುದು ಹಣಕಾಸು ಇಲಾಖೆಯ ಜವಾಬ್ದಾರಿ. ಬೊಮ್ಮಾಯಿ ಅವರು ಮುಖ್ಯಮಂತ್ರಿ ಯಾಗಿದ್ದಾಗಲೂ ಇದೇ ರೀತಿಯ ಪತ್ರವನ್ನು ಹಣಕಾಸು ಇಲಾಖೆ ನೀಡಿತ್ತು ಎಂದು ಸವದಿ ಅವರು ಹೇಳಿದರು.
ಚುನಾವಣಾ ಆಯುಕ್ತರ ವಿಚಾರದಲ್ಲಿ ಪಕ್ಷದ ನಿಲುವಿಗೆ ಬದ್ಧ
ಚುನಾವಣಾ ಆಯುಕ್ತರ ವಜಾಕ್ಕೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಸವದಿ ಅವರು, ಪಕ್ಷ ಯಾವುದೇ ತೀರ್ಮಾನ ಕೈಗೊಂಡು ಪ್ರತಿಭಟನೆಗೆ ಕರೆ ನೀಡಿದಾಗ ಪಕ್ಷದ ಸದಸ್ಯರು ಅದಕ್ಕೆ ಬದ್ಧರಾಗಿರುತ್ತಾರೆ.“ಪಕ್ಷದ ಅಧ್ಯಕ್ಷರ ಅಭಿಪ್ರಾಯವೇ ನಮ್ಮ ಅಭಿಪ್ರಾಯ” ಎಂದು ಹೇಳಿದರು.
ಚಂಬು ಹಿಡಿದು ನಡೆಯುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿದ ಅವರು, ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಸಮರ್ಪಕ ನೆರವು ದೊರೆಯುತ್ತಿಲ್ಲ ಎಂಬ ಆಕ್ರೋಶವನ್ನು ಪ್ರತಿಭಟನಾಕಾರರು ವ್ಯಕ್ತಪಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.
ಈ ವೇಳೆ ಅಧಿಕಾರಿಗಳಾದ ವೀರಣ್ಣ ವಾಲಿ,ಮಲ್ಲಿಕಾರ್ಜುನ ಮಗದುಮ , ಪ್ರವೀಣ ಹುಣಸಿಕಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ಕಲ್ಲೇಶ ಮಡ್ಡಿ, ರಾಜು ಗುಡೋಡಗಿ,ಶಿವಾನಂದ ದಿವಾನಮಳ, ನಾನಾ ಗೊಟಕಿಂಡಿ,ಮಹಾದೇವ ಹೊನ್ನೋಳಿ, ಅರುಣ್ ಬಾಸಿಂಗಿ,ಪರಶುರಾಮ ಸೋನಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
