ದ್ರಾಕ್ಷಿ, ದಾಳಿಂಬೆ ಬೆಳೆಗಾರರಿಂದ ಸಚಿವ ಲಕ್ಷ್ಮಣ ಸವದಿಗೆ ಅಭಿನಂದನೆ
ಅಥಣಿ: 2025-26ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅಥಣಿ ತಾಲೂಕಿನ ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಾರರಿಗೆ ಸುಮಾರು 80 ಕೋಟಿ ಬೆಳೆ ವಿಮೆ ಪರಿಹಾರ ಜಮೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರು ಅಭಿನಂದನೆ ಸಲ್ಲಿಸಿದರು.
ಅಥಣಿಯ ನಿರೀಕ್ಷಣಾ ಮಂದಿರದಲ್ಲಿ ನಡೆದ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಮುಖಂಡ ಶೇಖರ ನ್ಯಾಮಗೌಡ, ತಾಲೂಕಿನಾದ್ಯಂತ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ದ್ರಾಕ್ಷಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಲಕ್ಷ್ಮಣ ಸವದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಅವರು ರಾಜ್ಯ ಮಟ್ಟದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ವಿಮಾ ಕಂಪನಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರೈತರಿಗೆ ಬೆಳೆ ವಿಮೆ ದೊರಕಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿದರು.
ಅಥಣಿ ತಾಲೂಕಿನಲ್ಲಿ 8,079 ರೈತರು ದ್ರಾಕ್ಷಿ ಬೆಳೆ ವಿಮೆ ಮಾಡಿಸಿದ್ದು, ಒಟ್ಟು 6,346 ಹೆಕ್ಟೇರ್ ಪ್ರದೇಶ ವಿಮೆ ವ್ಯಾಪ್ತಿಗೆ ಒಳಪಟ್ಟಿದೆ. ಅದೇ ರೀತಿ 101 ರೈತರು ದಾಳಿಂಬೆ ಬೆಳೆ ವಿಮೆ ಮಾಡಿಸಿದ್ದು, 76 ಹೆಕ್ಟೇರ್ ಪ್ರದೇಶ ವಿಮೆ ವ್ಯಾಪ್ತಿಯಲ್ಲಿದೆ. ದ್ರಾಕ್ಷಿ ಬೆಳೆಗಾರರಿಗೆ 79.97 ಕೋಟಿ ಹಾಗೂ ದಾಳಿಂಬೆ ಬೆಳೆಗಾರರಿಗೆ 16.60 ಲಕ್ಷ ಸೇರಿದಂತೆ ಒಟ್ಟು 8,180 ರೈತರಿಗೆ ಬೆಳೆ ವಿಮೆ ಪರಿಹಾರ ದೊರೆತಿದೆ. ಇದು ಅಥಣಿ ತಾಲೂಕಿನ ಇತಿಹಾಸದಲ್ಲೇ ದೊಡ್ಡ ಮೊತ್ತದ ಬೆಳೆ ವಿಮೆ ಪರಿಹಾರವಾಗಿದೆ ಎಂದು ಮುಖಂಡರು ತಿಳಿಸಿದರು.
ಕಳೆದ ವರ್ಷ ಮಳೆ ಮಾಪನ ಕೇಂದ್ರಗಳ ಸಮಸ್ಯೆಯಿಂದಾಗಿ ಕೆಲವು ರೈತರಿಗೆ ವಿಮೆ ಪರಿಹಾರ ಪಡೆಯುವಲ್ಲಿ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹವಾಮಾನ ವೈಪರೀತ್ಯದ ಆಧಾರದ ಮೇಲೆ ವಿಮೆ ಪರಿಹಾರ ನೀಡುವ ಸಂದರ್ಭದಲ್ಲಿ ತಾರತಮ್ಯ ಉಂಟಾಗದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಮಳೆ ಮಾಪನ ಕೇಂದ್ರಗಳನ್ನು ದುರಸ್ತಿ ಮಾಡಿಸುವಂತೆ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಮುಖಂಡರು ಹೇಳಿದರು.
ಇದರ ಪರಿಣಾಮವಾಗಿ ವಿಮೆ ಪಾವತಿಸಿದ ರೈತರಿಗೆ ಪರಿಹಾರ ದೊರೆತಿದ್ದು, ಸರಾಸರಿ ಎಕರೆಗೆ ಸುಮಾರು 55 ಸಾವಿರದಷ್ಟು ಪರಿಹಾರ ಜಮೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಹಿರಿಯ ಮುಖಂಡ ಸಿದ್ರಾಯ ಯಲ್ಲಡಗಿ ಮಾತನಾಡಿ, “ನಾವು ನೇರವಾಗಿ ಸಚಿವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ತಿಳಿಸಿದರೆ ಅವರು ಸ್ಪಂದಿಸುವ ಪ್ರವೃತ್ತಿ ಹೊಂದಿದ್ದಾರೆ. ಅನಗತ್ಯವಾಗಿ ಪ್ರತಿಭಟನೆ, ಧರಣಿ ನಡೆಸುವುದಕ್ಕಿಂತ ಸಮಸ್ಯೆಗಳನ್ನು ನೇರವಾಗಿ ಅವರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ವಿರೋಧ ಪಕ್ಷದವರಾಗಲಿ, ರೈತ ಸಂಘಟನೆಗಳಾಗಲಿ, ಯಾರೇ ಮನವಿ ಮಾಡಿದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಾರೆ. ಅವರು ಅಧಿಕಾರದಲ್ಲಿರುವ ಸಂದರ್ಭದಲ್ಲಿ ಅವರ ಸಂಪರ್ಕ ಹಾಗೂ ಅವಕಾಶವನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು,” ಎಂದರು.
ಅಥಣಿ ಮತಕ್ಷೇತ್ರದ ದ್ರಾಕ್ಷಿ ಬೆಳೆಗಾರರು ಹಾಗೂ ರೈತರ ಪರವಾಗಿ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಸರ್ಕಾರದಿಂದ ಪರಿಹಾರ ದೊರಕಿಸಲು ಹಾಗೂ ಅಥಣಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವ ನಿಟ್ಟಿನಲ್ಲಿಯೂ ಸವದಿ ಅವರು ಪ್ರಯತ್ನಿಸಿದ್ದಾರೆ ಎಂದು ಹೇಳಿದರು.
ಶಿವು ಗುಂಡಾಪೂರ ಮಾತನಾಡಿ, “2025-26ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅಥಣಿ ತಾಲೂಕಿನ ರೈತರಿಗೆ ಸುಮಾರು 80 ಕೋಟಿ ಬೆಳೆ ವಿಮೆ ಪರಿಹಾರ ದೊರೆತಿದೆ. ಇದಕ್ಕಾಗಿ ಸಚಿವ ಲಕ್ಷ್ಮಣ ಸವದಿ ಅವರಿಗೆ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ,” ಎಂದರು.
ಬರಗಾಲದಂತಹ ಸಂಕಷ್ಟದ ಸಂದರ್ಭದಲ್ಲಿ ರಾಜಕೀಯ ಬೆರೆಸಿ ಪ್ರತಿಭಟನೆ ನಡೆಸುವುದಕ್ಕಿಂತ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಎಲ್ಲರೂ ಸಹಕರಿಸಬೇಕು. ನೀರಿನ ಸಮಸ್ಯೆ ಎದುರಾಗದಂತೆ ಕಾಲುವೆ ಹಾಗೂ ಕೆರೆ ತುಂಬಿಸುವ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಬೆಳಗಾವಿ ಜಿಲ್ಲೆಯಲ್ಲಿ ಬರಗಾಲ ಘೋಷಣೆಯಾದ ತಾಲೂಕುಗಳಲ್ಲಿ ಅಥಣಿಯೂ ಸೇರಿದ್ದು, ಈ ನಿಟ್ಟಿನಲ್ಲಿಯೂ ಸಚಿವ ಲಕ್ಷ್ಮಣ ಸವದಿ ಅವರು ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿದರು.
ಬರಗಾಲದ ಪರಿಸ್ಥಿತಿಯಲ್ಲಿ ದ್ರಾಕ್ಷಿ ಬೆಳೆಗಳಿಗೆ ನೀರಿನ ಕೊರತೆ ಉಂಟಾಗಿ ರೈತರು ಸಂಕಷ್ಟದಲ್ಲಿದ್ದರು. ಈ ಸಂದರ್ಭದಲ್ಲಿ ಸಚಿವ ಲಕ್ಷ್ಮಣ ಸವದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ರೈತರ ಸಮಸ್ಯೆಗೆ ಸ್ಪಂದಿಸಿ ಬೆಳೆ ವಿಮೆ ದೊರಕಿಸಲು ಅವರು ಪ್ರಯತ್ನಿಸಿದ್ದಾರೆ. ಸತತವಾಗಿ ಹಲವು ವರ್ಷಗಳಿಂದ ಅಥಣಿ ತಾಲೂಕಿನ ದ್ರಾಕ್ಷಿ ಬೆಳೆಗಾರರಿಗೆ ವಿಮೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಅವರ ಪ್ರಯತ್ನಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ,” ಎಂದು ಹೇಳಿದರು.
ಸಚಿವರು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ರೈತರ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಗಮನಕ್ಕೆ ತಂದು ಪರಿಹಾರ ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ನ್ಯಾಯವಾದಿ ಅಮೋಘ ಸಿದ್ದ ಕೊಬ್ರಿ ಮಾತನಾಡಿ, ಕೋವಿಡ್ ಹಾಗೂ ಪ್ರವಾಹದ ಸಂದರ್ಭಗಳಲ್ಲಿಯೂ ಲಕ್ಷ್ಮಣ ಸವದಿ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸಿರುವುದನ್ನು ನಾವು ನೋಡಿದ್ದೇವೆ ಎಂದರು.
“ಪ್ರಸ್ತುತ ಭೀಕರ ಬರಗಾಲದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುವ ಬದಲು ರೈತರಿಗೆ ಯಾವ ರೀತಿಯ ಪರಿಹಾರ ಕಲ್ಪಿಸಬಹುದು ಎಂಬುದರ ಬಗ್ಗೆ ಗಮನಹರಿಸಬೇಕು. ಅಧಿಕಾರದಲ್ಲಿರುವವರು ಹಗಲು-ರಾತ್ರಿ ಕೆಲಸ ಮಾಡಬೇಕು. ವಿರೋಧ ಪಕ್ಷದವರು ಹಾಗೂ ರೈತ ಸಂಘಟನೆಗಳು ಕೂಡ ಪರಿಹಾರ ಕಂಡುಕೊಳ್ಳುವ ಕಾರ್ಯಕ್ಕೆ ಸಹಕಾರ ನೀಡಬೇಕು,” ಎಂದರು.
ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರಿಗೆ ಬೆಳೆ ವಿಮೆ ದೊರಕಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಹಾಗೂ ವಿಮಾ ಕಂಪನಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಯತ್ನಿಸಿರುವ ಸಚಿವ ಲಕ್ಷ್ಮಣ ಸವದಿ ಅವರಿಗೆ ರೈತರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವು ಗುಂಡಾಪೂರ, ಅಮೋಘ ಸಿದ್ದ ಕೊಬ್ರಿ, ಶೇಖರ ನ್ಯಾಮಗೌಡ, ಸಿದ್ರಾಯ ಯಲ್ಲಡಗಿ, ನೂರಾಹಮ್ಮದ ಡೊಂಗರಗಾಂವ , ರಾಘು ದೊಡ್ಡನಿಂಗಪ್ಪಗೋಳ, ಗುರು ದಾಶ್ಯಾಳ, ರಾಮಣ್ಣ ದರಿಗೌಡ, ಆರ್.ಆರ್. ತೇಲಸಂಗ, ವೇಕಣ್ಣ ಅಸಕಿ, ಲಕ್ಷ್ಮಣ ಮುಗಳಖೋಡ, ಇರಗೌಡ ಪಾಟೀಲ, ಬಿ.ಎಸ್. ಬಿರಾದಾರ, ಶಿವು ತೇಲಿ, ಶಿವು ನೇಮಗೌಡ, ಶಂಕರ ಪೂಜಾರಿ, ಅನಂತ ಬಸರಿ ಕೋಡಿ ಸೇರಿದಂತೆ ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಾರರ ಮುಖಂಡರು ಉಪಸ್ಥಿತರಿದ್ದರು.
