Friday, September 4, 2026
Homeಜಿಲ್ಲಾ ಸುದ್ದಿಗಳುರಾಯಚೂರಅಂತರಜಾತಿ ವಿವಾಹದ ಬಳಿಕ ಸಂಸಾರಕ್ಕೆ ಅಡ್ಡಿ ಆರೋಪ: ನ್ಯಾಯಕ್ಕಾಗಿ ಧರಣಿ, ಸುದ್ದಿಗೋಷ್ಠಿ

ಅಂತರಜಾತಿ ವಿವಾಹದ ಬಳಿಕ ಸಂಸಾರಕ್ಕೆ ಅಡ್ಡಿ ಆರೋಪ: ನ್ಯಾಯಕ್ಕಾಗಿ ಧರಣಿ, ಸುದ್ದಿಗೋಷ್ಠಿ

ಲಿಂಗಸುಗೂರು: ಪ್ರೀತಿಸಿ ವಿವಾಹವಾದ ಬಳಿಕ ಪತಿ ಹಾಗೂ ಅವರ ಕುಟುಂಬಸ್ಥರು ತಮ್ಮನ್ನು ಸಂಸಾರ ನಡೆಸಲು ಬಿಡುತ್ತಿಲ್ಲ ಎಂದು ಆರೋಪಿಸಿ ಯುವತಿ ಅಮೃತಾ ಅವರು ಕಳೆದ ಒಂದು ವಾರದಿಂದ ಪತಿಯ ಅಂಗಡಿ ಮುಂದೆ ಧರಣಿ ನಡೆಸಿ, ಬಳಿಕ ಲಿಂಗಸುಗೂರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

ಲಿಂಗಸುಗೂರಿನ ನಿವಾಸಿ ದರ್ಶನ್ ಮೆಹ್ತಾ ಅವರನ್ನು ಪ್ರೀತಿಸಿ 2021ರ ಮಾರ್ಚ್ 17ರಂದು ಅಮರೇಶ್ವರ ದೇವಸ್ಥಾನದಲ್ಲಿ ವಿವಾಹವಾಗಿದ್ದಾಗಿ ಅಮೃತಾ ತಿಳಿಸಿದ್ದಾರೆ. ವಿವಾಹದ ಬಳಿಕ ಪತಿ-ಪತ್ನಿಯಾಗಿ ಜೀವನ ನಡೆಸಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದು ಅವರು ಹೇಳಿದ್ದಾರೆ.

ತಾವು ಕಬ್ಬೇರ (ಕೋಲಿ-ಬೆಸ್ತ) ಸಮುದಾಯಕ್ಕೆ ಸೇರಿದವರಾಗಿರುವ ಕಾರಣಕ್ಕೆ ಪತಿ ಹಾಗೂ ಅವರ ಕುಟುಂಬಸ್ಥರು ತಮ್ಮನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಅಮೃತಾ ಆರೋಪಿಸಿದ್ದಾರೆ. ಇಬ್ಬರು ಮಕ್ಕಳಾದ ಬಳಿಕವೂ ತಮ್ಮನ್ನು ಕುಟುಂಬದಿಂದ ದೂರವಿಡಲು ಹಲವು ರೀತಿಯಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದ ಸಂದರ್ಭದಲ್ಲಿ ರಾಜಿಗೆ ಒಪ್ಪಿಕೊಂಡು ಪ್ರಕರಣವನ್ನು ಹಿಂಪಡೆಯುವಂತೆ ಪತಿ ಕಡೆಯವರು ಮನವೊಲಿಸಿದ್ದರು. ಮನೆಗೆ ಕರೆದುಕೊಂಡು ಹೋಗಿ ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಮನೆಗೆ ತೆರಳಿದ ಬಳಿಕ ಮತ್ತೆ ಕಿರುಕುಳ ಎದುರಾಯಿತು ಎಂದು ಅಮೃತಾ ಆರೋಪಿಸಿದ್ದಾರೆ.

ಪತಿಯನ್ನು ಸಂಬಂಧಿಕರೊಬ್ಬರ ಮನೆಯಲ್ಲಿ ದತ್ತು ಪಡೆದಿದ್ದಾರೆ ಎಂಬ ಹೇಳಿಕೆಯೂ ಕೇಳಿಬಂದಿದ್ದು, ಅದು ಸತ್ಯವಲ್ಲ ಎಂದು ಅಮೃತಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಕ್ಕಳ ಪಾಲನೆ-ಪೋಷಣೆಯ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಈ ರೀತಿಯ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ರಾಯಚೂರು ಜಿಲ್ಲೆಯ ಸಂಘಟನೆಗಳು ಮಧ್ಯಪ್ರವೇಶಕ್ಕೆ ಮನವಿ

ಧರಣಿ ನಡೆಸಿದ ಬಳಿಕ ಲಿಂಗಸುಗೂರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಮೃತಾ, ತಮಗೂ ತಮ್ಮ ಇಬ್ಬರು ಮಕ್ಕಳಿಗೂ ನ್ಯಾಯ ದೊರಕಿಸಿಕೊಡಲು ರಾಯಚೂರು ಜಿಲ್ಲೆಯ ಸಾಮಾಜಿಕ ಸಂಘಟನೆಗಳು, ಮಹಿಳಾ ಸಂಘಟನೆಗಳು, ಜನಪರ ಸಂಘಟನೆಗಳು ಹಾಗೂ ರಾಜಕೀಯ ನಾಯಕರು ಮುಂದೆ ಬರಬೇಕು ಎಂದು ಮನವಿ ಮಾಡಿದ್ದಾರೆ.

ಅದೇ ರೀತಿ ಕಬ್ಬೇರ ಸಮಾಜದ ರಾಯಚೂರು ಜಿಲ್ಲಾ ಮುಖಂಡರು ಹಾಗೂ ಅಧ್ಯಕ್ಷರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ, ತಮ್ಮ ಹಾಗೂ ಮಕ್ಕಳ ಪರವಾಗಿ ನ್ಯಾಯಕ್ಕಾಗಿ ಹೋರಾಟ ನಡೆಸಬೇಕು ಎಂದು ಅವರು ಕೋರಿದ್ದಾರೆ.

ತಮ್ಮ ಹಾಗೂ ಮಕ್ಕಳ ಭವಿಷ್ಯ ಅತಂತ್ರವಾಗಿದ್ದು, ಪತಿಯೊಂದಿಗೆ ಗೌರವಯುತವಾಗಿ ಸಂಸಾರ ನಡೆಸುವ ಅವಕಾಶ ಹಾಗೂ ಮಕ್ಕಳಿಗೆ ಅಗತ್ಯವಾದ ಪಾಲನೆ-ಪೋಷಣೆಯ ಹಕ್ಕು ದೊರಕಬೇಕು. ನ್ಯಾಯ ಸಿಗುವವರೆಗೆ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಅಮೃತಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಮೃತಾ ಅವರ ಸಹೋದರ ಅಭಿಷೇಕ್ ಹಾಗೂ ಸಂಬಂಧಿಕರಾದ ರೇಣುಕ ಪಟ್ಟಿ, ಬಸಮ್ಮ ಮತ್ತು ಮಲ್ಲಮ್ಮ ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ