(ಮಧ್ಯಪ್ರದೇಶ): ಅಧಿಕಾರ, ಅಂತಸ್ತು ಸಿಗುತ್ತಿದ್ದಂತೆ ಐಷಾರಾಮಿ ಜೀವನದ ಬೆನ್ನುಬೀಳುವವರೇ ಹೆಚ್ಚು. ಆದರೆ, ಇಂತಹ ಭೌತಿಕ ವ್ಯಾಮೋಹಗಳನ್ನೆಲ್ಲ ಮೆಟ್ಟಿ ನಿಂತು, ಸರಳತೆಯೇ ಜೀವನದ ಮಂತ್ರ ಎಂದು ಬದುಕುತ್ತಿರುವ ಅಕ್ಷಯ್ ಕುಮಾರ್ ದ್ವಿವೇದಿ ಅವರು ಇದೀಗ ಇಡೀ ದೇಶದ ಪಾಲಿಗೆ ಆದರ್ಶಪ್ರಾಯರಾಗಿದ್ದಾರೆ.
ಮಧ್ಯಪ್ರದೇಶದ ಖಾಂಡ್ವಾದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾಗಿ (Additional Sessions Judge) ಕಾರ್ಯನಿರ್ವಹಿಸುತ್ತಿರುವ ದ್ವಿವೇದಿ ಅವರು, ತಮ್ಮ ಪ್ರಾಮಾಣಿಕತೆ ಮತ್ತು ಜನಪರ ಕಾಳಜಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ.
ಸೌಲಭ್ಯಗಳ ನಿರಾಕರಣೆ, ಸರಳತೆಯೇ ಬದುಕು
ಸಾಮಾನ್ಯವಾಗಿ ಉನ್ನತ ಹುದ್ದೆಯಲ್ಲಿದ್ದವರಿಗೆ ದೊರೆಯುವ ಸರ್ಕಾರಿ ಬಂಗಲೆ, ವಿಐಪಿ ಕಾರು ಅಥವಾ ಭದ್ರತಾ ಸೌಲಭ್ಯಗಳ ಕಡೆಗೆ ಇವರು ತಲೆಹಾಕಿಯೂ ನೋಡುವುದಿಲ್ಲ. ಬದಲಾಗಿ, ಸಣ್ಣದಾದ ಸಾಮಾನ್ಯ ಕೊಠಡಿಯೊಂದರಲ್ಲಿ ವಾಸಿಸುತ್ತಿರುವ ಇವರು, ತಮ್ಮ ದೈನಂದಿನ ಅಡುಗೆಯನ್ನು ತಾವೇ ಮಾಡಿಕೊಳ್ಳುತ್ತಾರೆ. ಪ್ರತಿದಿನ ಯಾವುದೇ ಆಡಂಬರವಿಲ್ಲದೆ, ಕೋರ್ಟ್‌ಗೆ ನಡೆದುಕೊಂಡೇ ಹೋಗುವ ಇವರ ಶೈಲಿ ಸಾರ್ವಜನಿಕರನ್ನು ಅಚ್ಚರಿಗೊಳಿಸಿದೆ.
“ನನ್ನ ಸಂಬಳ ಅರ್ಧಕ್ಕೆ ಇಳಿಸಿ!”
ಇವರ ಪ್ರಾಮಾಣಿಕತೆಯ ಪರಾಕಾಷ್ಠೆ ಎಂದರೆ, ತಮಗೆ ಸಿಗುತ್ತಿರುವ ವೇತನ ಅತಿಯಾಗಿದೆ ಎಂದು ಭಾವಿಸಿ, ಅದನ್ನು ಅರ್ಧಕ್ಕೆ ಇಳಿಸುವಂತೆ ಕೋರಿ ಮಧ್ಯಪ್ರದೇಶ ಹೈಕೋರ್ಟ್‌ಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ. ಇವರ ಈ ನಿರ್ಧಾರ ನ್ಯಾಯಾಂಗ ವ್ಯವಸ್ಥೆಯಲ್ಲೇ ಹೊಸ ಸಂಚಲನ ಮೂಡಿಸಿದೆ. ಇವರ ಬಳಿ ಇರುವ ಏಕೈಕ ಆಸ್ತಿ ಎಂದರೆ, ತಾಯಿ ಪ್ರೀತಿಯಿಂದ ಉಡುಗೊರೆಯಾಗಿ ನೀಡಿದ ಒಂದು ಸಾಮಾನ್ಯ ಮೊಬೈಲ್ ಫೋನ್ ಮಾತ್ರ. ತಮ್ಮ ಜೀವನವನ್ನು ಸಮಾಜ ಸೇವೆಗೆ ಮೀಸಲಿಡಲು ನಿರ್ಧರಿಸಿರುವ ಇವರು, ಮದುವೆಯಾಗದೇ ಬ್ರಹ್ಮಚಾರ್ಯ ಪಾಲಿಸುತ್ತಿದ್ದಾರೆ.
ನ್ಯಾಯದೇವತೆಯ ನಿಜವಾದ ಸೇವಕ
ನ್ಯಾಯಾಧೀಶರಾಗುವ ನಿರ್ಧಾರದ ಹಿಂದೆ ಇವರ ಬಾಲ್ಯದ ನೋವಿದೆ. ಆಸ್ತಿ ವಿವಾದಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ ತಮ್ಮ ತಾಯಿ ಅನುಭವಿಸಿದ ಸಂಕಷ್ಟವನ್ನು ಹತ್ತಿರದಿಂದ ಕಂಡ ಅಕ್ಷಯ್, ಬಡವರು ಇನ್ನು ಮುಂದೆ ಇಂತಹ ನೋವು ಅನುಭವಿಸಬಾರದು ಎಂದು ಪ್ರತಿಜ್ಞೆ ಮಾಡಿದ್ದರು.
ಈಗ ಅದೇ ಕಾಳಜಿಯೊಂದಿಗೆ ತಮ್ಮ ಕೋರ್ಟ್‌ಗೆ ಬರುವ ಭೂಮಿ ಮತ್ತು ಆಸ್ತಿ ಸಂಬಂಧಿತ ಪ್ರಕರಣಗಳನ್ನು ಅತ್ಯಂತ ವೇಗವಾಗಿ ಇತ್ಯರ್ಥಪಡಿಸುತ್ತಿದ್ದಾರೆ. ಇದರಿಂದಾಗಿ ಬಡವರು, ಕಚೇರಿಗಳಿಗೆ ಅಲೆಯುವ ಜಂಜಾಟವಿಲ್ಲದೆ ಕ್ಷಿಪ್ರ ನ್ಯಾಯ ಪಡೆಯುತ್ತಿದ್ದಾರೆ.
ನೆಟ್ಟಿಗರ ‘ಸಲಾಮ್’
ಇಂದಿನ ಭ್ರಷ್ಟಾಚಾರದ ದಿನಗಳಲ್ಲಿ ಅಕ್ಷಯ್ ಕುಮಾರ್ ದ್ವಿವೇದಿ ಅವರಂತಹ ನಿಸ್ವಾರ್ಥ ನ್ಯಾಯಾಧೀಶರು ಇರುವುದು ದೇಶದ ಹೆಮ್ಮೆ. ಇವರ ಮಾನವೀಯ ಮೌಲ್ಯಗಳಿಗೆ ಇಂಟರ್ನೆಟ್ ಲೋಕದಲ್ಲಿ ಜನಸಾಮಾನ್ಯರು ಗೌರವಪೂರ್ವಕವಾಗಿ ‘ಸಲಾಮ್’ ಸಲ್ಲಿಸುತ್ತಿದ್ದಾರೆ.
