Wednesday, July 8, 2026
Homeಕ್ರೈಂ ಸುದ್ದಿಗಳುನಕಲಿ ಡಿಎಸ್‌ಪಿ ಅಸಲಿ ಆಟಕ್ಕೆ ಕೊನೆಗೂ ಬಿತ್ತು ಬ್ರೇಕ್!

ನಕಲಿ ಡಿಎಸ್‌ಪಿ ಅಸಲಿ ಆಟಕ್ಕೆ ಕೊನೆಗೂ ಬಿತ್ತು ಬ್ರೇಕ್!

​ವಿಜಯಪುರ: ಪೊಲೀಸ್ ಸಮವಸ್ತ್ರ ಧರಿಸಿ, ತಾನೊಬ್ಬ ಪ್ರಭಾವಿ ಡಿಎಸ್‌ಪಿ ಎಂದು ನಂಬಿಸಿ ನಿರುದ್ಯೋಗಿ ಯುವಕರಿಗೆ ಸರ್ಕಾರಿ ನೌಕರಿಯ ಆಮಿಷ ಒಡ್ಡುತ್ತಿದ್ದ ಖತರ್ನಾಕ್ ವಂಚಕ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಉದ್ಯೋಗ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿ, ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಕಲಿ ಡಿಎಸ್‌ಪಿಯನ್ನು ವಿಜಯಪುರ ಜಿಲ್ಲಾ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

​ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ವರಗೋಡದಿನ್ನಿ ಗ್ರಾಮದ ಗ್ಯಾನಗೌಡ ಅಲಿಯಾಸ್ ಜ್ಞಾನಗೌಡ ಅಲಿಯಾಸ್ ಗಣೇಶ್ ಅಲಿಯಾಸ್ ಸಿ. ಸಂಪತ್‌ಕುಮಾರ್ (31) ಬಂಧಿತ ಆರೋಪಿ.

​ವಂಚನೆಯ ಜಾಲ ಹಾಗೂ ಹಿನ್ನೆಲೆ:
​ಆರೋಪಿ ಸಂಪತ್‌ಕುಮಾರ್ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯ ಸೋಗಿನಲ್ಲಿ ಓಡಾಡುತ್ತಿದ್ದ. ತಾನು ಡಿಎಸ್‌ಪಿ ಎಂದು ಪರಿಚಯಿಸಿಕೊಂಡು, ನಿರುದ್ಯೋಗಿ ಯುವಕರಿಗೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI), ಜೈಲರ್ ಸೇರಿದಂತೆ ವಿವಿಧ ಆಕರ್ಷಕ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸುತ್ತಿದ್ದ. ಇದನ್ನೇ ಬಂಡವಾಳವಾಗಿಸಿಕೊಂಡು ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸುತ್ತಾ ಬಂದಿದ್ದ. ವಿಜಯಪುರದ ಎಪಿಎಂಸಿ ಠಾಣೆ, ತಾಳಿಕೋಟೆ ಮತ್ತು ಮುದ್ದೇಬಿಹಾಳ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಸದ್ಯ 5ಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

​ಹಣ ಕೇಳಿದ್ದಕ್ಕೆ ಕೊಲೆ ಯತ್ನ!
​2012ರಲ್ಲಿ ವಿಜಯಪುರ ಜಿಲ್ಲೆಯ ಕಾಖಂಡಕಿ ಗ್ರಾಮದ (ಹಾಲಿ ವಿಜಯಪುರ ಗಾಂಧಿನಗರ ನಿವಾಸಿ) ವಿಠ್ಠಲ ಛಾಯಾಗೋಳ ಎಂಬುವವರ ಸಂಬಂಧಿಕರ ಮಗನಿಗೆ ಪೊಲೀಸ್ ನೌಕರಿ ಕೊಡಿಸುವುದಾಗಿ ನಂಬಿಸಿ ಆರೋಪಿ ₹1.20 ಲಕ್ಷ ಪಡೆದುಕೊಂಡಿದ್ದ. ಆದರೆ, ವರ್ಷಗಳು ಕಳೆದರೂ ನೌಕರಿ ಕೊಡಿಸದಿದ್ದಾಗ ಛಾಯಾಗೋಳ ಅವರು ತಮ್ಮ ಹಣವನ್ನು ಮರಳಿ ನೀಡುವಂತೆ ತೀವ್ರ ಒತ್ತಾಯ ಮಾಡಿದ್ದರು.
​ಇದರಿಂದ ಆಕ್ರೋಶಗೊಂಡ ಆರೋಪಿ ಸಂಪತ್‌ಕುಮಾರ್, ತನ್ನಿಬ್ಬರು ಸಹಚರರೊಂದಿಗೆ ಸೇರಿ ದೂರುದಾರ ವಿಠ್ಠಲ ಅವರನ್ನು ಕಾರಿನಲ್ಲಿ ಅಪಹರಿಸಿದ್ದ. ಬಳಿಕ ಅವರ ಕೈ-ಕಾಲು ಕಟ್ಟಿ, ಗೋಣಿ ಚೀಲದಲ್ಲಿ ತುಂಬಿ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಹತ್ತಿರದ ಹುಲಗಿ ಗ್ರಾಮದ ಕನಾಲ್‌ನಲ್ಲಿ ಎಸೆದು ಕೊಲೆ ಮಾಡಲು ಯತ್ನಿಸಿದ್ದ. ಈ ಸಂಬಂಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು.

​12 ವರ್ಷಗಳ ಕಣ್ಣಾಮುಚ್ಚಾಲೆ ಆಟ:
​ಕೊಲೆ ಯತ್ನ ಪ್ರಕರಣದಲ್ಲಿ ಪೊಲೀಸರು ಈ ಹಿಂದೆ ಆರೋಪಿ ಗ್ಯಾನಗೌಡ ಹಾಗೂ ಆತನಿಗೆ ಸಹಕರಿಸಿದ್ದ ಒಬ್ಬ ಮಹಿಳೆ ಸೇರಿದಂತೆ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ, ಜಾಮೀನಿನ ಮೇಲೆ ಹೊರಬಂದ ಆರೋಪಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ತಲೆಮರೆಸಿಕೊಂಡಿದ್ದ ಅವಧಿಯಲ್ಲೂ ಈತನ ವಂಚನೆ ನಿಂತಿರಲಿಲ್ಲ. ಮುದ್ದೇಬಿಹಾಳ ತಾಲೂಕಿನ ಹಂದ್ರ್ಯಾಳದ ರೇವಣಸಿದ್ದಪ್ಪ ದೊಡಮನಿ ಎಂಬುವವರ ಮಗನಿಗೆ ಜೈಲರ್ ನೌಕರಿ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ ₹8 ಲಕ್ಷ ಪಡೆದು ವಂಚಿಸಿದ್ದ. ಈ ಬಗ್ಗೆ ತಾಳಿಕೋಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು.

​ಖೆಡ್ಡಾ ತೋಡಿದ ಪೊಲೀಸರು:
​ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿ ಸಂಪತ್‌ಕುಮಾರ್ ಬೇರೆ ಬೇರೆ ಹೆಸರುಗಳನ್ನು ಬಳಸುತ್ತಿದ್ದ. ಅಲ್ಲದೆ, ನೂರಾರು ವಿಭಿನ್ನ ಮೊಬೈಲ್ ಸಂಖ್ಯೆಗಳನ್ನು ಬದಲಾಯಿಸುತ್ತಾ ಊರಿಂದ ಊರಿಗೆ ಅಲೆದಾಡುತ್ತಿದ್ದ. ಈತನ ಪತ್ತೆಗಾಗಿ ವಿಜಯಪುರ ಎಪಿಎಂಸಿ ಠಾಣೆಯ ಪಿಎಸ್‌ಐ ಬಸವರಾಜ್ ತಿಪ್ಪಾರೆಡ್ಡಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತಾಂತ್ರಿಕ ವಿಶ್ಲೇಷಣೆ ಹಾಗೂ ಮೊಬೈಲ್ ಲೋಕೇಶನ್ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ತಂಡ ಜುಲೈ 6 ರಂದು ಬೆಂಗಳೂರಿನಲ್ಲಿ ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿದೆ…

ಹೆಚ್ಚಿನ ಸುದ್ದಿ