Sunday, July 5, 2026
Homeಅಪಘಾತವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಕೃಷ್ಣಾ ನದಿಗೆ ಉರುಳಿದ ಟಿಪ್ಪರ್, ಚಾಲಕ ನಾಪತ್ತೆ

ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: ಕೃಷ್ಣಾ ನದಿಗೆ ಉರುಳಿದ ಟಿಪ್ಪರ್, ಚಾಲಕ ನಾಪತ್ತೆ

​ಕೊಲ್ಲಾರ: ಮುಂದೆ ಹೋಗುತ್ತಿದ್ದ ಕಾರನ್ನು ಹಿಂದಿಕ್ಕುವ ಭರದಲ್ಲಿ ನಿಯಂತ್ರಣ ತಪ್ಪಿದ ಟಿಪ್ಪರ್‌ವೊಂದು ಕಾರಿಗೆ ಡಿಕ್ಕಿ ಹೊಡೆದು, ಬಳಿಕ ಸೇತುವೆಯ ತಡೆಗೋಡೆಯನ್ನು ಮುರಿದುಕೊಂಡು ಕೃಷ್ಣಾ ನದಿಗೆ ಉರುಳಿ ಬಿದ್ದಿರುವ ಭೀಕರ ಘಟನೆ ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ಕೊರ್ತಿ-ಕೊಲ್ಲಾರ ಸೇತುವೆ ಮೇಲೆ ಬುಧವಾರ ಸಂಜೆ ಸಂಭವಿಸಿದೆ.

​ಅಪಘಾತದ ತೀವ್ರತೆಗೆ ಟಿಪ್ಪರ್ ಚಾಲಕ ನದಿಯಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದು, ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

​ಮೀನುಗಾರರಿಂದ ಕ್ಲೀನರ್ ರಕ್ಷಣೆ:
ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕ್ರಾಸ್‌ನಿಂದ ಕೊಲ್ಲಾರಕ್ಕೆ ಮರಳನ್ನು (ಕಡಿ) ಸಾಗಿಸುತ್ತಿದ್ದ ಟಿಪ್ಪರ್, ಸೇತುವೆಯ ಮೇಲಿದ್ದ ಕಾರಿಗೆ ಗುದ್ದಿ ನೇರವಾಗಿ ನದಿಗೆ ಬಿದ್ದಿದೆ. ಈ ವೇಳೆ ಟಿಪ್ಪರ್‌ನಲ್ಲಿದ್ದ ಕ್ಲೀನರ್, ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಯರನಗಿ ಗ್ರಾಮದ ಸಂಜು ಮಲ್ಲಪ್ಪ ಮೂಳಿಗೆ (28) ಎಂಬುವವರನ್ನು ಸ್ಥಳೀಯ ಮೀನುಗಾರರು ತಕ್ಷಣವೇ ತೆಪ್ಪದ ಮೂಲಕ ಕಾರ್ಯಪ್ರವೃತ್ತರಾಗಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
​ಆದರೆ, ಟಿಪ್ಪರ್ ಚಾಲಕ ಬಾಗಲಕೋಟೆ ತಾಲ್ಲೂಕಿನ ಬೆಣ್ಣೂರು ಗ್ರಾಮದ ಸಂತೋಷ ಕೋಟಿ ಎಂಬಾತ ನದಿಯಲ್ಲಿ ನಾಪತ್ತೆಯಾಗಿದ್ದು, ಆತನಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

​ಸ್ಥಗಿತಗೊಂಡ ಕಾರ್ಯಾಚರಣೆ:
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದು, ಸ್ಥಳೀಯ ಮೀನುಗಾರರ ನೆರವಿನೊಂದಿಗೆ ನದಿಯಲ್ಲಿ ವ್ಯಾಪಕ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಆದರೆ, ಕತ್ತಲಾದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಗುರುವಾರ ಬೆಳಗ್ಗೆಯಿಂದ ಚಾಲಕನಿಗಾಗಿ ಶೋಧ ಕಾರ್ಯ ಮುಂದುವರಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನದಿಗೆ ಬಿದ್ದಿರುವ ಟಿಪ್ಪರ್ ಅನ್ನು ಮೇಲೆತ್ತಲು ಬೃಹತ್ ಕ್ರೇನ್ ಬಳಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

​ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್:
ಅಪಘಾತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದರಿಂದಾಗಿ ಪ್ರಯಾಣಿಕರು ತೀವ್ರ ಪರದಾಡುವಂತಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಅಪಘಾತಕ್ಕೊಳಗಾಗಿದ್ದ ಕಾರನ್ನು ರಸ್ತೆಯಿಂದ ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವರದಿ:ಭರತ ಪೂಜಾರ
ಸಂಪಾದಕರು: ರಾಮಚಂದ್ರಪ್ಪ ಪೂಜೇರ

ಹೆಚ್ಚಿನ ಸುದ್ದಿ