Saturday, June 13, 2026
Homeಬೆಂಗಳೂರುಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದ ಇಬ್ಬರು ವ್ಯಕ್ತಿಗಳ ಬಂಧನ, 12.50 ಗ್ರಾಂ ಎರಡು ಚಿನ್ನದ ಸರಗಳು...

ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದ ಇಬ್ಬರು ವ್ಯಕ್ತಿಗಳ ಬಂಧನ, 12.50 ಗ್ರಾಂ ಎರಡು ಚಿನ್ನದ ಸರಗಳು ಮತ್ತು 04 ದ್ವಿ-ಚಕ್ರ ವಾಹನಗಳ ವಶ, ಮೌಲ್ಯ ₹ 06 ಲಕ್ಷ

ಬೆಂಗಳೂರು: ಕೆಂಗೇರಿ ಪೊಲೀಸ್ ಸರಹದ್ದಿನ ಕೋಡಿಪಾಳ್ಯದಲ್ಲಿ ವಾಸವಿರುವ ಪಿರ್ಯಾದುದಾರರು ದಿನಾಂಕ:07/05/2026 ರಂದು ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ.

ದೂರಿನಲ್ಲಿ ಪಿರ್ಯಾದುದಾರರು ಅದೇ ದಿನ ಬೆಳಿಗ್ಗೆ ಠಾಣಾ ಸರಹದ್ದಿನ ಕೋಡಿಪಾಳ್ಯದ 01ನೇ ಕ್ರಾಸ್‌ನಲ್ಲಿರುವ ಅಂಗನವಾಡಿ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಪಿರ್ಯಾದುದಾರರ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ತಿಳಿಸಿರುತ್ತಾರೆ. ಈ ಕುರಿತು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಸರ ಅಪಹರಣ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆ ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಭಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆ ಹಾಕಿ ದಿನಾಂಕ:30/05/2026 ರಂದು ಡಿ.ಜೆ. ಹಳ್ಳಿಯಲ್ಲಿ ಓರ್ವ ವ್ಯಕ್ತಿಯನ್ನು ಹಾಗೂ ಕೆ.ಜಿ. ಹಳ್ಳಿಯಲ್ಲಿ ಓರ್ವ ವ್ಯಕ್ತಿ ಸೇರಿದಂತೆ ಇಬ್ಬರು ವ್ಯಕ್ತಿಗಳನ್ನು ಅವರುಗಳ ವಾಸದ ಮನೆಯ ಬಳಿ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಗಳಿಬ್ಬರನ್ನು ವಿಚಾರಣೆಗೊಳಪಡಿಸಲಾಗಿ ಈ ಪ್ರಕರಣದಲ್ಲಿ ಸರ ಆಪಹರಣ ಮಾಡಿದ್ದಾಗಿ ತಪ್ಪೋಪ್ಪಿಕೊಂಡಿರುತ್ತಾರೆ ಹಾಗೂ ಠಾಣಾ ಸರಹದ್ದಿನಲ್ಲಿ ಮತ್ತೊಂದು ಸರ ಅಪಹರಣ ಮತ್ತು ನಗರದ ಇತರೆ ಕಡೆಗಳಲ್ಲಿ 04 ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ.

ದಿನಾಂಕ:30/05/2026 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ 08 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.

ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಗಳಿಬ್ಬರನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿದ್ದು, ಕಳವು ಮಾಡಿದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಸಲುವಾಗಿ ಅವರುಗಳ ವಾಸದ ಮನೆಯ ಬಳಿಯಿರುವ ಖಾಲಿಜಾಗದಲ್ಲಿ ನಿಲ್ಲಿಸಿರುವುದಾಗಿ ಹಾಗೂ ಕಳವು ಮಾಡಿದ್ದ ಚಿನ್ನದ ಸರಗಳನ್ನು ಕೆ.ಜಿ.ಹಳ್ಳಿಯ ಜ್ಯೂವೆಲ್ಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ದಿನಾಂಕ:02/06/2026 ರಂದು ಜ್ಯೂವೆಲ್ಲರಿ ಅಂಗಡಿಯಿಂದ 12.50 ಗ್ರಾಂನ ಎರಡು ಚಿನ್ನದ ಸರಗಳನ್ನು ಹಾಗೂ ದಿನಾಂಕ:05/06/2026 ರಂದು ಆರೋಪಿಗಳ ವಾಸದ ಮನೆಯ ಬಳಿಯಿರುವ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ * 6,00,000/- (ಆರು ಲಕ್ಷ ರೂಪಾಯಿ).

ದಿನಾಂಕ:05/06/2026 ರಂದು ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.

ಈ ಪ್ರಕರಣದ ಆರೋಪಿಗಳ ಬಂಧನದಿಂದ ಕೆಂಗೇರಿ ಪೊಲೀಸ್ ಠಾಣೆಯ 02 ಸರ ಅಪಹರಣ ಪ್ರಕರಣಗಳು ಹಾಗೂ ರಾಮಮೂರ್ತಿನಗರ, ಅವಲಹಳ್ಳಿ, ಕೆ.ಆರ್.ಪುರ ಹಾಗೂ ತಾವರೆಕೆರೆ ಪೊಲೀಸ್ ಠಾಣೆಯ ತಲಾ ಒಂದೊಂದು ದ್ವಿಚಕ್ರ ವಾಹನ ಕಳವು ಪ್ರಕರಣ ಸೇರಿದಂತೆ 06 ಪ್ರಕರಣಗಳು ಪತ್ತೆಯಾಗಿರುತ್ತವೆ.

ಈ ಕಾರ್ಯಾಚರಣೆಯನ್ನು ನೈರುತ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ.ಅನಿತಾ.ಬಿ.ಹದ್ದಣ್ಣನವರ, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಕೆಂಗೇರಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ.ಸತ್ಯವತಿ.ಎಸ್ ರವರ ನೇತೃತ್ವದಲ್ಲಿ, ಕೆಂಗೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಜಗದೀಶ.ಎನ್, ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಯವರ ತಂಡವು ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಹೆಚ್ಚಿನ ಸುದ್ದಿ