ಡಾ.ಎಸ್.ಸಂಗಮೇಶ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರದ 12 ವರ್ಷಗಳ ಆಡಳಿತ ನೀತಿ, ನಿರೂಪಣೆಗಳಿಂದ ನಿರ್ಧಾರಾತ್ಮಕ ಆಡಳಿತದತ್ತ, ಸೋರಿಕೆಗಳಿಂದ ನೇರ ಸೌಲಭ್ಯ ವರ್ಗಾವಣೆಯತ್ತ, ಸಂಕಷ್ಟ ನಿರ್ವಹಣೆಯಿಂದ ಜಾಗತಿಕ ಆತ್ಮವಿಶ್ವಾಸದತ್ತ, ಮೂಲಭೂತ ಮೂಲಸೌಕರ್ಯ ಕೊರತೆಯಿಂದ ಭವಿಷ್ಯಮುಖಿ ಅಭಿವೃದ್ಧಿಯತ್ತ ಭಾರತವನ್ನು ಮುನ್ನಡೆಸಿದ ಪಯಣವಾಗಿದೆ. ಪ್ರಧಾನಿ ಮೋದಿ ಅವರ ನಾಯಕತ್ವದ ಸರ್ಕಾರ ರಚನಾತ್ಮಕ ಸುಧಾರಣೆಗಳು, ವ್ಯಾಪಕ ಕಲ್ಯಾಣ ಕಾರ್ಯಕ್ರಮಗಳು, ರಾಷ್ಟ್ರೀಯ ಭದ್ರತೆ, ಡಿಜಿಟಲ್ ಪರಿವರ್ತನೆ ಮತ್ತು ಜಾಗತಿಕ ಪ್ರತಿಷ್ಠೆಯ ಮೆರುಗನ್ನು ಹೆಚ್ಚಿಸಿದೆ.
ಈ 12 ವರ್ಷಗಳ ಆಡಳಿತವನ್ನು ಮೂರು ಹಂತಗಳಲ್ಲಿ ನೋಡಬಹುದು. 2014-2019: ವ್ಯವಸ್ಥೆಯ ಶುದ್ಧೀಕರಣ ಮತ್ತು ಸುಧಾರಣೆ, 2019-2022: ಸಂಕಷ್ಟಗಳ ನಡುವೆಯೂ ಸ್ಥಿರ ಮತ್ತು ಪರಿಣಾಮಕಾರಿ ನಿರ್ವಹಣೆ, 2022-2026: ವೇಗದ ರಾಷ್ಟ್ರ ನಿರ್ಮಾಣ ಮತ್ತು ಅಭಿವೃದ್ಧಿ ಎಂದು ವಿಂಗಡಿಸಬಹುದು.
ಪ್ರಧಾನಿ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ₹10 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಸ್ಥಗಿತಗೊಂಡ ಯೋಜನೆಗಳನ್ನು ಪುನರುಜ್ಜೀವನಗೊಳಿಸಿ, ನಿಸ್ತೇಜಗೊಂಡಿದ್ದ ನೀತಿ, ನಿರೂಪಣೆಗಳನ್ನು ಕಾರ್ಯಗತಗೊಳಿಸಿ, ಆಡಳಿತವಾಗಿ ಪರಿವರ್ತ ಮಾಡುವ ಜೊತೆಗೆ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಿದೆ. ಜಗತ್ತಿನಲ್ಲಿ ಅತಿ ದೊಡ್ಡ ಆರ್ಥಿಕಕತೆಯಲ್ಲಿ ಒಳಗೊಳ್ಳುವ ಜನಧನ್ ಯೋಜನೆಯ ಮೂಲಕ 56 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು, ಬಡ ಕುಟುಂಬಗಳನ್ನು ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸಿ ಸರ್ಕಾರಿ ಸೌಲಭ್ಯಗಳನ್ನು ನೇರವಾಗಿ ತಲುಪಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಹೆಚ್ಚಿನ ಪ್ರಮಾಣದ ಮಹಿಳೆಯರು ಬ್ಯಾಂಕಿಂಗ್ ವಲಯಕ್ಕೆ ಪ್ರವೇಶಿಸಿರುವುದು ಒಂದು ಹೆಗ್ಗಳಿಕೆ. ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ಮೂಲಕ ₹2.5 ಲಕ್ಷ ಕೋಟಿಗೂ ಅಧಿಕ ಹಣದ ಸೋರಿಕೆ ತಡೆಗಟ್ಟಿದ್ದು, ಕಲ್ಯಾಣ ಯೋಜನೆಗಳ ಲಾಭ ನೇರವಾಗಿ ಫಲಾನುಭವಿಗಳಿಗೆ ತಲುಪುವಂತೆ ಮಾಡಲಾಗಿದೆ. ಯುಪಿಐ ಡಿಜಿಟಲ್ ಪಾವತಿಗಳಲ್ಲಿ ಕ್ರಾಂತಿ ಉಂಟುಮಾಡಿದ್ದು, ಬೀದಿ ಬದಿ ವ್ಯಾಪಾರಿಗಳು, ಸಣ್ಣ ಉದ್ಯಮಿಗಳು, ರೈತರು ಹಾಗೂ ಸಾಮಾನ್ಯ ನಾಗರಿಕರು ಡಿಜಿಟಲ್ ಆರ್ಥಿಕತೆಯಲ್ಲಿ ಭಾಗವಹಿಸಲು ಸಾಧ್ಯವಾಗಿದೆ.
ಸರಕು ಮತ್ತು ಸೇವಾ ತೆರಿಗೆ ಜಿ.ಎಸ್.ಟಿ ದೇಶವನ್ನು ಏಕ ಮಾರುಕಟ್ಟೆಯಾಗಿ ರೂಪಿಸಿದ್ದು, ಸರಕು ಸಾಗಣೆಯನ್ನು ಸರಳಗೊಳಿಸಿ, ಆರ್ಥಿಕತೆಯ ಔಪಚಾರಿಕತೆಯನ್ನು ಬಲಪಡಿಸಿದೆ. ಮಾಸಿಕ ಜಿ.ಎಸ್.ಟಿ ಸಂಗ್ರಹ ₹1.7 ಲಕ್ಷ ಕೋಟಿ ಮೀರಿದ್ದು, ಸಂಪನ್ಮೂಲ ಕ್ರೋಢೀಕರಣ ವಲಯದಲ್ಲಿ ಇದು ಅತಿ ದೊಡ್ಡ ಸಾಧನೆಯಾಗಿದೆ.
ಸ್ವಚ್ಛ ಭಾರತ ಅಭಿಯಾನದಡಿ 11 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ವಿಶೇಷವಾಗಿ ಮಹಿಳೆಯರ ಗೌರವ, ಆರೋಗ್ಯ ಮತ್ತು ಸುರಕ್ಷತೆಯನ್ನು ಹೆಚ್ಚಿಸಿದೆ. ಜಗತ್ತಿನಲ್ಲಿಯೇ ಅತಿ ದೊಡ್ಡ ಆಂದೋಲನವಾಗಿ ಇದು ಹೊರ ಹೊಮ್ಮಿದೆ. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯ ವಿತರಣೆ ಮಾಡಲಾಗಿದ್ದು, ದುರ್ಬಲ ವರ್ಗಗಳ ರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಕೋವಿಡ್ ವಿಪತ್ತಿನ ಸಂದರ್ಭದಲ್ಲಿ ₹20 ಲಕ್ಷ ಕೋಟಿ ಸ್ವಾವಲಂಬಿ ಭಾರತ ಪ್ಯಾಕೇಜ್ ಘೋಷಿಸಿ ಸಂಕಷ್ಟದಲ್ಲಿರುವವರಿಗೆ ನೆರವು ನೀಡಲಾಗಿತ್ತು. ಜೊತೆಗೆ ಸಬ್ಸಿಡಿ ಆಧಾರಿತ ಉತ್ಪಾದನೆ – ಪಿಎಲ್ಐ ಯೋಜನೆಗಳ ಮೂಲಕ ಸಂಕಷ್ಟವನ್ನು ಅವಕಾಶವನ್ನಾಗಿ ಪರಿವರ್ತಿಸಿ ಉದ್ಯಮಗಳ ಬೆಳವಣಿಗೆ, ಉದ್ಯೋಗ ಸೃಷ್ಟಿ, ವಿದ್ಯುನ್ಮಾನ, ಔಷಧೋದ್ಯಮ ಮತ್ತು ಉತ್ಪಾದನಾ ಕ್ಷೇತ್ರಗಳಿಗೆ ಬಲ ನೀಡಲಾಗಿದೆ.
ಮೊಬೈಲ್ ಉತ್ಪಾದನೆ ಮತ್ತು ರಫ್ತು ಕ್ಷೇತ್ರದಲ್ಲಿ ಭಾರತ ಗಣನೀಯ ಬೆಳವಣಿಗೆ ಸಾಧಿಸಿದ್ದು, ಮೊಬೈಲ್ ರಫ್ತು ₹1.9 ಲಕ್ಷ ಕೋಟಿಗೂ ಅಧಿಕವಾಗಿದೆ. ಇದು ಆಮದು ಅವಲಂಬನೆಯಿಂದ ಉತ್ಪಾದನಾ ಶಕ್ತಿಯತ್ತ ಸಾಗುತ್ತಿರುವ ಭಾರತದ ಸಾಮರ್ಥ್ಯದ ಪ್ರತೀಕವಾಗಿದೆ. ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಬಾಲಾಕೋಟ್ ದಾಳಿ, ಜಮ್ಮು – ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವಿದ್ದ ಸಂವಿಧಾನದ ವಿಧಿ 370 ರದ್ದು, ರಕ್ಷಣಾ ಕ್ಷೇತ್ರದ ಆಧುನೀಕರಣ, ಐಎನ್ಎಸ್ ವಿಕ್ರಾಂತ್ ಹಾಗೂ ಆಪರೇಷನ್ ಸಿಂಧೂರ್ ಮೊದಲಾದ ಕ್ರಮಗಳು ಬೆದರಿಕೆಗಳಿಗೆ ಶೂನ್ಯ ಸಹಿಷ್ಣುತೆ ತೋರಿದ ಆತ್ಮವಿಶ್ವಾಸಿ ಭಾರತದ ಸಂಕೇತಗಳಾಗಿವೆ.
ವ್ಯಾಕ್ಸಿನ್ ಮೈತ್ರಿ, ಜಿ-20 ಅಧ್ಯಕ್ಷತೆ, ಹೆಚ್ಚುತ್ತಿರುವ ರಫ್ತು ಹಾಗೂ ಕಾರ್ಯತಂತ್ರದ ಪಾಲುದಾರಿಕೆಗಳ ಮೂಲಕ ಭಾರತ ಜಾಗತಿಕ ಮಟ್ಟದಲ್ಲಿ ವಿಶ್ವಾಸಾರ್ಹ “ವಿಶ್ವಬಂಧು” ರಾಷ್ಟ್ರವಾಗಿ ಹೊರಹೊಮ್ಮಿದೆ. ಹೆದ್ದಾರಿಗಳ ನಿರ್ಮಾಣ, ವಂದೇ ಭಾರತ್ ರೈಲುಗಳು, ಜಲಮಾರ್ಗಕ್ಕೆ ಆದ್ಯತೆ, ಸಾಗಾಣೆ ಕಾರಿಡಾರ್ ಗಳು ಮತ್ತು ಪಿಎಂ ಗತಿ ಶಕ್ತಿ ಯೋಜನೆಗಳ ಮೂಲಕ ಮೂಲಸೌಕರ್ಯ ಕ್ಷೇತ್ರದಲ್ಲಿ ಅಭೂತಪೂರ್ವ ಬೆಳವಣಿಗೆ ಕಂಡುಬಂದಿದ್ದು, ಪ್ರಯಾಣದ ಸಮಯ ಮತ್ತು ವೆಚ್ಚ ಕಡಿಮೆಯಾಗಿದೆ.
ಪಿಎಂ ಆವಾಸ್, ವಿದ್ಯುತ್ ಸಂಪರ್ಕ, ವಸತಿ ಹಾಗೂ ಸೌಲಭ್ಯಗಳ ಮೂಲಕ ಸಾಮಾನ್ಯ ಜನರ ಜೀವನಮಟ್ಟ ಸುಧಾರಿಸಿದ್ದು, ಕಲ್ಯಾಣ ಯೋಜನೆಗಳನ್ನು ಗೌರವ ಮತ್ತು ಆಸ್ತಿ ಸೃಷ್ಟಿಯೊಂದಿಗೆ ಜೋಡಿಸಿರುವುದು ಮೋದಿ ಸರ್ಕಾರದ ವಿಶೇಷತೆಯಾಗಿದೆ. ಜಲ್ ಜೀವನ್ ಮಿಷನ್ ಯೋಜನೆಯಡಿ ಅಸಂಖ್ಯಾತ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಿದ ಶ್ರೇಯಸ್ಸು ಮೋದಿ ಸರ್ಕಾರಕ್ಕೆ ಸಲ್ಲುತ್ತದೆ.
ಸೆಮಿಕಂಡಕ್ಟರ್ ಮಿಷನ್, ನವೋದ್ಯಮ ಬೆಳವಣಿಗೆ, ವಿದ್ಯುನ್ಮಾನ ಪರಿಸರ ವ್ಯವಸ್ಥೆ, ಕೃತಕ ಬುದ್ಧಿಮತ್ತೆ (ಎಐ), ಚಿಪ್ ಗಳು, ವಿದ್ಯುತ್ ವಾಹನಗಳು (ಇವಿ), ಹಸಿರು ಇಂಧನ ಮತ್ತು ರಕ್ಷಣಾ ಉತ್ಪಾದನೆಗಳು ಭಾರತದ ಭವಿಷ್ಯಮುಖಿ ಆರ್ಥಿಕ ದಿಕ್ಕನ್ನು ಪ್ರತಿಬಿಂಬಿಸುತ್ತಿವೆ.
ನಾರಿ ಶಕ್ತಿ ವಂದನ್ ಅಧಿನಿಯಮವು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಒದಗಿಸುವ ಮೂಲಕ ಮಹಿಳಾ ಪ್ರತಿನಿಧಿತ್ವದತ್ತ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಜೊತೆಗೆ ಮಹಿಳಾ ನಾಯಕತ್ವ ಬೆಳೆಸಲು ಪ್ರಮುಖ ಅಡಿಗಲ್ಲು ಹಾಕಿದೆ. ತನ್ಮೂಲಕ ಜಗತ್ತಿಗೆ ಮಹಿಳಾ ನಾಯಕತ್ವ ನೀಡಲು ಭಾರತ ಸಜ್ಜಾಗುತ್ತಿದೆ.
ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಭಾರತದ ಸಾಂಸ್ಕೃತಿಕ ಮತ್ತು ನಾಗರಿಕತೆಯ ಪರಂಪರೆಗೆ ಹೊಸ ಬಲ ದೊರೆತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ, ಶ್ರೀ ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಿಸುವುದು ಅನೇಕ ಯೋಜನೆಗಳು ಇದಕ್ಕೆ ಸಾಕ್ಷಿಯಾಗಿವೆ.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಭರವಸೆ ನೀಡುವ ಆಡಳಿತದಿಂದ ಫಲಿತಾಂಶಗಳನ್ನು ದಾಖಲಿಸುವ ಆಡಳಿತದತ್ತ ದೇಶವನ್ನು ಕೊಂಡೊಯ್ದಿದೆ. ಕಳೆದ 12 ವರ್ಷಗಳು ಕೇವಲ ಯೋಜನೆಗಳ ವರ್ಷಗಳಲ್ಲ; ವ್ಯವಸ್ಥೆಯನ್ನು ಸರಿಪಡಿಸಿದ ವರ್ಷಗಳಾಗಿವೆ. ನೇರ ಲಾಭ ವಿತರಣೆ, ಡಿಜಿಟಲ್ ಇಂಡಿಯಾ, ನಿರ್ಧಾರಾತ್ಮಕ ನಾಯಕತ್ವ ಮತ್ತು ಬಡವರ ಗೌರವಯುತ ಜೀವನ ಈ ಸರ್ಕಾರದ ಆಡಳಿತದ ಗುರುತುಗಳಾಗಿವೆ.
ಭಾರತ ಕೇವಲ ಉದಯೋನ್ಮುಖ ಮಾರುಕಟ್ಟೆಯಾಗಿ ಚರ್ಚೆಯಾಗುತ್ತಿದ್ದ ರಾಷ್ಟ್ರದಿಂದ ಉದಯೋನ್ಮುಖ ಜಾಗತಿಕ ಶಕ್ತಿಯಾಗಿ ಗೌರವಿಸಲ್ಪಡುವ ರಾಷ್ಟ್ರವಾಗಿ ಬೆಳೆದಿದೆ. ಮೋದಿ ಸರ್ಕಾರದ ಆಡಳಿತ ಮಾದರಿ – ಸುಧಾರಣೆ, ಸಾಧನೆ, ಪರಿವರ್ತನೆ ಮತ್ತು ವಿಸ್ತರಣೆಯ ಧ್ಯೇಯದೊಂದಿಗೆ ಮುನ್ನಡೆಯುತ್ತಿದೆ. ಮೋದಿ ಸರ್ಕಾರದ ಪ್ರಮುಖ ಸಾಧನೆ ಎಂದರೆ, ರಾಷ್ಟ್ರೀಯ ಅಭಿವೃದ್ಧಿಯ ಫಲಿತಾಂಶಗಳು ಇಂದು ಪ್ರತಿಯೊಬ್ಬ ನಾಗರಿಕನ ದೈನಂದಿನ ಜೀವನದಲ್ಲಿ ಪ್ರತಿಫಲಿಸುತ್ತಿವೆ.
