ಲಿಂಗಸುಗೂರು, ಮೇ 31: ಕಲ್ಯಾಣ ಕರ್ನಾಟಕ ಭಾಗಕ್ಕೆ ನ್ಯಾಯಸಮ್ಮತ ರಾಜಕೀಯ ಪ್ರಾತಿನಿಧ್ಯ ಒದಗಿಸುವ ಉದ್ದೇಶದಿಂದ ಹಿರಿಯ ರಾಜಕಾರಣಿ ಹಾಗೂ ಸಚಿವರಾದ Eshwar Khandre ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ರಾಜ್ಯ ಸರ್ಕಾರ ಹಾಗೂ ಪಕ್ಷದ ಉನ್ನತ ನಾಯಕತ್ವವನ್ನು ಆಗ್ರಹಿಸಿದೆ.ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ ರಾಜ್ಯಾಧ್ಯಕ್ಷ ಆನಂದ್ ಡಿ. ಹೆರೂರು, ಕಲ್ಯಾಣ ಕರ್ನಾಟಕ ಪ್ರದೇಶವು ಅಭಿವೃದ್ಧಿಯ ಹಲವು ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಗಮನ ಮತ್ತು ಪ್ರಾತಿನಿಧ್ಯವನ್ನು ನಿರೀಕ್ಷಿಸುತ್ತಿದೆ. ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ರಚನೆಯ ಸಂದರ್ಭದಲ್ಲಿ ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸಿ ಈಶ್ವರ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದು ಸೂಕ್ತ ನಿರ್ಧಾರವಾಗಲಿದೆ ಎಂದು ಹೇಳಿದರು.ಈಶ್ವರ ಖಂಡ್ರೆ ಅವರು ದೀರ್ಘಕಾಲದ ರಾಜಕೀಯ ಅನುಭವ ಹೊಂದಿದ್ದು, ವಿವಿಧ ಇಲಾಖೆಗಳ ಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಆಡಳಿತಾತ್ಮಕ ಅನುಭವ, ಜನಪರ ಯೋಜನೆಗಳು ಹಾಗೂ ಪಕ್ಷದ ಸಂಘಟನೆಯಲ್ಲಿ ನೀಡಿರುವ ಕೊಡುಗೆ ಗಮನಾರ್ಹವಾಗಿದೆ. ಅವರು ಉಪಮುಖ್ಯಮಂತ್ರಿಯಾಗಿ ನೇಮಕಗೊಂಡಲ್ಲಿ ಕಲ್ಯಾಣ ಕರ್ನಾಟಕ ಭಾಗದ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ನೀರಾವರಿ ಹಾಗೂ ಉದ್ಯೋಗ ಸೃಷ್ಟಿ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ದೊರೆಯುವ ನಿರೀಕ್ಷೆಯಿದೆ ಎಂದು ಅಭಿಪ್ರಾಯಪಟ್ಟರು.ಪಾರಂಪರಿಕ ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಗೆ ಈಶ್ವರ ಖಂಡ್ರೆ ಅವರು ವಿಶೇಷ ಆಸಕ್ತಿ ತೋರಿದ್ದು, ಜೀವವೈವಿಧ್ಯ ಮಂಡಳಿಯ ಮೂಲಕ ಪಾರಂಪರಿಕ ವೈದ್ಯರಿಗೆ ಗೌರವ ಹಾಗೂ ಪ್ರೋತ್ಸಾಹ ನೀಡುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಬೀದರ್‌ನಲ್ಲಿ ರಾಜ್ಯಮಟ್ಟದ ಪಾರಂಪರಿಕ ವೈದ್ಯರ ಸಮ್ಮೇಳನ ಆಯೋಜಿಸಿ, ಸಾಂಪ್ರದಾಯಿಕ ವೈದ್ಯ ಪದ್ಧತಿಯ ಮಹತ್ವವನ್ನು ಎತ್ತಿ ಹಿಡಿದಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.ಅದೇ ರೀತಿ, ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯ ಅಂಗವಾಗಿ ಪಾರಂಪರಿಕ ವೈದ್ಯರನ್ನು ಸನ್ಮಾನಿಸಿ ಗೌರವಿಸಿರುವುದು ಈ ಕ್ಷೇತ್ರದ ಬಗ್ಗೆ ಅವರ ಕಾಳಜಿಯನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಅವರಿಗೆ ಉನ್ನತ ಸ್ಥಾನಮಾನ ದೊರೆತರೆ ಪಾರಂಪರಿಕ ವೈದ್ಯ ಪದ್ಧತಿಯನ್ನು ಮುಖ್ಯವಾಹಿನಿಗೆ ತರಲು ಹಾಗೂ ಸರ್ಕಾರದ ಮಟ್ಟದಲ್ಲಿ ಅಗತ್ಯ ಮಾನ್ಯತೆ ಮತ್ತು ಸೌಲಭ್ಯಗಳನ್ನು ದೊರಕಿಸಲು ನೆರವಾಗಲಿದ್ದಾರೆ ಎಂಬ ವಿಶ್ವಾಸವನ್ನು ಪರಿಷತ್ ವ್ಯಕ್ತಪಡಿಸಿದೆ.ರಾಜ್ಯದ ಎಲ್ಲ ಭಾಗಗಳಿಗೆ ಸಮಾನ ಅವಕಾಶ ಮತ್ತು ಗೌರವ ದೊರೆಯಬೇಕು ಎಂಬ ತತ್ವದಡಿ ಕಲ್ಯಾಣ ಕರ್ನಾಟಕಕ್ಕೂ ಉನ್ನತ ರಾಜಕೀಯ ಸ್ಥಾನಮಾನ ಕಲ್ಪಿಸುವುದು ನ್ಯಾಯಸಮ್ಮತವಾಗಿದೆ. ಹೀಗಾಗಿ ಹೊಸ ಸಚಿವ ಸಂಪುಟ ರಚನೆಯ ವೇಳೆ ಈಶ್ವರ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದು ಪರಿಷತ್ ಆಗ್ರಹಿಸಿದೆ ಎಂದು ಆನಂದ್ ಡಿ. ಹೆರೂರು ತಿಳಿಸಿದರು.ಈ ಸಂದರ್ಭದಲ್ಲಿ ಕುಮಾರಸ್ವಾಮಿ, ಪರಮನಗೌಡ, ಸಹದೇವಪ್ಪ, ಬಸವರಾಜ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು
