ಇನ್ನು ತೀವ್ರ ಕುತೂಹಲ ಮತ್ತು ಹಲವು ದಿನಗಳ ಚರ್ಚೆಗೆ ಕಾರಣವಾಗಿದ್ದ ಸಚಿವ ಸಂಪುಟ ರಚನೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ
ಡಿಕೆಶಿ ಅವರ ಪಟ್ಟಾಭಿಷೇಕಕ್ಕೆ ದಿನಾಂಕ ಫಿಕ್ಸ್ ಆಗಿದ್ದು, ಅವರೊಂದಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ 14 ಪ್ರಮುಖ ನಾಯಕರ ಸಂಭಾವ್ಯ ಪಟ್ಟಿಯೊಂದು ಈಗ ಬಹಿರಂಗವಾಗಿದೆ.
ಜೂನ್ 3ರ ಬುಧವಾರದಂದು ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ. ರಾಜಭವನದಲ್ಲಿ ಅಂದು ಸಂಜೆ 5:15ಕ್ಕೆ ಸರಿಯಾಗಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ಈ ಭವ್ಯ ಕಾರ್ಯಕ್ರಮಕ್ಕೆ ರಾಜಭವನದ ಆವರಣ ಸಜ್ಜಾಗುತ್ತಿದ್ದು, ರಾಜಕೀಯ ಗಣ್ಯರು ಹಾಗೂ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ.
ವಿಶೇಷವೆಂದರೆ, ಡಿ.ಕೆ. ಶಿವಕುಮಾರ್ ಅವರೊಬ್ಬರೇ ಅಲ್ಲದೆ ಅವರ ಜೊತೆಗೆ ಒಟ್ಟು 14 ಮಂದಿ ಹಿರಿಯ ಹಾಗೂ ಪ್ರಮುಖ ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ 14 ಜನರ ಪಟ್ಟಿಯು ಈಗಾಗಲೇ ದೆಹಲಿ ಮಟ್ಟದಲ್ಲಿ ಫೈನಲ್ ಆಗಿದೆ ಎಂದೂ ಹೇಳಲಾಗುತ್ತಿದ್ದು, ಸದ್ಯ ಈ ಸಂಭಾವ್ಯ ಸಚಿವರ ಪಟ್ಟಿಯು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಹಿರಿಯ ನಾಯಕರಾದ ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ದಿನೇಶ್ ಗುಂಡೂರಾವ್ ಮತ್ತು ಕೃಷ್ಣ ಬೈರೇಗೌಡ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಇವರೊಂದಿಗೆ ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಜಮೀರ್ ಅಹ್ಮದ್ ಖಾನ್, ಚೆಲುವರಾಯಸ್ವಾಮಿ, ಬೈರತಿ ಸುರೇಶ್, ಯು.ಟಿ. ಖಾದರ್, ಎನ್.ಎ. ಹ್ಯಾರಿಸ್ ಹಾಗೂ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಚಿವ ಸ್ಥಾನ ಲಭಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇನ್ನು ಮಹಿಳಾ ಕೋಟಾದಡಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅಥವಾ ರೂಪಾ ಶಶಿಧರ್ ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ.
ಒಟ್ಟಾರೆ ಜೂನ್ 3ರ ಸಂಜೆ ಇಡೀ ರಾಜ್ಯದ ಕಣ್ಣು ರಾಜಭವನದತ್ತ ನೆಟ್ಟಿರಲಿದ್ದು, ಹೊಸ ಸಚಿವ ಸಂಪುಟದ ಉದಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರಾದೇಶಿಕ ಹಾಗೂ ಸಮುದಾಯಗಳ ಸಮತೋಲನವನ್ನು ಕಾಯ್ದುಕೊಂಡು ಸಿದ್ಧಪಡಿಸಲಾಗಿದೆ ಎನ್ನಲಾದ ಈ ಪಟ್ಟಿಯಲ್ಲಿ ಯಾರಿಗೆ ಯಾವ ಪ್ರಮುಖ ಖಾತೆಗಳು ಸಿಗಲಿವೆ ಎಂಬ ಕುತೂಹಲ ಮೂಡಿಸಿದೆ
