

ರಾಜ್ಯ ರಾಜಕಾರಣದಲ್ಲಿ ಹಲವು ತಿಂಗಳುಗಳ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಮಹತ್ವದ ಜಾತಿ ಗಣತಿ (Caste Census) ವರದಿ ಕೊನೆಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ನೇತೃತ್ವದ ತಂಡವು ಇಂದು ಅಧಿಕೃತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿಯನ್ನು ಹಸ್ತಾಂತರಿಸಿದೆ.
ಮೇ 28ರಂದು ಸರ್ಕಾರಿ ರಜೆ ಇರುವ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಇಂದು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ.
300 ಪುಟಗಳಲ್ಲಿ ಸುದೀರ್ಘ ವರದಿ
ವರದಿ ಸಲ್ಲಿಕೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್, ನಮ್ಮ ಆಯೋಗವು ರಾಜ್ಯಾದ್ಯಂತ ಸಂಪೂರ್ಣವಾಗಿ ಮತ್ತು ಅತ್ಯಂತ ಪ್ರಾಮಾಣಿಕವಾಗಿ ಸರ್ವೆ ನಡೆಸಿ ಸುಮಾರು 300 ಪುಟಗಳ ಸುದೀರ್ಘ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿದೆ. ಸದ್ಯಕ್ಕೆ ವರದಿಯಲ್ಲಿರುವ ಆಂತರಿಕ ನಿಖರ ಮಾಹಿತಿಗಳನ್ನು ಬಹಿರಂಗಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ, ಸರ್ಕಾರವು ಅತ್ಯಂತ ಆದಷ್ಟು ಬೇಗ ಈ ವರದಿಯನ್ನು ಅಧಿಕೃತವಾಗಿ ಸ್ವೀಕರಿಸಿ, ಜಾರಿ ಮಾಡಲಿದೆ ಎಂಬ ಭರವಸೆ ನಮಗಿದೆ, ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಈ ಮಹತ್ವದ ವರದಿಯನ್ನು ಸ್ವೀಕರಿಸುವ ಸಂದರ್ಭದಲ್ಲಿ ಸಚಿವರು ಹಾಗೂ ಶಾಸಕರ ದೊಡ್ಡ ದಂಡೇ ನೆರೆದಿತ್ತು. ಸಚಿವರಾದ ಶಿವರಾಜ್ ತಂಗಡಗಿ, ಹೆಚ್.ಸಿ. ಮಹದೇವಪ್ಪ, ಎಂ.ಸಿ. ಸುಧಾಕರ್, ಸತೀಶ್ ಜಾರಕಿಹೊಳಿ, ಮತ್ತು ಚಲುವರಾಯಸ್ವಾಮಿ ಅವರಲ್ಲದೆ, ಶಾಸಕರಾದ ಎನ್.ಹೆಚ್. ಕೋನರೆಡ್ಡಿ, ಪಿ.ಎಂ. ನರೇಂದ್ರಸ್ವಾಮಿ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಉಪಸ್ಥಿತರಿದ್ದು ಸಿಎಂಗೆ ಸಾಥ್ ನೀಡಿದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂದನ್ ಆರ್. ನಾಯಕ್ ಅವರ ನೇತೃತ್ವದಲ್ಲಿ ಆಯೋಗದ ಸಂಪೂರ್ಣ ತಂಡವೇ ವಿಧಾನಸೌಧಕ್ಕೆ ಆಗಮಿಸಿ ಮುಖ್ಯಮಂತ್ರಿಗಳಿಗೆ ವರದಿಯನ್ನು ಹಸ್ತಾಂತರಿಸಿತು. ಈ ಸಂದರ್ಭದಲ್ಲಿ ಆಯೋಗದ ಪ್ರಮುಖ ಸದಸ್ಯರುಗಳಾದ ಶಿವಣ್ಣಗೌಡ, ಚಂದ್ರಪ್ಪ ಯಾದವ, ಪ್ರತಿಭಾ ಕುಳಾಯಿ, ಡಾ. ಸಿ.ಎಂ. ಕುಂದಗೋಳ, ಡಾ. ಜಿ.ಎನ್. ಶ್ರೀಕಂಠಯ್ಯ, ಆಯೋಗದ ಸದಸ್ಯ ಕಾರ್ಯದರ್ಶಿ ದಯಾನಂದ್, ಆಡಳಿತಾತ್ಮಕ ಕಾರ್ಯದರ್ಶಿ ಊರ್ಮಿಳಾ ಬಿ. ಹಾಗೂ ಆಯೋಗದ ವಿಶೇಷ ಸಲಹೆಗಾರರಾದ ಡಿ.ಎನ್. ನಾಯಕ್ ಸೇರಿದಂತೆ ಇತರೆ ತಜ್ಞರು ಉಪಸ್ಥಿತರಿದ್ದರು.
ಇದೇ ವೇಳೆ ಸಮೀಕ್ಷೆಯ ನಿಖರತೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂದನ್ ಆರ್. ನಾಯಕ್ ಒಂದು ಪ್ರಮುಖ ಆತಂಕವನ್ನು ಬಿಚ್ಚಿಟ್ಟರು. ಆಯೋಗದ ವತಿಯಿಂದ ಮನೆ ಮನೆಗೆ ತೆರಳಿ ಸರ್ವೆ ನಡೆಸುವಾಗ ಕೆಲವು ಕಡೆ ಸಾರ್ವಜನಿಕರು ಭಾಗವಹಿಸಿಲ್ಲ. ಹಾಗೆ ಸಮೀಕ್ಷೆಯಲ್ಲಿ ಸ್ವಯಂಪ್ರೇರಿತರಾಗಿ ಭಾಗಿಯಾಗದವರ ಬಗ್ಗೆ ಆಯೋಗವಾಗಿ ನಾವು ಏನೂ ಮಾಡಲು ಸಾಧ್ಯವಿಲ್ಲ. ಇಂತಹ ಕಾರಣಗಳಿಂದಾಗಿ ಕೆಲವು ನಿರ್ದಿಷ್ಟ ಸಮುದಾಯಗಳ ಒಟ್ಟಾರೆ ಅಂಕಿ-ಸಂಖ್ಯೆಗಳು ಈ ಹಿಂದಿನ ಅಂದಾಜಿಗಿಂತ ಸ್ವಲ್ಪ ಕಡಿಮೆ ಆಗುವ ಸಾಧ್ಯತೆಗಳಿವೆ, ಎಂದು ಸುಳಿವು ನೀಡಿದರು.
ಏನಿದು ಜಾತಿ ಗಣತಿ?
ಸ್ವಾತಂತ್ರ್ಯದ ನಂತರ ದೇಶದಲ್ಲಿ ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ನಡೆಯುತ್ತದೆಯಾದರೂ, ಅದರಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಹೊರತುಪಡಿಸಿ ಉಳಿದ ಯಾವುದೇ ಜಾತಿಗಳ ನಿಖರ ಜನಸಂಖ್ಯೆಯನ್ನು ದಾಖಲಿಸುತ್ತಿರಲಿಲ್ಲ. ದೇಶದಲ್ಲಿ ಕೊನೆಯ ಬಾರಿಗೆ ಸಮಗ್ರ ಜಾತಿ ಆಧಾರಿತ ಗಣತಿ ನಡೆದಿದ್ದು ಬ್ರಿಟಿಷರ ಕಾಲದಲ್ಲಿ, ಅಂದರೆ 1931 ರಲ್ಲಿ. 2013 ರಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ, ರಾಜ್ಯದಲ್ಲಿರುವ ಪ್ರತಿಯೊಂದು ಸಮುದಾಯದ ನಿಖರ ಜನಸಂಖ್ಯೆ, ಅವರ ಆರ್ಥಿಕ ಪರಿಸ್ಥಿತಿ ಮತ್ತು ಶೈಕ್ಷಣಿಕ ಮಟ್ಟವನ್ನು ಅರಿಯಲು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ನಡೆಸಲು ತೀರ್ಮಾನಿಸಿದರು. 2015 ರಲ್ಲಿ ಹೆಚ್. ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಸುಮಾರು 160 ಕೋಟಿ ರೂಪಾಯಿ ವೆಚ್ಚದಲ್ಲಿ, ರಾಜ್ಯದ ಪ್ರತಿಯೊಂದು ಮನೆಗೂ ಭೇಟಿ ನೀಡಿ ಈ ಬೃಹತ್ ಸಮೀಕ್ಷೆಯನ್ನು ನಡೆಸಿ ದತ್ತಾಂಶ ಸಂಗ್ರಹಿಸಿತು.
ಜಾತಿ ಗಣತಿ ಯಾಕೆ ಬೇಕು?
ಜಾತಿ ಜಾತಿಗಳ ನಡುವಿನ ಅಸಮಾನತೆಯನ್ನು ಹೋಗಲಾಡಿಸಲು ಜಾತಿವಾರು ಸಮೀಕ್ಷೆ ಮಾಡಬೇಕು ಎಂಬ ವಾದ ಇದೆ. ಕ್ಯಾಟಗರಿ 1 ರಲ್ಲಿ 97 ಸಮುದಾಯಗಳಿವೆ. ಆದರೆ, ಮೀಸಲಾತಿಯ ಅನುಕೂಲ 4 ಸಮುದಾಯಗಳಿಗೆ ಮಾತ್ರ ತಲುಪಿದೆ. ಕ್ಯಾಟಗರಿ 2 ಎ ನಲ್ಲಿ 102 ಸಮುದಾಯಗಳಿವೆ. ಇದರಲ್ಲಿ 7 ಸಮುದಾಯಗಳಿಗೆ ಅನುಕೂಲ ಸಿಕ್ಕಿದೆ. ಎಸ್‌ಸಿ (SC) ನಲ್ಲಿ 101 ಸಮುದಾಯಗಳಿವೆ. ಈ ಪೈಕಿ 10 ಸಮುದಾಯಗಳಿಗೆ ಅನುಕೂಲ ಸಿಕ್ಕಿರಬಹುದು. ಉಳಿದವರಿಗೆ ಸಿಕ್ಕಿಲ್ಲ. ಎಸ್‌ಟಿ (ST) ನಲ್ಲಿ 51 ಸಮುದಾಯಗಳಿವೆ. ಆದರೆ, ಒಂದೆರಡು ಸಮುದಾಯಗಳಿಗೆ ಮಾತ್ರ ಅನುಕೂಲ ಸಿಗುತ್ತಿದೆ. ಇದನ್ನು ಸರಿಪಡಿಸಲು ಜಾತಿವಾರು ಸಮೀಕ್ಷೆಯ ಅಗತ್ಯವಿದೆ ಎಂದು ಹೇಳಲಾಗಿತ್ತು.
ಆರಂಭದಿಂದಲೂ ಜಾತಿ ಗಣತಿಗೆ ವಿರೋಧ
ಕಾಂತರಾಜು ಆಯೋಗದ ಸಮೀಕ್ಷೆ ಮುಗಿದ ದಿನದಿಂದಲೂ ಅದಕ್ಕೆ ರಾಜ್ಯದ ಪ್ರಬಲ ಸಮುದಾಯಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಲೇ ಬಂದಿದೆ. ಕರ್ನಾಟಕದ ರಾಜಕಾರಣ ಮತ್ತು ಅಧಿಕಾರದ ಚುಕ್ಕಾಣಿ ದಶಕಗಳಿಂದಲೂ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಸುತ್ತಲೇ ತಿರುಗುತ್ತಿದೆ. ಈ ಎರಡೂ ಸಮುದಾಯಗಳು ರಾಜ್ಯದಲ್ಲಿ ಅತಿ ದೊಡ್ಡ ಜನಸಂಖ್ಯೆ ಹೊಂದಿವೆ ಎಂಬ ನಂಬಿಕೆ ಇದೆ. ಆದರೆ, ಕಾಂತರಾಜು ವರದಿಯ ದತ್ತಾಂಶಗಳು ಸೋರಿಕೆಯಾದಾಗ (Leak), ಈ ಪ್ರಬಲ ಸಮುದಾಯಗಳ ಜನಸಂಖ್ಯೆ ಅಂದುಕೊಂಡಿದ್ದಕ್ಕಿಂತ ಕಡಿಮೆ ಇದೆ ಮತ್ತು ಹಿಂದುಳಿದ ವರ್ಗಗಳು ಹಾಗೂ ದಲಿತರ ಜನಸಂಖ್ಯೆ ಹೆಚ್ಚಿದೆ ಎಂಬ ಮಾಹಿತಿ ಹೊರಬಿದ್ದಿತು. ಇದು ತಮ್ಮ ರಾಜಕೀಯ ಪ್ರಾಬಲ್ಯಕ್ಕೆ ಧಕ್ಕೆ ತರಬಹುದು ಎಂಬ ಆತಂಕ ಪ್ರಬಲ ಜಾತಿಗೆ ಎದುರಾಯಿತು.
ಅನೇಕ ಸಚಿವರು ಹಾಗೂ ಶಾಸಕರು ಈ ಸಮೀಕ್ಷೆಯು ವೈಜ್ಞಾನಿಕವಾಗಿ ನಡೆದಿಲ್ಲ, ಆಯೋಗದ ಸಿಬ್ಬಂದಿ ಎಲ್ಲರ ಮನೆಗೂ ಭೇಟಿ ನೀಡಿಲ್ಲ ಎಂದು ಆಕ್ಷೇಪಿಸಿದರು. ಪ್ರಬಲ ಸಮುದಾಯಗಳ ಒಕ್ಕೂಟಗಳು ಮತ್ತು ಮಠಾಧೀಶರು ಒಟ್ಟಾಗಿ ಈ ವರದಿಯನ್ನು ಯಾವುದೇ ಕಾರಣಕ್ಕೂ ಸರ್ಕಾರ ಸ್ವೀಕರಿಸಬಾರದು ಎಂದು ಬೀದಿಗಿಳಿದು ಹೋರಾಟ ಮಾಡಿದರು. ಇದರಿಂದಾಗಿ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಈ ವರದಿ ಸಲ್ಲಿಕೆಯಾಗಲೇ ಇಲ್ಲ.
ಮರು ಜಾತಿಗಣತಿಗೆ ಆದೇಶ ಕೊಟ್ಟಿದ್ದು ಯಾಕೆ?
ಕಳೆದ ವರ್ಷದ ಆರಂಭದಲ್ಲಿ ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು ಹಳೆಯ ಕಾಂತರಾಜು ವರದಿಯ ದತ್ತಾಂಶಗಳನ್ನೇ ಕ್ರೋಢೀಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆ ಮಾಡಿತ್ತು. ಆದರೆ, ಆ ವರದಿಗೂ ಪಕ್ಷದ ಒಳಗಡೆಯೇ ಭಾರಿ ಪ್ರತಿರೋಧ ವ್ಯಕ್ತವಾಯಿತು. ಸ್ವತಃ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಸೇರಿದಂತೆ ಒಕ್ಕಲಿಗ ಮತ್ತು ಲಿಂಗಾಯತ ಶಾಸಕರು ವರದಿ ಜಾರಿಗೆ ಸಹಿ ಹಾಕದಂತೆ ಸಿಎಂ ಮೇಲೆ ಒತ್ತಡ ಹೇರಿದರು. ಈ ಸಂದರ್ಭದಲ್ಲಿ ಮೂರು ಪ್ರಮುಖ ಕಾರಣಗಳಿಗಾಗಿ ಹೊಸದಾಗಿ ಮರು ಜಾತಿಗಣತಿ ನಡೆಸಲು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿತು.
2015 ರಲ್ಲಿ ಸಂಗ್ರಹಿಸಿದ ದತ್ತಾಂಶಗಳು ಹಳೆಯದಾಗಿದ್ದವು. ಕಾನೂನಿನ ಪ್ರಕಾರ ಹತ್ತು ವರ್ಷಗಳ ಹಿಂದಿನ ಹಳೆಯ ದತ್ತಾಂಶಗಳನ್ನು ಆಧರಿಸಿ ಮೀಸಲಾತಿ ನೀಡಿದರೆ ಅದು ನ್ಯಾಯಾಲಯದಲ್ಲಿ ತತ್‌ಕ್ಷಣವೇ ವಜಾಗೊಳ್ಳುವ ಅಪಾಯವಿತ್ತು. ರಾಹುಲ್ ಗಾಂಧಿ ಅವರು ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಎಂದು ಗಟ್ಟಿಯಾಗಿ ವಾದಿಸುತ್ತಿದ್ದಾರೆ. ಹೀಗಿರುವಾಗ ಕರ್ನಾಟಕದಲ್ಲಿ ದೋಷಪೂರಿತ ಅಥವಾ ವಿವಾದಾತ್ಮಕ ವರದಿಯನ್ನು ಜಾರಿಗೊಳಿಸಿ ವಿಪಕ್ಷಗಳಿಗೆ ಆಹಾರವಾಗುವುದರ ಬದಲಿಗೆ, ಲೋಪದೋಷಗಳಿಲ್ಲದ ಹೊಸ ಸಮೀಕ್ಷೆ ನಡೆಸುವುದು ಸೂಕ್ತ ಎಂದು ವರಿಷ್ಠರು ತೀರ್ಮಾನಿಸಿದರು.
ಪಕ್ಷದ ಒಳಗಿನ ಬಣ ರಾಜಕೀಯ ಮತ್ತು ಪ್ರಬಲ ಸಮುದಾಯಗಳ ಆಕ್ರೋಶವನ್ನು ತಣಿಸಲು ‘ಮರು ಸಮೀಕ್ಷೆಯೊಂದೇ ಸದ್ಯಕ್ಕಿದ್ದ ದಾರಿಯಾಗಿತ್ತು. ಹೈಕಮಾಂಡ್ ಸೂಚನೆಯ ಬೆನ್ನಲ್ಲೇ ರಚನೆಯಾದ ಮಧುಸೂದನ್ ನಾಯ್ಕ್ ನೇತೃತ್ವದ ಆಯೋಗವು ಈಗ 300 ಪುಟಗಳ ಹೊಸ ಮರು ಸಮೀಕ್ಷಾ ವರದಿಯನ್ನು ನೀಡಿದೆ. ಆದರೆ, ಈ ವರದಿ ಸಲ್ಲಿಕೆಯಾಗಿರುವ ಸಮಯ ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ಈ ವರದಿಯನ್ನು ಸಚಿವ ಸಂಪುಟದ ಮುಂದೆ ತಂದು ಜಾರಿಗೊಳಿಸುವ ನೆಪದಲ್ಲಿ ತಮ್ಮ ರಾಜೀನಾಮೆಯನ್ನು ಮುಂದೂಡಲು ತಂತ್ರ ಹೂಡುತ್ತಿದ್ದಾರೆ. ಹೀಗಾಗಿ, ಈ ಹೊಸ ಜಾತಿ ಗಣತಿ ವರದಿ ಕೇವಲ ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮಾತ್ರವಲ್ಲ, ಸಿದ್ದರಾಮಯ್ಯ ಅವರ ಕುರ್ಚಿ ರಕ್ಷಣೆಗೂ ಸದ್ಯಕ್ಕೆ ಅತಿ ದೊಡ್ಡ ಅಸ್ತ್ರವಾಗಿ ಮಾರ್ಪಟ್ಟಿದೆ.
