Sunday, May 3, 2026
Homeಜಿಲ್ಲಾ ಸುದ್ದಿಗಳುಜತ್ತ ರಸ್ತೆ ನಿಮ್ರಾ ಮಸೀದಿ ಬಳಿ ಮದ್ಯದ ಅಂಗಡಿ ಆರಂಭಕ್ಕೆ ಸಿದ್ಧತೆ: ಅಂಜುಮನ್ ಸಂಸ್ಥೆ ಹಾಗೂ...

ಜತ್ತ ರಸ್ತೆ ನಿಮ್ರಾ ಮಸೀದಿ ಬಳಿ ಮದ್ಯದ ಅಂಗಡಿ ಆರಂಭಕ್ಕೆ ಸಿದ್ಧತೆ: ಅಂಜುಮನ್ ಸಂಸ್ಥೆ ಹಾಗೂ ಸಾರ್ವಜನಿಕರಿಂದ ತೀವ್ರ ಆಕ್ರೋಶ

ಅಥಣಿ: ಪಟ್ಟಣದ ಜತ್ತ ರಸ್ತೆಯಲ್ಲಿರುವ ನಿಮ್ರಾ ಮಸೀದಿ ಹಾಗೂ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ನೂತನವಾಗಿ ವೈನ್ಸ್ ಮತ್ತು ಬಾರ್ ಆರಂಭಿಸಲು ಸಿದ್ಧತೆ ನಡೆಯುತ್ತಿದ್ದು, ಇದಕ್ಕೆ okಅಂಜುಮನ್ ಸಂಸ್ಥೆ ಹಾಗೂ ಮುಸ್ಲಿಂ ಸಮಾಜದ ಬಾಂಧವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ನೀಡಬಾರದೆಂದು ಆಗ್ರಹಿಸಿ ತಹಸೀಲ್ದಾರ್, ಅಬಕಾರಿ ಇಲಾಖೆ ಹಾಗೂ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು.

ಮಧ್ಯದ ಅಂಗಡಿ ಅಥವಾ ಎಂ.ಎಸ್.ಐ.ಎಲ್ ಸ್ಥಾಪನೆಗೆ ಅಬಕಾರಿ ನಿಯಮಗಳ ಪ್ರಕಾರ ವಸತಿ ಪ್ರದೇಶ, ಧಾರ್ಮಿಕ ಸ್ಥಳ, ಆಸ್ಪತ್ರೆ ಹಾಗೂ ಶಾಲೆಗಳಿಂದ ಕನಿಷ್ಠ ೧೦೦ ಮೀಟರ್ ದೂರವಿರಬೇಕು. ಅಲ್ಲದೆ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ರಾಜ್ಯ ಹೆದ್ದಾರಿಯಿಂದಲೂ ನಿಗದಿತ ದೂರ ಕಾಯ್ದುಕೊಳ್ಳುವುದು ಕಡ್ಡಾಯ. ಆದರೆ, ಈಗ ಉದ್ದೇಶಿತ ಮದ್ಯದ ಅಂಗಡಿಯು ನಿಮ್ರಾ ಮಸೀದಿಯ ತೀರ ಹತ್ತಿರದಲ್ಲಿದ್ದು, ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದೆ. ಇದರ ಸುತ್ತಮುತ್ತ ದಟ್ಟವಾದ ವಸತಿ ಪ್ರದೇಶಗಳಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಈ ಭಾಗದಲ್ಲಿ ಮದ್ಯದ ಅಂಗಡಿ ತೆರೆಯುವುದರಿಂದ ವಸತಿ ಪ್ರದೇಶದ ಮಹಿಳೆಯರು, ಮಕ್ಕಳು ಹಾಗೂ ಮಸೀದಿಗೆ ಬರುವ ಭಕ್ತಾದಿಗಳಿಗೆ ಸಂಚಾರ ಮಾಡಲು ಮತ್ತು ಶಾಂತಿಯುತವಾಗಿ ಬದುಕಲು ತೊಂದರೆಯಾಗುತ್ತದೆ. ಮದ್ಯಪಾನಿಗಳ ಹಾವಳಿಯಿಂದ ಸಾರ್ವಜನಿಕ ಶಾಂತಿಗೆ ಧಕ್ಕೆಯಾಗುವ ಸಾಧ್ಯತೆ ಇದೆ,” ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೂಡಲೇ ಪರವಾನಗಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ನಿಮ್ರಾ ಮಸೀದಿ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮಾಜದ ಬಾಂಧವರು ಸೇರಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು. ಬಳಿಕ ತಹಸೀಲ್ದಾರ್, ಅಬಕಾರಿ ಅಧಿಕಾರಿಗಳು ಹಾಗೂ ಪೊಲೀಸ್ ನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಮುಸ್ಲಿಮ ಧರ್ಮ ಗುರು ಮೌಲಾನಾ ಅಬ್ಬಾಸ್ ಅವರು ಪ್ರತಿಯೊಂದು ಧರ್ಮದಲ್ಲೂ ಆಯಾ ಧರ್ಮದ ಪವಿತ್ರ ಕೇಂದ್ರಗಳಿಗೆ ಅತ್ಯುನ್ನತ ಸ್ಥಾನವಿದೆ. ಮುಸ್ಲಿಮರಿಗೆ ಮಸೀದಿ, ಹಿಂದೂಗಳಿಗೆ ಮಂದಿರ ಸೇರಿದಂತೆ ಎಲ್ಲಾ ಧರ್ಮದವರಿಗೂ ಅವರದ್ದೇ ಆದ ಶ್ರದ್ಧಾ ಕೇಂದ್ರಗಳಿವೆ. ಇಂತಹ ಪವಿತ್ರ ಸ್ಥಳಗಳ ಆಸುಪಾಸಿನಲ್ಲಿ ಮದ್ಯದ ಅಂಗಡಿ ಅಥವಾ ಬಾರ್‌ಗಳು ಇರುವುದನ್ನು ಯಾವುದೇ ಧರ್ಮದ ಜನರು ಇಷ್ಟಪಡುವುದಿಲ್ಲ. ಇದು ಸಮಾಜದ ಶಾಂತಿ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ವಿಷಯವಾಗಿದೆ.
ನಮ್ಮ ತಾಲೂಕು ಇದುವರೆಗೂ ಭಾವೈಕ್ಯತೆ ಮತ್ತು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ವಿವಿಧ ಧರ್ಮದ ಜನರು ಪರಸ್ಪರ ಪ್ರೀತಿ ಮತ್ತು ಒಗ್ಗಟ್ಟಿನಿಂದ ಬದುಕುತ್ತಿದ್ದೇವೆ. ಈ ಸೌಹಾರ್ದತೆಯು ಮುಂದೆಯೂ ಹೀಗೆಯೇ ಮುಂದುವರಿಯಬೇಕೆಂದು ನಾವು ಆಶಿಸುತ್ತೇವೆ.
ಆದ್ದರಿಂದ, ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಈ ಪ್ರದೇಶದ ಪವಿತ್ರತೆಯನ್ನು ಕಾಪಾಡುವ ಸಲುವಾಗಿ, ಮಸೀದಿಯ ಸಮೀಪ ಯಾವುದೇ ಕಾರಣಕ್ಕೂ ಮದ್ಯ ಮಾರಾಟದ ಪರವಾನಗಿಯನ್ನು (Licence) ನೀಡಬಾರದೆಂದು ನಾವು ತಮ್ಮಲ್ಲಿ ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇವೆ. ಜನಸಾಮಾನ್ಯರ ಭಾವನೆಗಳನ್ನು ಗೌರವಿಸಿ ತಾವು ಸೂಕ್ತ ಕ್ರಮ ಕೈಗೊಳ್ಳುತ್ತೀರೆಂದು ನಂಬಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೌಲಾನಾ ಜುಬೇರ್,ಮೌಲಾನಾ ಇಸಾಕ್,ಅಂಜುಮನ್ ಇಸ್ಲಾಂ ಕಮಿಟಿ ತಾಲೂಕ ಅಧ್ಯಕ್ಷ ಸಯ್ಯದ ಅಮೀನ ಗದ್ಯಾಳ, ಜುಬೇರ್ ನಾಲ್ಬಂದ್,ಯುನೂಸ್ ಮುಲ್ಲಾ, ಅಸ್ಲಂ ನಾಲಬಂದ, ಬುಡ್ಡು ನಾಲಬಂದ,ರಿಯಾಜ್ ಸನದಿ, ಅಬ್ದುಲ ಅಜೀಜ್ ಮುಲ್ಲಾ, ಅಬಿದ್ ಮಾಸ್ಟರ್,, ಸಯ್ಯದ ಗಡ್ಡೆಕರ, ರಿಯಾಜ ಸನದಿ,ಅಬೂಬಕರ್ ಕೊಕಟನೂರ , ಸಲ್ಮಾನ್ ಮೌಲ್ವಿ,ಬಾಬು ಖೇಮಲಾಪುರ, ಮಂಜು ಹೋಳಿಕಟ್ಟಿ, ಮುಸ್ತಾಕ್ ಮುಲ್ಲಾ, ಐ ಜಿ ಬಿರಾದರ್, ಅಜಹರ್ ಮುಲ್ಲಾ,ಶಾಮಶುದ್ದಿನ್ ಡಾಂಗೆ, ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಹಾಗೂ ಮುಖಂಡರು ಭಾಗವಹಿಸಿದ್ದರು.

ವರದಿ: ಯಾಸಿನ ಝಾರೆ, ಅಥಣಿ

ಹೆಚ್ಚಿನ ಸುದ್ದಿ