Monday, May 4, 2026
Homeಟಾಪ್ ನ್ಯೂಸ್ಬಂಡೀಪುರ ನಿರ್ಬಂಧಿತ ವಲಯದಲ್ಲಿ ಇನ್‌ಸ್ಪೆಕ್ಟರ್ ಬಿಂದಾಸ್ ಸವಾರಿ: ನಿಯಮ ಗಾಳಿಗೆ ತೂರಿದ ಪೊಲೀಸ್ ಅಧಿಕಾರಿ ವಿರುದ್ಧ...

ಬಂಡೀಪುರ ನಿರ್ಬಂಧಿತ ವಲಯದಲ್ಲಿ ಇನ್‌ಸ್ಪೆಕ್ಟರ್ ಬಿಂದಾಸ್ ಸವಾರಿ: ನಿಯಮ ಗಾಳಿಗೆ ತೂರಿದ ಪೊಲೀಸ್ ಅಧಿಕಾರಿ ವಿರುದ್ಧ ಆಕ್ರೋಶ

ಗುಂಡ್ಲುಪೇಟೆ: ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಪೊಲೀಸ್ ಅಧಿಕಾರಿಯೇ ನಿಯಮಗಳನ್ನು ಉಲ್ಲಂಘಿಸಿರುವ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಳಕಿಗೆ ಬಂದಿದೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಜಯಕುಮಾರ್ ಅವರು ನಿರ್ಬಂಧಿತ ಅರಣ್ಯ ಪ್ರದೇಶದಲ್ಲಿ ತಮ್ಮ ಕುಟುಂಬದೊಂದಿಗೆ ಖಾಸಗಿ ವಾಹನದಲ್ಲಿ ಸಫಾರಿ ನಡೆಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಘಟನೆಯ ವಿವರ:
ಇನ್‌ಸ್ಪೆಕ್ಟರ್ ಜಯಕುಮಾರ್ ಅವರು ಕರ್ತವ್ಯದ ಸಮಯದಲ್ಲಿ ಧರಿಸುವ ಯೂನಿಫಾರ್ಮ್‌ನಲ್ಲಿಯೇ ತಮ್ಮ ಕುಟುಂಬದ ಸದಸ್ಯರೊಂದಿಗೆ ಬಂಡೀಪುರದ ಅತಿ ಸೂಕ್ಷ್ಮ ಹಾಗೂ ಸಾರ್ವಜನಿಕ ಪ್ರವೇಶಕ್ಕೆ ನಿಷೇಧವಿರುವ ಅರಣ್ಯ ಪ್ರದೇಶದೊಳಗೆ ಸಂಚರಿಸಿದ್ದಾರೆ. ಅಷ್ಟೇ ಅಲ್ಲದೆ, ವನ್ಯಜೀವಿಗಳ ಓಡಾಟ ಇರುವ ಜಾಗದಲ್ಲಿ ಜೀಪ್‌ನಿಂದ ಕೆಳಗಿಳಿದು ಫೋಟೋಗಳಿಗೆ ಫೋಸ್ ನೀಡಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜಕೀಯ ಪ್ರಭಾವದ ಆರೋಪ:
ಸಾಮಾನ್ಯ ನಾಗರಿಕರು ಅರಣ್ಯ ಪ್ರದೇಶದಲ್ಲಿ ಸ್ವಲ್ಪ ನಿಯಮ ಉಲ್ಲಂಘಿಸಿದರೂ ತಕ್ಷಣವೇ ದಂಡ ಅಥವಾ ಎಫ್‌ಐಆರ್ (FIR) ದಾಖಲಿಸುವ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ, ಇಲ್ಲಿ ಮಾತ್ರ ಮೌನಕ್ಕೆ ಶರಣಾಗಿದೆ ಎಂಬ ಟೀಕೆ ಕೇಳಿಬಂದಿದೆ. ಇನ್‌ಸ್ಪೆಕ್ಟರ್ ಮೇಲೆ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವುದಕ್ಕೆ ಪ್ರಭಾವಿ ರಾಜಕಾರಣಿಯೊಬ್ಬರ ಬೆಂಬಲವೇ ಕಾರಣ ಎಂದು ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಗಂಭೀರವಾಗಿ ಆರೋಪಿಸಿದ್ದಾರೆ.

ಸಾರ್ವಜನಿಕರ ಪ್ರಶ್ನೆ:
ಇತ್ತೀಚೆಗಷ್ಟೇ ಬಂಡೀಪುರದಲ್ಲಿ ಆನೆಗಳ ಜೊತೆ ಫೋಟೋ ತೆಗೆಸಿಕೊಂಡ ಹಾಗೂ ನಿಯಮ ಉಲ್ಲಂಘಿಸಿದ ಪ್ರವಾಸಿಗರಿಗೆ ಭಾರಿ ದಂಡ ವಿಧಿಸಲಾಗಿತ್ತು. ಆದರೆ, ಅಧಿಕಾರ ದುರ್ಬಳಕೆ ಮಾಡಿಕೊಂಡು ನಿಷೇಧಿತ ವಲಯ ಪ್ರವೇಶಿಸಿದ ಅಧಿಕಾರಿಗೆ ಯಾಕೆ ಶಿಕ್ಷೆಯಿಲ್ಲ? ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಗೃಹ ಸಚಿವರ ಗಮನಕ್ಕೆ ಈ ವಿಚಾರ ಬಂದಿದ್ದರೂ ಸಹ ಇಲ್ಲಿಯವರೆಗೆ ಯಾವುದೇ ಕಟ್ಟುನಿಟ್ಟಿನ ಕ್ರಮದ ಮುನ್ಸೂಚನೆ ಸಿಕ್ಕಿಲ್ಲದಿರುವುದು ಜನಸಾಮಾನ್ಯರ ಅಸಮಾಧಾನಕ್ಕೆ ಕಾರಣವಾಗಿದೆ.

ನಿಯಮಗಳು ಕೇವಲ ಜನಸಾಮಾನ್ಯರಿಗಾ ಅಥವಾ ಕಾನೂನು ಪಾಲಿಸಬೇಕಾದ ಅಧಿಕಾರಿಗಳಿಗೂ ಅನ್ವಯಿಸುತ್ತವೆಯೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ. ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಈ ಕೂಡಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ

ಹೆಚ್ಚಿನ ಸುದ್ದಿ