ಛತ್ರಪತಿ ಸಂಭಾಜಿ ನಗರ:
ಕನಸುಗಳನ್ನು ನನಸು ಮಾಡಿಕೊಳ್ಳಲು ದುಬಾರಿ ಸೌಲಭ್ಯಗಳಿಗಿಂತ ಗಟ್ಟಿಯಾದ ಮನಸ್ಸು ಮುಖ್ಯ ಎಂಬುದನ್ನು ಅಕೋಲಾ ಜಿಲ್ಲೆಯ ಯುವಕ ನಿತೀಶ್ ಚಾವ್ರೆ ಸಾಬೀತುಪಡಿಸಿದ್ದಾರೆ. ಇಲ್ಲಿನ ಎಸ್ಆರ್ಪಿಎಫ್ ಮೈದಾನದಲ್ಲಿ ನಡೆದ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ, ಬ್ರಾಂಡೆಡ್ ಶೂಗಳಿಲ್ಲದಿದ್ದರೂ ಕೇವಲ ಹಳೆಯ ಚಪ್ಪಲಿ ಧರಿಸಿ 5 ಕಿಲೋಮೀಟರ್ ದೂರವನ್ನು ಯಶಸ್ವಿಯಾಗಿ ಓಡಿ ಮುಗಿಸಿ ಎಲ್ಲರ ಹುಬ್ಬೇರಿಸಿದ್ದಾನೆ.
ಮನ ಕರಗಿಸಿದ ಯುವಕನ ಮಾತು:
ನೇಮಕಾತಿ ಪ್ರಕ್ರಿಯೆಯ ಉಸ್ತುವಾರಿ ವಹಿಸಿದ್ದ ಎಸ್ಪಿ ವಿಕ್ರಮ್ ಸಾಲಿ ಅವರು ಮೈದಾನದಲ್ಲಿ ಈ ಯುವಕನನ್ನು ಗಮನಿಸಿದರು. ಹಳೆಯ ಚಪ್ಪಲಿ ಧರಿಸಿ ವೇಗವಾಗಿ ಓಡುತ್ತಿದ್ದ ನಿತೀಶ್ನನ್ನು ಹತ್ತಿರ ಕರೆದು, “ಶೂ ಇಲ್ಲದೆ ಚಪ್ಪಲಿಯಲ್ಲಿ ಇಷ್ಟು ದೂರ ಓಡಲು ಹೇಗೆ ಸಾಧ್ಯವಾಯಿತು?” ಎಂದು ವಿಚಾರಿಸಿದರು. ಅದಕ್ಕೆ ಆ ಯುವಕ, “ಸರ್, ಶೂ ಖರೀದಿಸಲು ನನ್ನ ಬಳಿ ಹಣವಿರಲಿಲ್ಲ. ಆದರೆ ಪೊಲೀಸ್ ಆಗುವ ಗುರಿ ನನಗಿದೆ, ಹಾಗಾಗಿ ಈ ತೊಂದರೆ ದೊಡ್ಡದಾಗಿ ಕಾಣಲಿಲ್ಲ” ಎಂದು ಭಾವುಕನಾಗಿ ಉತ್ತರಿಸಿದನು.
ಮೈದಾನದಲ್ಲೇ ಶೂ ಉಡುಗೊರೆ:
ಯುವಕನ ಕಡು ಬಡತನದ ನಡುವೆಯೂ ಇದ್ದ ಅದಮ್ಯ ಛಲವನ್ನು ಕಂಡು ಮನಸೋತ ಎಸ್ಪಿ ವಿಕ್ರಮ್ ಸಾಲಿ ಅವರು ತಕ್ಷಣವೇ ತಮ್ಮ ಸಿಬ್ಬಂದಿಯ ಮೂಲಕ ಮೈದಾನಕ್ಕೆ ಹೊಸ ಶೂಗಳನ್ನು ತರಿಸಿದರು. ಸ್ವತಃ ಎಸ್ಪಿ ಅವರೇ ಆ ಯುವಕನಿಗೆ ಹೊಸ ರನ್ನಿಂಗ್ ಶೂಗಳನ್ನು ಉಡುಗೊರೆಯಾಗಿ ನೀಡಿ, ಆತನ ಮುಂದಿನ ಸಾಧನೆಗೆ ಬೆನ್ನುತಟ್ಟಿದರು. ಇಷ್ಟೇ ಅಲ್ಲದೆ, ಅಂದು ಮೈದಾನದಲ್ಲಿದ್ದ ಇನ್ನುಳಿದ ಅರ್ಹ ಬಡ ಯುವಕರಿಗೂ ಸುಮಾರು 15 ರಿಂದ 20 ಜೋಡಿ ಶೂಗಳನ್ನು ವಿತರಿಸುವ ಮೂಲಕ ಎಸ್ಪಿ ಅವರು ದೊಡ್ಡ ಮಟ್ಟದ ಮಾನವೀಯತೆ ಮೆರೆದಿದ್ದಾರೆ.
ಅಧಿಕಾರಿಯ ಈ ಔದಾರ್ಯ ಮತ್ತು ಯುವಕನ ಆತ್ಮವಿಶ್ವಾಸದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
