Saturday, April 18, 2026
Homeಜಿಲ್ಲಾ ಸುದ್ದಿಗಳುಹತ್ತಿಕುಣಿ ನಾಲಾ ಆಧುನೀಕರಣಕ್ಕೆ ₹72 ಕೋಟಿ ಮಂಜೂರು ; ಶಾಸಕ ಶರಣಗೌಡ ಕಂದಕೂರ ಬೆನ್ನತ್ತಿದ ಕೆಲಸಕ್ಕೆ...

ಹತ್ತಿಕುಣಿ ನಾಲಾ ಆಧುನೀಕರಣಕ್ಕೆ ₹72 ಕೋಟಿ ಮಂಜೂರು ; ಶಾಸಕ ಶರಣಗೌಡ ಕಂದಕೂರ ಬೆನ್ನತ್ತಿದ ಕೆಲಸಕ್ಕೆ ಸಿಕ್ಕಿತು ಜಯ

ಗುರುಮಠಕಲ್ : ಕ್ಷೇತ್ರದ ರೈತರ ದಶಕಗಳ ಕಾಲದ ಕನಸಾಗಿದ್ದ ಹತ್ತಿಕುಣಿ ಕಾಡಾ ನಾಲಾ ಆಧುನೀಕರಣ ಯೋಜನೆಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ಶಾಸಕ ಶರಣಗೌಡ ಕಂದಕೂರ ಅವರ ಸತತ ಪ್ರಯತ್ನದ ಫಲವಾಗಿ ರಾಜ್ಯ ಸಚಿವ ಸಂಪುಟವು 72 ಕೋಟಿ ರೂಪಾಯಿಗಳ ಅನುದಾನಕ್ಕೆ ಅಧಿಕೃತ ಅನುಮೋದನೆ ನೀಡಿದೆ.
ಕಳೆದ ಮೂರು ತಿಂಗಳಿನಿಂದ ಶಾಸಕ ಶರಣಗೌಡ ಕಂದಕೂರ ಅವರು ಈ ವಿಷಯದ ಬಗ್ಗೆ ಸರ್ಕಾರವನ್ನು ಸತತವಾಗಿ ಬೆನ್ನಟ್ಟಿದ್ದರು. ಸದನದಲ್ಲಿ ಗಮನ ಸೆಳೆಯುವ ಮೂಲಕ ಹಾಗೂ ಉಪಮುಖ್ಯಮಂತ್ರಿಗಳು ಮತ್ತು ನೀರಾವರಿ ಸಚಿವರ ಮೇಲೆ ಒತ್ತಡ ಹೇರುವ ಮೂಲಕ ಯೋಜನೆಯ ತುರ್ತು ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದರು. ಇದರ ಫಲವಾಗಿ ರಾಜ್ಯ ಸಚಿವ ಸಂಪುಟವು ಈಗ ಅಧಿಕೃತವಾಗಿ 72 ಕೋಟಿ ರೂಪಾಯಿಗಳ ಅನುಮೋದನೆ ನೀಡಿದೆ. ಈ ಬೃಹತ್ ಮೊತ್ತದ ಅನುದಾನ ಕ್ಷೇತ್ರಕ್ಕೆ ಮಂಜೂರಾಗಿದ್ದು, ರೈತಾಪಿ ವರ್ಗದಲ್ಲಿ ಹರ್ಷ ಮೂಡಿಸಿದೆ.
ಈ ಯೋಜನೆಯಿಂದ ಹತ್ತಿಕುಣಿ, ಕಟಗಿ ಶಹಪುರ, ಹೊನಗೇರಿ, ಯಡ್ಡಳ್ಳಿ, ಬಂದಳ್ಳಿ ಮತ್ತು ದಸರಾಬಾದ್ ಗ್ರಾಮಗಳ ವ್ಯಾಪ್ತಿಯ ಸುಮಾರು 5,400 ಎಕರೆ ಕೃಷಿ ಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯ ಸಿಗಲಿದೆ. ಕೇಂದ್ರ ಸಚಿವ ವಿ. ಸೋಮಣ್ಣ ಅವರು ಯಾದಗಿರಿ ಜಿಲ್ಲೆಯ ಮೇಲೆ ವಿಶೇಷ ಕಾಳಜಿ ವಹಿಸಿ, ಅನುದಾನ ಬಿಡುಗಡೆಗೆ ನೀಡಿದ ಭರವಸೆ ಮತ್ತು ಸಹಕಾರ ಈ ಯೋಜನೆಗೆ ದೊಡ್ಡ ಶಕ್ತಿಯಾಗಿ ಪರಿಣಮಿಸಿದೆ.
ಯೋಜನೆಯ ಯಶಸ್ಸಿನಲ್ಲಿ ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ಅವರ ಸಹಕಾರ ಮತ್ತು ರೈತಪರ ನಿಲುವು ಶ್ಲಾಘನೀಯವಾಗಿದೆ. ಶಾಸಕ ಶರಣಗೌಡ ಕಂದಕೂರ ಅವರು ಈ ಯೋಜನೆಯ ತುರ್ತು ಅಗತ್ಯದ ಬಗ್ಗೆ ಸದನದಲ್ಲಿ ಮತ್ತು ವೈಯಕ್ತಿಕವಾಗಿ ಮನವಿ ಮಾಡಿದಾಗ, ಡಿ.ಕೆ. ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ನೀರಾವರಿ ಇಲಾಖೆಯ ಜವಾಬ್ದಾರಿ ಹೊತ್ತಿರುವ ಅವರು, ಯೋಜನೆಯ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ ಸಚಿವ ಸಂಪುಟದ ಮುಂದೆ ಪ್ರಸ್ತಾಪಿಸಿ 72 ಕೋಟಿಗಳ ಬೃಹತ್ ಅನುದಾನಕ್ಕೆ ಅನುಮೋದನೆ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯ ಹಾಗೂ ಶಾಸಕರ ಇಚ್ಛಾಶಕ್ತಿಯಿಂದಾಗಿ ಈ ಬೃಹತ್ ಮೊತ್ತದ ಅನುದಾನ ಕ್ಷೇತ್ರಕ್ಕೆ ಹರಿದುಬಂದಿದೆ. ಅಭಿವೃದ್ಧಿಯ ಈ ಮಹಾಕಾರ್ಯಕ್ಕಾಗಿ ಕ್ಷೇತ್ರದ ಜನತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಾಗೂ ಶ್ರಮಿಸಿದ ಶಾಸಕರಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಯೋಜನೆಯು ಈ ಭಾಗದ ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಲಿದ್ದು, ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಕಾರಿಯಾಗಲಿದೆ.

ನಮ್ಮ ಕ್ಷೇತ್ರದ ರೈತರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಲು ಬೆನ್ನೆಲುಬಾಗಿ ನಿಂತವರು ಕೇಂದ್ರ ಸಚಿವರಾದ ವಿ. ಸೋಮಣ್ಣ ಅವರು. ಅವರ ವಿಶೇಷ ಕಾಳಜಿ ಮತ್ತು ಮಾರ್ಗದರ್ಶನವಿಲ್ಲದೆ ಈ ಬೃಹತ್ ಅನುದಾನ ಸಾಧ್ಯವಾಗುತ್ತಿರಲಿಲ್ಲ. ನಮ್ಮ ಕ್ಷೇತ್ರದ ಜನತೆಯ ಮೇಲೆ ಅವರು ತೋರಿರುವ ಈ ಪ್ರೀತಿ ಮತ್ತು ಸಹಕಾರಕ್ಕೆ ನಾನು ಸದಾ ಋಣಿಯಾಗಿದ್ದೇನೆ. ರೈತರಿಗೆ ನ್ಯಾಯ ಒದಗಿಸಿಕೊಟ್ಟ ಅವರಿಗೆ ಕ್ಷೇತ್ರದ ಸಮಸ್ತ ಜನತೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.
— ಶರಣಗೌಡ ಕಂದಕೂರ, ಶಾಸಕರು.

ಹೆಚ್ಚಿನ ಸುದ್ದಿ