Wednesday, April 15, 2026
Homeಜಿಲ್ಲಾ ಸುದ್ದಿಗಳುಲಕ್ಕೋಳ್ಳಿ ಹಿತ್ತಲ ಕೆರೆಗೆ ತಡೆಗೋಡೆ ಇಲ್ಲ: ಮಕ್ಕಳ ಜೀವಕ್ಕೆ ಅಪಾಯ– ಪಂಚಾಯತ್ ನಿರ್ಲಕ್ಷ್ಯ ಗ್ರಾಮಸ್ಥರ ಆರೋಪ

ಲಕ್ಕೋಳ್ಳಿ ಹಿತ್ತಲ ಕೆರೆಗೆ ತಡೆಗೋಡೆ ಇಲ್ಲ: ಮಕ್ಕಳ ಜೀವಕ್ಕೆ ಅಪಾಯ– ಪಂಚಾಯತ್ ನಿರ್ಲಕ್ಷ್ಯ ಗ್ರಾಮಸ್ಥರ ಆರೋಪ

ಮುಂಡಗೋಡ : ಪಟ್ಟಣದಿಂದ 8 ಕಿ.ಮೀ ದೂರದಲ್ಲಿರುವ ಲಕ್ಕೋಳ್ಳಿ ಗ್ರಾಮ (ಚವಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿ)ದಲ್ಲಿ ಹಿತ್ತಲ ಕೆರೆಗೆ ತಡೆಗೋಡೆ ಇಲ್ಲದೆ ಇರುವುದರಿಂದ ಸಾರ್ವಜನಿಕರಿಗೆ, ವಿಶೇಷವಾಗಿ ಮಕ್ಕಳಿಗೆ ಗಂಭೀರ ಅಪಾಯ ಎದುರಾಗಿದ್ದು, ಯಾವುದೇ ಸಮಯದಲ್ಲಿ ದೊಡ್ಡ ದುರ್ಘಟನೆ ಸಂಭವಿಸುವ ಆತಂಕ ಉಂಟಾಗಿದೆ. ಗ್ರಾಮದಲ್ಲಿ ಸುಮಾರು 180 ಕುಟುಂಬಗಳು ಹಾಗೂ 815 ಜನಸಂಖ್ಯೆ ಇದ್ದು, ಬಡವರು, ಭೂ-ರಹಿತರು, ಬುಡಕಟ್ಟು ಸಮುದಾಯದ ಅರಣ್ಯ ಅವಲಂಬಿತ ಕೃಷಿ ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ.

ಈ ಕುರಿತು 2025 ರಿಂದ ಇಂದಿನವರೆಗೂ ಹಲವು ಬಾರಿ ಗ್ರಾಮ ಪಂಚಾಯತ್ ಪಿಡಿಓ ಹಾಗೂ ಮಾನ್ಯ ಶಾಸಕರಿಗೆ ಮನವಿ ಸಲ್ಲಿಸಿದರೂ ಕೂಡ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ತಡೆಗೋಡೆ ನಿರ್ಮಾಣವಾಗದೇ ಇರುವುದು ಗ್ರಾಮಸ್ಥರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಇದೇ ಸಂದರ್ಭದಲ್ಲಿ ದಿನಾಂಕ 14.04.2026ರಂದು ಬೆಳಿಗ್ಗೆ 10:49ಕ್ಕೆ, ಹಿತ್ತಲ ಕೆರೆಯ ನೀರಿನಲ್ಲಿ 9 ಜನ ಮಕ್ಕಳು ಆಟವಾಡುತ್ತಿದ್ದಾಗ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಉಂಟಾಯಿತು. ಆ ವೇಳೆ ಸ್ಥಳಕ್ಕೆ ಆಗಮಿಸಿದ ಮನ್ಸೂರಲಿ ಲತೀಪಾನವರ್ ಅವರು ಮಕ್ಕಳಿಗೆ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದಾರೆ. ನಂತರ ಗ್ರಾಮ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಮುಖಂಡರು ಪಂಚಾಯತ್ ಸದಸ್ಯರನ್ನು ಸ್ಥಳಕ್ಕೆ ಕರೆಸಿದ್ದು, ಪಿಡಿಓ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕ ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಈ ವಿಷಯವನ್ನು ತಹಶೀಲ್ದಾರ್ ಅವರಿಗೆ ದೂರವಾಣಿ ಮೂಲಕ ತಿಳಿಸಲಾಗಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ಗ್ರಾಮದ ಮಕ್ಕಳ ಸುರಕ್ಷತೆಗೆ ತಕ್ಷಣವೇ ಹಿತ್ತಲ ಕೆರೆಗೆ ತಡೆಗೋಡೆ ನಿರ್ಮಾಣ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ಅದರ ಸಂಪೂರ್ಣ ಹೊಣೆಗಾರಿಕೆ ಚವಡಳ್ಳಿ ಗ್ರಾಮ ಪಂಚಾಯತ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೇಲಿದೆ ಎಂದು ಗ್ರಾಮ ಅಭಿವೃದ್ಧಿ ಸಮಿತಿ ಮತ್ತು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ವರದಿಗಾರರು: ಲಕ್ಷ್ಮಣ ಮೊಳೆ

ಹೆಚ್ಚಿನ ಸುದ್ದಿ