ಎಲ್ಲಾ ವರ್ಗದ ಜನರಿಗೆ ದನಿ ಕೊಟ್ಟ ಧೀಮಂತ ನಾಯಕ ಡಾ.ಅಂಬೇಡ್ಕರ್
ಕೆಳಗೆ ಕುಳಿತಿರುವವನಿಗೆ, ಹೊರಗೆ, ಒಳಗೆ ಇರುವವನಿಗೂ ಒಂದಲ್ಲ ಒಂದು ದಿನ ಅವಕಾಶವಿದೆ, ಒಳಮೀಸಲಾತಿ ವಿಚಾರದಲ್ಲಿ ಬಿಜೆಪಿ ದಾರಿ ತಪ್ಪಿಸುತ್ತಿದೆ
ಬೆಂಗಳೂರು, ಏ.14:: “ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮುಂದಾಳತ್ವದಲ್ಲಿ ರಚನೆಯಾದ ಸಂವಿಧಾನವೇ ನಮ್ಮ ದೇಶದ ಭಗವದ್ಗೀತೆ, ಕುರಾನ್, ಬೈಬಲ್ ಎಂದು ನಾವು ಪೂಜಿಸಿ ಬದುಕುತ್ತಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದರು.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವೇ ನಮ್ಮ ಈ ಪ್ರಜಾಪ್ರಭುತ್ವ ದೇಶಕ್ಕೆ ನೀಡಿರುವ ಬೆಳಕು. ಅಂಬೇಡ್ಕರ್ ಅವರು ಅಸಮಾನತೆ ನಿವಾರಣೆಗೆ, ಭೇದ ಭಾವ ಹೋಗಲಾಡಿಸಲು ಶ್ರಮಪಟ್ಟವರು” ಎಂದರು.
“ಅಂಬೇಡ್ಕರ್ ಅವರು ತಮ್ಮದೇ ಪಕ್ಷವನ್ನು ಸ್ಥಾಪಿಸಿದರು. ಕಾಂಗ್ರೆಸ್ ಪಕ್ಷ ಭಿನ್ನ ರಾಜಕೀಯ ನಿಲುವುಗಳನ್ನು ಹೊಂದಿದ್ದರೂ ಅಂಬೇಡ್ಕರ್ ಅವರಿಗೆ ಮಹೋನ್ನತ ಜವಾಬ್ದಾರಿಗಳನ್ನು ನೀಡಿತ್ತು. ಈ ದೇಶವನ್ನು ಮುನ್ನಡೆಸಲು ವಿದ್ಯಾವಂತರು, ಬುದ್ಧಿವಂತರು ಇರಬೇಕು ಎಂದು ಜವಾಹರ್ ಲಾಲ್ ನೆಹರು ಅವರು ತಮ್ಮ ಸಂಪುಟದಲ್ಲಿ ಅಂಬೇಡ್ಕರ್ ಅವರಿಗೆ ಸ್ಥಾನ ನೀಡಿದರು” ಎಂದು ಹೇಳಿದರು.
“ಸಂಘಟಿತರಾಗಿ, ವಿದ್ಯಾವಂತರಾಗಿ, ಹೋರಾಟ ಮಾಡಿ ಎಂದು ಮಾತ್ರ ಅಂಬೇಡ್ಕರ್ ಅವರು ಹೇಳಲಿಲ್ಲ. ಪ್ರಜಾಪ್ರಭುತ್ವ ಎಂದರೆ ಸರ್ವ ಜನಾಂಗಗಳು ಒಗ್ಗೂಡಿ ಮುನ್ನಡೆಸುವ ಸಾಧನ ಎಂದಿದ್ದರು. ಎಲ್ಲಾ ಧರ್ಮ ಜಾತಿಗಳು ಸಂವಿಧಾನದ ಅಡಿಯಲ್ಲಿ ಬಂದು ಇಡೀ ದೇಶವೇ ಇದನ್ನು ಒಪ್ಪುವಂತೆ ಮಾಡಿದವರು” ಎಂದರು.
“ತಾನು ಅಭಿವೃದ್ಧಿಯಾಗುವುದರ ಜೊತೆಗೆ ಇತರರನ್ನು ಬೆಳೆಸಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಸಂವಿಧಾನದ ಕಾರಣಕ್ಕೆ ಅನೇಕ ಶೋಷಿತ ವರ್ಗಗಳು ಮೀಸಲಾತಿ ಪಡೆದಿವೆ. ಇದರಿಂದ ನಾಯಕರು ಬೆಳೆದಿದ್ದಾರೆ. ಅವರೂ ಸಹ ಮೀಸಲಾತಿ ಪಡೆದಿದ್ದಾರೆ. ಆದರೆ ಪಡೆದ ಸೌಲಭ್ಯವನ್ನು ಬಳಸಿಕೊಂಡು ತಮ್ಮ ಸಮುದಾಯದ ನೊಂದ ಎಷ್ಟು ಜನರನ್ನು ಮೇಲಕ್ಕೆ ಎತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ” ಎಂದರು.
“ನಮ್ಮನ್ನು ನಂಬಿದ ಸಮಾಜವನ್ನು ಎಷ್ಟು ಮುಂದುವರೆಯುವಂತೆ ಮಾಡಿದ್ದೇವೆ. ಎಷ್ಟು ಜನ ಸುಖಿಗಳಾಗಿದ್ದಾರೆ, ಶಾಂತಿಯಿಂದ ಬದುಕುತ್ತಿದ್ದಾರೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಅದಕ್ಕೆ ಇತಿಹಾಸವನ್ನು ಮರೆತವನು ಎಂದಿಗೂ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ” ಎಂದು ಹೇಳಿದರು.
ಎಲ್ಲಾ ವರ್ಗದ ಜನರಿಗೆ ದನಿ ಕೊಟ್ಟ ಧೀಮಂತ ನಾಯಕ
“ಮಹಾತ್ಮ ಗಾಂಧಿ ಅವರನ್ನು ಈ ದೇಶದ ಮಹಾತ್ಮ ಎಂದು ಕರೆಯುತ್ತೇವೆ. ಅನೇಕ ಕಡೆ ಇವರ ಪ್ರತಿಮೆಗಳನ್ನು ನೋಡಿದ್ದೇವೆ. ಜೊತೆಗೆ ದೇವರ ಪ್ರತಿಮೆಗಳನ್ನೂ ನೋಡಿದ್ದೇವೆ. ಅದೇ ರೀತಿ ಅಂಬೇಡ್ಕರ್ ಅವರನ್ನು ದೇವರ ರೂಪದಲ್ಲಿಟ್ಟು ಅನೇಕ ಕಡೆ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಅಂಬೇಡ್ಕರ್ ಅವರು ಎಡ, ಬಲ, ಲಂಬಾಣಿ, ಕೊರಮ, ಕೊರಚ ಸಮುದಾಯದವರ ಆಸ್ತಿಯಲ್ಲ. ಇವರು ಇಡೀ ದೇಶದ ಸರ್ವ ಜನಾಂಗದ ಆಸ್ತಿ. ಎಲ್ಲಾ ವರ್ಗದ ಜನರಿಗೆ ದನಿ ಕೊಟ್ಟ ಧೀಮಂತರು” ಎಂದರು.
“ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದ ಕಾರ್ಯಕ್ರವನ್ನು ಸೀಮಿತಗೊಳಿಸದೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎಂದು ಕರೆದು ಸರ್ವರನ್ನೂ ಒಳಗೊಳ್ಳಲಾಯಿತು. ನಮ್ಮಿಂದ ಎಷ್ಟು ಜನರ ಜೀವನ ಬದಲಾಗಿದೆ ಎನ್ನುವ ಆಶಯದೊಟ್ಟಿಗೆ ನಮ್ಮ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದೆ, ಅದೇ ರೀತಿ ನಡೆಯುತ್ತಿದೆ” ಎಂದರು.
ಕೆಳಗೆ ಕುಳಿತಿರುವವನಿಗೆ, ಹೊರಗೆ, ಒಳಗೆ ಇರುವವನಿಗೂ ಒಂದಲ್ಲ ಒಂದು ದಿನ ಅವಕಾಶವಿದೆ
“ವೇದಿಕೆಯಲ್ಲಿ ಕುಳಿತುಕೊಂಡವರೆಲ್ಲಾ ನಾಯಕರು ಎಂದು ಭಾವಿಸಬೇಡಿ. ವೇದಿಕೆ ಕೆಳಗೆ ಇರುವವರು ಇದ್ದರೆ ಮಾತ್ರ ವೇದಿಕೆ ಮೇಲಿರುವವರು ನಾಯಕರಾಗಲು ಸಾಧ್ಯ. ಜೊತೆಗೆ ನಾನು ನಾಯಕರು, ಕಾರ್ಯಕರ್ತರು ಎಂದು ವಿಭಾಗಿಸಿ ಯಾರನ್ನೂ ನೋಡುವುದಿಲ್ಲ. ನೀವು ಕಡಿಮೆ ಎಂದು ಯಾರೂ ಭಾವಿಸಬೇಡಿ. ಏನಾನುಮಂ ಮಾಡು ಕೈಗೆ ದೊರೆತುಜ್ಜುಗವ, ನಾನೇನು ಹುಲುಕಡ್ಡಿಯೆಂಬ ನುಡಿ ಬೇಡ. ಹೀನಮಾವುದುಮಿಲ್ಲ ಜಗದ ಗುಡಿಯೂಳಿಗದಿ ತಾಣ ನಿನಗಿಹುದಿಲ್ಲಿ ಮಂಕುತಿಮ್ಮ ಎಂದು ಡಿವಿಜಿ ಹೇಳಿದ್ದಾರೆ. ಎಂದರೆ ಹುಲ್ಲುಕಡ್ಡಿಗೂ ಮಹತ್ವವಿದೆ. ಇಲ್ಲಿ ಯಾರೂ ಮೇಲಲ್ಲ, ಕೀಳಲ್ಲ. ಕೆಳಗೆ ಕುಳಿತಿರುವವನಿಗೆ, ಹೊರಗೆ ಕಾಯುತ್ತಾ ಇರುವವನಿಗೂ, ಒಳಗೆ ಇರುವವನಿಗೂ ಒಂದಲ್ಲ ಒಂದು ದಿನ ಅವಕಾಶವಿದೆ. ಯಾವ ಕಾರ್ಯಕರ್ತರನ್ನೂ ಕೀಳಾಗಿ ಕಾಣುವುದಕ್ಕೆ ಆಸ್ಪದವಿಲ್ಲ. ಅದಕ್ಕೆ ಎಲ್ಲಾ ವರ್ಗದವರಿಗೂ ಮಾತನಾಡಲು ಅವಕಾಶ ನೀಡಲಾಯಿತು” ಎಂದರು.
ಒಳಮೀಸಲಾತಿ ವಿಚಾರದಲ್ಲಿ ಬಿಜೆಪಿ ದಾರಿ ತಪ್ಪಿಸುತ್ತಿದೆ
“ಒಳಮೀಸಲಾತಿ ವಿಚಾರದಲ್ಲಿ ಯಾವ ಬಿಜೆಪಿ ಸರ್ಕಾರವೂ ಮಾಡದ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಈ ವಿಚಾರವಾಗಿ ಬಿಜೆಪಿ ಬೇಕಂತಲೇ ದಾರಿ ತಪ್ಪಿಸುತ್ತಿದೆ. ಪಕ್ಷ ಅಧಿಕಾರಕ್ಕೆ ಬರುವ ಮುಂಚಿತವಾಗಿ ಘೋಷಣೆ ಮಾಡಿದಂತೆ 6-6-5 ಅನುಪಾತದ ಅಡಿ ಸೌಲಭ್ಯ ನೀಡಲಾಗಿದೆ. ಆದರೆ ನ್ಯಾಯಾಲಯ ಶೇ 15 ರ ಒಳಗೆ ನೀಡಿ ಎಂದು ಹೇಳಿದೆ. ಎಡ, ಬಲ ಸಮುದಾಯಗಳು ಸೇರಿದಂತೆ ಎಲ್ಲಾ ಶೋಷಿತ ವರ್ಗಗಳು ಈ ಹಸ್ತದ ಒಳಗೆ ಬರುತ್ತೀರಿ. ಈ ಹಸ್ತವೇ ರಕ್ಷಣೆ ನೀಡೋಕೆ ಸಾಧ್ಯ” ಎಂದರು.
“ಸದಾಶಿವ ಆಯೋಗಕ್ಕೆ ರೂಪ ಸಿಗದೇ ಇರಬಹುದು. ಮತ್ತೆ ನಾಗಮೋಹನ್ ದಾಸ್ ಆಯೋಗ ರಚಿಸಿ 200 ಕೋಟಿ ಖರ್ಚು ಮಾಡಿ. ಪ್ರತಿ ಮನೆಗೂ ಸಮೀಕ್ಷೆ ನಡೆಸಲಾಗಿದೆ. ಶೇ 1, ಅರ್ಧ ಪರ್ಸೆಂಟ್ ಗೆ ಜಗಳ ಅವಶ್ಯಕತೆಯಿಲ್ಲ. ಅಂಬೇಡ್ಕರ್ ಅವರು ನಿಮ್ಮ ನಿಮ್ಮಲ್ಲೇ ಜಗಳ ಮಾಡಿಕೊಂಡಿರಿ ಎಂದು ಹೇಳಿದ್ದಾರೆಯೇ? 10 ವರ್ಷಕ್ಕೆ ಮೀಸಲಾತಿಯನ್ನು ಸೀಮಿತಗೊಳಿಸದೇ ಮುಂದುವರೆಸಿಕೊಂಡೇ ಬರಲಾಗುತ್ತಿದೆ. ಇದರಿಂದ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ. ಈ ಹಿಂದೆ ಹೇಗಿತ್ತು ಈಗ ಹೇಗಿದೆ ಎಂಬುದನ್ನು ನಾನೂ ನೋಡುತ್ತಿದ್ದೇನೆ” ಎಂದರು.
“ಮೀಸಲಾತಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ಆತ್ಮಗೌರವದಿಂದ ನೀವು ಬಾಳಬೇಕು ಎಂಬುದು ಕಾಂಗ್ರೆಸ್ ಪಕ್ಷದ ಆಶಯ. ಚುನಾವಣೆ ನಂತರ ಇದರ ಬಗ್ಗೆ ಪಕ್ಷದ ಒಳಗೆ ತೀರ್ಮಾನ ಮಾಡಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಪರಮೇಶ್ವರ್ ಅವರ ನೇತೃತ್ವದಲ್ಲಿ ಚಿತ್ರದುರ್ಗ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯದಂತೆ ತೋರ್ಮಾನ ಮಾಡಲಾಗುವುದು. ಪಕ್ಷದ ಅಧ್ಯಕ್ಷನಾದ ನನಗೆ ಎಲ್ಲರೂ ಒಂದೇ” ಎಂದು ಹೇಳಿದರು.
“ಪರಿಶಿಷ್ಟ ಜಾತಿ ಪಂಗಡಗಳ ಅಭಿವೃದ್ದಿಗೆ 80 ಸಾವಿರ ಕೋಟಿಯನ್ನು ಕೇಂದ್ರ ಸರ್ಕಾರ ಈ ಹಿಂದೆ ನೀಡುತ್ತಾ ಇತ್ತು. ಆಗ ಬೆಳಗಾವಿ ಅಧಿವೇಶನದಲ್ಲಿ ಅಂದು ಸಚಿವರಾಗಿದ್ದ ಆಂಜನೇಯ ಅವರು ಎಸ್ ಇಎಸ್ ಪಿ, ಟಿಎಸ್ ಪಿ ಕಾಯ್ದೆಯ ಅಡಿ 29 ಸಾವಿರ ಕೋಟಿ ನೀಡಿದ್ದು ಕರ್ನಾಟಕ ಕಾಂಗ್ರೆಸ್ ಸರ್ಕಾರ. ಆದರೂ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಶೋಷಿತ ಜನಾಂಗಗಳ ಪರವಾಗಿ ಚಿಂತನೆ ಮಾಡುವ ಏಕೈಕ ಪಕ್ಷ ಕಾಂಗ್ರೆಸ್” ಎಂದರು.
“ಮಹಿಳೆಯರಿಗೆ ಶೇ 50 ರಷ್ಟು ಮೀಸಲಾತಿಯನ್ನು ನೀಡಿದ್ದು ಕಾಂಗ್ರೆಸ್ ಪಕ್ಷ. ಜಿಬಿಎನಲ್ಲಿ ಇದನ್ನು ಜಾರಿಮಾಡಲಾಗಿದೆ. ಸೋನಿಯಾ ಗಾಂಧಿ ಅವರು ಅಂದು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಕಾಯ್ದೆಯನ್ನು ಮಂಡಿಸಿದ್ದರು. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಿ ನಾಯಕರಾಗಿ ಹೊರಹೊಮ್ಮಿ” ಎಂದು ಹೇಳಿದರು.
