ಏ.11: ಭಾರತದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನಿಲ್ಲುವಲ್ಲಿ ಮಾಧ್ಯಮಗಳ ಪಾತ್ರ ಅನನ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ. ಬೀದರ್ ನಗರದ ಝೀರಾ ಕನ್ವೆನ್ಷನ್ ಹಾಲ್ ನಲ್ಲಿ ನಡೆಯುತ್ತಿರುವ 2 ದಿನಗಳ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾವೇ ಮೊದಲು ಎಂಬ ಧಾವಂತದಲ್ಲಿ ತಪ್ಪು ಮಾಹಿತಿಯ ಪ್ರಸಾರ ಆಗದಂತೆ ಮತ್ತು ವ್ಯಕ್ತಿಯ ಚಾರಿತ್ರ್ಯವಧೆ ಆಗದಂತೆ ಮಾಧ್ಯಮಗಳು ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು ಎಂದು ಹೇಳಿದರು.ಯಾವುದೇ ಮಾಧ್ಯಮಕ್ಕೆ ತನ್ನ ವಿಶ್ವಾಸಾರ್ಹತೆಯೇ ಜೀವಾಳ. ಎಂದ ಈಶ್ವರ ಖಂಡ್ರೆ, ಹಿರಿಯ ಪತ್ರಕರ್ತರಾದ ಮಾಜಿ ಸಚಿವ ಎಂ.ಎಸ್. ಗುರುಪಾದ ಸ್ವಾಮಿ ಅವರು, ಎಸ್.ವಿ.ಜಯಶೀಲರಾಯರು, ಅರ್ಜುನ್ ದೇವ್, ಬಿ.ವಿ. ಮಲ್ಲಿಕಾರ್ಜುನಯ್ಯ ಹಾಗೂ ಈಗ ಶಿವಾನಂದ ತಗಡೂರ್ ಪತ್ರಕರ್ತರ ಸಂಘವನ್ನು ಮುನ್ನಡೆಸಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇಂತಹ ಸಮ್ಮೇಳನಗಳ ಮೂಲಕ ಪತ್ರಕರ್ತರಲ್ಲಿ ಮೌಲ್ಯಗಳನ್ನು ಬಳೆಸಬೇಕು ಎಂದರು.ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ ಯೋಜನೆ ತಂದಿದ್ದಾರೆ. ಹಿರಿಯ ಪತ್ರಕರ್ತರಿಗೆ ನೀಡುತ್ತಿದ್ದ 3 ಸಾವಿರ ರೂ. ಪಿಂಚಣಿಯನ್ನು 15 ಸಾವಿರಕ್ಕೆ ಹೆಚ್ಚಿಸಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು. *ಎಚ್ಚರಿಕೆ ಅಗತ್ಯ:*ಇಂದು ನಾವು ಎ.ಐ. ತಂತ್ರಜ್ಞಾನ, ಮಿಷಿನ್ ಲರ್ನಿಂಗ್ ನಂತಹ ಕಾಲಘಟ್ಟದಲ್ಲಿದ್ದೇವೆ. ವಾಟ್ಸ್ ಅಪ್ ನಲ್ಲಿ ಬರುವ ಸುಳ್ಳು ಸುದ್ದಿಗಳೇ ಸತ್ಯವಾಗಬಾರದು ಈ ನಿಟ್ಟಿನಲ್ಲಿ ಅತ್ಯಂತ ವಿವೇಚನಾತ್ಮಕವಾಗಿ ಮಾಧ್ಯಮಗಳು ಕೆಲಸ ಮಾಡಬೇಕು. ಕೆ.ಯುಡ್ಲ್ಯುಜೆ ಒಂದು ವೃತ್ತಿ ಸಂಘಟನೆಯಾಗಿ, ಕಾರ್ಮಿಕ ಸಂಘಟನೆಯಾಗಿ ಕೆಲಸ ಮಾಡಿದೆ. ಪತ್ರಕರ್ತರು ವೃತ್ತಿಯ ಘನತೆ ಕಾಪಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಾದ ರಹೀಂ ಖಾನ್, ಡಾ. ಶರಣ ಪ್ರಕಾಶ್ ಪಾಟೀಲ್, ಸಂಸತ್ ಸದಸ್ಯ ಸಾಗರ್ ಈ ಖಂಡ್ರೆ, ಮಾಜಿ ಸಚಿವ ರಾಜಶೇಖರ ಪಾಟೀಲ್ ಹುಮನಾಬಾದ್, ಶಾಸಕರುಗಳಾದ ಶರಣು ಸಲಗಾರ್, ಭೀಮರಾವ್ ಪಾಟೀಲ್, ಚಂದ್ರಶೇಖರ ಪಾಟೀಲ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ್ ದೇವಪ್ಪ ಹಾರಕೋಡು ಶ್ರೀ ಚನ್ನವೀರ ಶಿವಾಚಾರ್ಯರು, ಭಾಲ್ಕಿ ಹಿರೆಮಠದ ಡಾ. ಬಸವಲಿಂಗ ಪಟ್ಟದ್ದೇವರು ಪಾಲ್ಗೊಂಡಿದ್ದರು.
