Friday, April 10, 2026
Homeಟಾಪ್ ನ್ಯೂಸ್ಬೈಲಹೊಂಗಲ ಶ್ರೀ ಬಸವೇಶ್ವರ ಆಶ್ರಯ ನಗರದ ನಿವಾಸಿಗಳಿಗೆ ಮನೆಗಳ ಹಕ್ಕು ಪತ್ರ ಹಾಗೂ ಕಂಪ್ಯೂಟರ್ ಉತಾರ...

ಬೈಲಹೊಂಗಲ ಶ್ರೀ ಬಸವೇಶ್ವರ ಆಶ್ರಯ ನಗರದ ನಿವಾಸಿಗಳಿಗೆ ಮನೆಗಳ ಹಕ್ಕು ಪತ್ರ ಹಾಗೂ ಕಂಪ್ಯೂಟರ್ ಉತಾರ ನೀಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬೈಲಹೊಂಗಲ: ಪಟ್ಟಣವು ನಗರಸಭೆಯಾಗಿ ಮೇಲ್ದರ್ಜೆಗೇರಿದ್ದರೂ, ಬಸವೇಶ್ವರ ಆಶ್ರಯ ನಗರದ ನಿವಾಸಿಗಳಿಗೆ ಕಳೆದ 27 ವರ್ಷಗಳಿಂದ ಮನೆ ಹಕ್ಕುಪತ್ರ ಹಾಗೂ ನಗರಸಭೆಯ ಕಂಪ್ಯೂಟರ್ ಉತಾರ ವಿತರಣೆ ವಿಳಂಬವಾಗುತ್ತಿರುವುದಾಗಿ ಆರೋಪಿಸಿ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ಪೌರಾಯುಕ್ತ ಭಾಗ್ಯಶ್ರೀ ಹುಗ್ಗಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರಾದ ಯಲ್ಲಪ್ಪ ತಿಮ್ಮಾಪೂರ ಮತ್ತು ಮಲ್ಲಿಕಾರ್ಜುನ ಬಾಜಿ ಅವರು, 1999-2000ನೇ ಸಾಲಿನಲ್ಲಿ ಆಶ್ರಯ ಯೋಜನೆಯಡಿ ವಸತಿ ರಹಿತರಿಗೆ ಮನೆಗಳನ್ನು ಹಂಚಿಕೆ ಮಾಡಲಾಗಿತ್ತು. ಕಾನೂನಿನ ಪ್ರಕಾರ 20 ವರ್ಷ ವಾಸಿಸಿದ ಬಳಿಕ ಹಕ್ಕುಪತ್ರ ನೀಡಬೇಕಾಗಿದ್ದರೂ, 27 ವರ್ಷ ಕಳೆದರೂ ನಗರಸಭೆ ಹಕ್ಕು ಪತ್ರ ವಿತರಣೆ ಮಾಡಿಲ್ಲ ಹಾಗೂ ಇದನ್ನು ಪಾಲಿಸಿಲ್ಲ ಎಂದು ದೂರಿದರು.

ಅಂದಿನ ಸಂದರ್ಭದಲ್ಲಿ ಮಣ್ಣಿನಿಂದ ನಿರ್ಮಿಸಲಾದ ಮನೆಗಳು ಬೀಳುತ್ತಿದ್ದು  ಆ ಮನೆಗಳನ್ನು ದುರಸ್ತಿ ಮಾಡಲು ಆಗುತ್ತಿಲ್ಲ ಕಾರಣ ನಮಗೆ  ಮನೆಗಳನ್ನು  ವಾಸಿಸುವರ ಹೆಸರಲ್ಲಿ ಇಲ್ಲದ ಕಾರಣ ದುರಸ್ತಿ ಕಾರ್ಯಗಳಿಗೆ ಸರ್ಕಾರದ ಸಹಾಯ ಅಥವಾ ಬ್ಯಾಂಕ್ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ನಿವಾಸಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿ ವಾಸಿಸುವ ಜನರ ಪೈಕಿ ಕೇವಲ 35 ಜನರಿಗೆ ಮಾತ್ರ ಹಕ್ಕು ಪತ್ರಗಳನ್ನು ನೀಡಿ ಇನ್ನುಳಿದ ನಿವಾಸಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ನಾಲ್ಕು ತಿಂಗಳ ಹಿಂದೆ ನಡೆದ ಸಾರ್ವಜನಿಕ ಸಭೆಯಲ್ಲಿ ಸಚಿವರ ಸಮ್ಮುಖದಲ್ಲಿ ಕೇವಲ 35 ಜನರಿಗೆ ಮಾತ್ರ ಹಕ್ಕುಪತ್ರ ವಿತರಿಸಿ, ಉಳಿದ ನಿವಾಸಿಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ನಿವಾಸಿಗಳಿಂದ ರೂ.2000 ಡಿಡಿ ಪಡೆದುಕೊಂಡಿದ್ದರೂ ಹಕ್ಕುಪತ್ರ ನೀಡದೇ ನಗರಸಭೆ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಪರಸ್ಪರ ಬೇಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿವೆ ಎಂದು ಹೇಳಿದರು.ನಗರಸಭೆಯ ದಾಖಲೆಗಳಲ್ಲಿ ಮಾಲೀಕರು ಎಂಬ  ಕಾಲಮ್‌ನಲ್ಲಿ ಇನ್ನೂ ಅಧಿಕಾರಿಗಳ ಹೆಸರೇ ಕಾಣಿಸುತ್ತಿದ್ದು, ನಿವಾಸಿಗಳ ಹೆಸರು ಅನುಭೋಗುದಾರರು ಎಂದು ಮಾತ್ರ ಇದೆ ಇದರಿಂದ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ತೊಂದರೆ/ಅಡಚಣೆ ಉಂಟಾಗಿದೆ ಎಂದು ನಿವಾಸಿಗಳು ತಿಳಿಸಿದರು.

ಹಿಂದಿನ ವಾರ್ಡ್ ಸದಸ್ಯರು ಹಕ್ಕುಪತ್ರ ನೀಡುವ ಭರವಸೆ ನೀಡಿ ನಿವಾಸಿಗಳಿಂದ ಹಣ ಪಡೆದು ವಂಚಿಸಿರುವುದಾಗಿ ಆರೋಪಿಸಿದರು, ತಕ್ಷಣವೇ ಕೊಳಚೆ ನಿರ್ಮೂಲನಾ ಮಂಡಳಿಯೊಂದಿಗೆ ಸಮನ್ವಯ ಸಾಧಿಸಿ ಹಕ್ಕುಪತ್ರ ವಿತರಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ, ಮುಂದಿನ 15 ದಿನಗಳೊಳಗೆ ಸಮಸ್ಯೆ ಪರಿಹರಿಸದಿದ್ದಲ್ಲಿ ನಗರಸಭೆ ಎದುರು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರಾದ ಯಲ್ಲಪ್ಪ ತಿಮ್ಮಾಪೂರ ಮತ್ತು ಮಲ್ಲಿಕಾರ್ಜುನ ಬಾಜಿ, ಶಿವಾನಂದ ಆನಿಗೋಳ, ಮಹಾಂತೇಶ ಹಂಪಣ್ಣವರ, ಉಮೇಶ ಬಾಗೋಜಿ, ಬಸವರಾಜ ಅಂಕಲಗಿ, ಕುಮಾರ ಬಿರ್ಜಿ, ರಮೇಶ್ ಪತ್ತಾರ ಸೇರಿದಂತೆ ಬಸವೇಶ್ವರ ಆಶ್ರಯ ನಗರದ ನಿವಾಸಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ