Monday, May 11, 2026
Homeಜಿಲ್ಲಾ ಸುದ್ದಿಗಳುಅನಧಿಕೃತ RO ಘಟಕಗಳಿಗೆ ಪುರಸಭೆಯಿಂದ ನೋಟಿಸ್ – ದಾಖಲೆ ಸಲ್ಲಿಸದಿದ್ದರೆ ಮುಚ್ಚುವ ಎಚ್ಚರಿಕೆ

ಅನಧಿಕೃತ RO ಘಟಕಗಳಿಗೆ ಪುರಸಭೆಯಿಂದ ನೋಟಿಸ್ – ದಾಖಲೆ ಸಲ್ಲಿಸದಿದ್ದರೆ ಮುಚ್ಚುವ ಎಚ್ಚರಿಕೆ

ಲಿಂಗಸುಗೂರು, ಏ.06:
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ RO Plant / ನೀರು ಶುದ್ಧೀಕರಣ ಘಟಕಗಳ ವಿರುದ್ಧ ಪುರಸಭೆ ಆಡಳಿತ ಕ್ರಮ ಕೈಗೊಳ್ಳಲು ಮುಂದಾಗಿದೆ.
ವಾರ್ಡ್ ನಂ. 18ರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ನೀರು ಶುದ್ಧೀಕರಣ ಘಟಕಗಳು ಪುರಸಭೆಯ ಅಗತ್ಯ ಅನುಮತಿಗಳಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಇತ್ತೀಚೆಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ ಪುರಸಭೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ದಿನಾಂಕ 02 ಏಪ್ರಿಲ್ ರಂದು ಪುರಸಭೆ ಮುಖ್ಯಾಧಿಕಾರಿಗಳು, ಕಿರಿಯ ಅಭಿಯಂತರರು ಮತ್ತು ಕಿರಿಯ ಆರೋಗ್ಯ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಘಟಕಗಳಿಗೆ ಸಂಬಂಧಿಸಿದ ಮಾಲೀಕರು ಸ್ಥಳದಲ್ಲಿ ಲಭ್ಯವಿರಲಿಲ್ಲ. ಜೊತೆಗೆ, ಘಟಕಗಳಿಗೆ ಅಗತ್ಯವಾದ ಯಾವುದೇ ದಾಖಲೆಗಳು ಲಭ್ಯವಿಲ್ಲವೆಂದು ಅಧಿಕಾರಿಗಳಿಗೆ ತಿಳಿದು ಬಂದಿದೆ.
ಈ ಹಿನ್ನೆಲೆ, ಪುರಸಭೆ ವತಿಯಿಂದ ಸಂಬಂಧಿಸಿದ ಘಟಕಗಳಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, 03 ರಿಂದ 05 ದಿನಗಳೊಳಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಉದ್ದಿಮೆ ಪರವಾನಿಗೆ, ನೀರಿನ ಗುಣಮಟ್ಟ ಪರೀಕ್ಷಾ ವರದಿ, ಆರೋಗ್ಯ ಇಲಾಖೆಯ ಅನುಮತಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ.
ನಿಗದಿತ ಅವಧಿಯೊಳಗೆ ದಾಖಲೆಗಳನ್ನು ಸಲ್ಲಿಸದಿದ್ದಲ್ಲಿ, ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಪುರಸಭೆ ಕಾಯ್ದೆ 1964ರ ಪ್ರಕಾರ ಯಾವುದೇ ಮುನ್ಸೂಚನೆ ನೀಡದೇ ಘಟಕಗಳನ್ನು ಮುಚ್ಚುವ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ನೀರು ಶುದ್ಧೀಕರಣ ಘಟಕಗಳಿಂದ ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ, ಪುರಸಭೆ ಕ್ರಮಕ್ಕೆ ಸಾರ್ವಜನಿಕರಿಂದ ಸಹ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹೆಚ್ಚಿನ ಸುದ್ದಿ