Thursday, April 16, 2026
Homeಅಂತರರಾಜ್ಯತಂದೆ-ಮಗನ ಲಾಕಪ್ ಡೆತ್ ಕೇಸ್, 9 ಪೊಲೀಸರಿಗೆ ಗಲ್ಲು ಶಿಕ್ಷೆ ಹಾಗೂ ₹1.40 ಕೋಟಿ ದಂಡ

ತಂದೆ-ಮಗನ ಲಾಕಪ್ ಡೆತ್ ಕೇಸ್, 9 ಪೊಲೀಸರಿಗೆ ಗಲ್ಲು ಶಿಕ್ಷೆ ಹಾಗೂ ₹1.40 ಕೋಟಿ ದಂಡ

ಮಧುರೈ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತಂಕುಳಂನ ತಂದೆ-ಮಗನ ‘ಕಸ್ಟೊಡಿಯಲ್ ಡೆತ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ ಜಿಲ್ಲಾ ನ್ಯಾಯಾಲಯ ಸೋಮವಾರ ಐತಿಹಾಸಿಕ ತೀರ್ಪು ನೀಡಿದೆ. ವಿಚಾರಣೆಯ ಹೆಸರಿನಲ್ಲಿ ಅಮಾನವೀಯ ಚಿತ್ರಹಿಂಸೆ ನೀಡಿ ಇಬ್ಬರ ಪ್ರಾಣ ತೆಗೆದ ಇನ್‌ಸ್ಪೆಕ್ಟರ್ ಸೇರಿದಂತೆ ಒಂಬತ್ತು ಪೊಲೀಸರಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

ಏನಿದು ಪ್ರಕರಣ?:
2020ರ ಜೂನ್ 19ರಂದು ಕೋವಿಡ್ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಮೊಬೈಲ್ ಅಂಗಡಿ ತೆರೆದಿದ್ದಾರೆ ಎಂಬ ಸುಳ್ಳು ಆರೋಪದ ಮೇಲೆ ವ್ಯಾಪಾರಿ ಪಿ. ಜಯರಾಜ್ ಮತ್ತು ಅವರ ಪುತ್ರ ಜೆ. ಬೆನಿಕ್ ಅವರನ್ನು ಸಾತಂಕುಳಂ ಪೊಲೀಸರು ಬಂಧಿಸಿದ್ದರು. ಠಾಣೆಯಲ್ಲಿ ಅಂದು ರಾತ್ರಿ ಪೊಲೀಸರು ಅವರಿಗೆ ಹಿಂಸೆ ನೀಡಿದ್ದರು. ತೀವ್ರ ಹಲ್ಲೆಗೊಳಗಾಗಿದ್ದ ಬೆನಿಕ್ ಜೂನ್ 22ರಂದು ಹಾಗೂ ತಂದೆ ಜಯರಾಜ್ ಜೂನ್ 23ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಈ ಪ್ರಕರಣವನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ’ ಎಂದು ಪರಿಗಣಿಸಿದ ನ್ಯಾಯಾಧೀಶ ಜಿ. ಮುತ್ತುಕುಮಾರನ್ ಅವರು, ‘ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ರಕ್ಷಕರೇ ಭಕ್ಷಕರಾಗಿ ವರ್ತಿಸಿರುವುದು ಸಮಾಜದ ಆತ್ಮ ಸಾಕ್ಷಿಯನ್ನು ಕಲಕಿದೆ. ಅಮಾಯಕರ ಮೇಲೆ ನಡೆಸಿದ ಈ ಹಲ್ಲೆಯನ್ನು ಓದಿದರೆ ಹೃದಯವೇ ನಡುಗುತ್ತದೆ’ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸರು ಸಂತ್ರಸ್ತ ಕುಟುಂಬಕ್ಕೆ ಒಟ್ಟು 1.40 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಕೋರ್ಟ್ ಆದೇಶಿಸಿದೆ. ಗಲ್ಲು ಶಿಕ್ಷೆಗೆ ಒಳಗಾದವರು: ಇನ್‌ಸ್ಪೆಕ್ಟರ್ ಶ್ರೀಧರ್, ಸಬ್ ಇನ್‌ಸ್ಪೆಕ್ಟರ್‌ಗಳಾದ ಬಾಲಕೃಷ್ಣನ್ ಮತ್ತು ರಘು ಗಣೇಶ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಮುರುಗನ್ ಮತ್ತು ಸಾಮಿ ದೊರೈ, ಕಾನ್‌ಸ್ಟೆಬಲ್‌ಗಳಾದ ಮುತ್ತುರಾಜಾ, ಚೆಲ್ಲದೊರೈ, ಥಾಮಸ್ ಫ್ರಾನ್ಸಿಸ್ ಮತ್ತು ವೇಲು ಗಲ್ಲು ಶಿಕ್ಷೆಗೆ ಗುರಿಯಾದವರು. ಪ್ರಕರಣದಲ್ಲಿದ್ದ ಮತ್ತೊಬ್ಬ ಆರೋಪಿ ಸ್ಪೆಷಲ್ ಸಬ್ ಇನ್ಸ್ ಪೆಕ್ಟರ್ ಪಾಲ್ದುರೈ ವಿಚಾರಣೆಯ ಹಂತದಲ್ಲೇ ಸಾವನ್ನಪ್ಪಿದ್ದರು.

ಆರು ವರ್ಷಗಳ ಹೋರಾಟ ಬಳಿಕ ನ್ಯಾಯ:
ಈ ಘಟನೆ ಸಂಭವಿಸಿದಾಗ ದೇಶಾದ್ಯಂತ ಪೊಲೀಸರ ದೌರ್ಜನ್ಯದ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಮದ್ರಾಸ್ ಹೈಕೋರ್ಟ್‌ ಉಸ್ತುವಾರಿಯಲ್ಲಿ ಸಿಬಿಐ ನಡೆಸಿದ ಸುದೀರ್ಘ ತನಿಖೆಯಲ್ಲಿ 100ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆರು ವರ್ಷಗಳ ನಂತರ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಕ್ಕಿದ್ದು, ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಪೊಲೀಸರಿಗೆ ಈ ತೀರ್ಪು ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ.

ಮಹಿಳಾ ಕಾನ್‌ಸ್ಟೆಬಲ್‌ ಸಾಕ್ಷಿ:
ಆರಂಭದಲ್ಲಿ ಸ್ಥಳೀಯ ಪೊಲೀಸರು ಸಾಕ್ಷ್ಯನಾಶ ಮಾಡಲು ತೀವ್ರ ಪ್ರಯತ್ನ ನಡೆಸಿದ್ದರು. ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಿಹಾಕಲಾಗಿತ್ತು. ಆದರೆ, ಠಾಣೆಯಲ್ಲಿದ್ದ ಮಹಿಳಾ ಕಾನ್‌ಸ್ಟೆಬಲ್ ಒಬ್ಬರು ಸಿಬಿಐಗೆ ನೀಡಿದ ಹೇಳಿಕೆ ಪ್ರಕರಣಕ್ಕೆ ದೊಡ್ಡ ತಿರುವು ನೀಡಿತು. ತಂದೆ-ಮಗನನ್ನು ಪೊಲೀಸರು ರಾತ್ರಿಯಿಡೀ ಬೆತ್ತಲೆಗೊಳಿಸಿ, ಲಾಠಿಗಳಿಂದ ಅಮಾನವೀಯವಾಗಿ ಹೊಡೆದಿದ್ದರು. ಟೇಬಲ್ ಮತ್ತು ಗೋಡೆಗಳ ಮೇಲೆ ರಕ್ತದ ಕಲೆಗಳಾಗಿದ್ದವು ಎಂದು ಮಹಿಳಾ ಕಾನ್‌ಸ್ಟೆಬಲ್‌ ವಿವರಿಸಿದ್ದರು.

ಸಂಪಾದಕರು: ರಾಮಚಂದ್ರಪ್ಪ ಪೂಜೇರ (ಚನ್ನಮ್ಮನ ಕಿತ್ತೂರು)

ಹೆಚ್ಚಿನ ಸುದ್ದಿ